ತನ್ನ ಸಂಬಂಧಿಯನ್ನು ಕೊಲೆ ಮಾಡಿದ ಯುವತಿಯನ್ನು ಪೊಲೀಸರು ಬಂಧಿಸದೆ ಮನೆಗೆ ಕಳಿಸಿದ್ದೇಕೆ?

Update: 2021-01-07 18:30 GMT

ಚೆನ್ನೈ: ಮನೆ ಸಮೀಪ ಬಹರ್ದೆಸೆಗೆ ತೆರಳಿದ್ದಾಗ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಸಹೋದರ ಸಂಬಂಧಿಯನ್ನು ಯುವತಿಯೊಬ್ಬಳು ಚಾಕುವಿನಿಂದ ಇರಿದು ಕೊಂದಿರುವ ಘಟನೆ ತಿರುನಲ್ಲೂರು ಜಿಲ್ಲೆಯ ಶೋಲವರಮ್ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿದೆ.

24ರ ವಯಸ್ಸಿನ ಸಂಬಂಧಿಯೇ ಕುಡಿದ ಅಮಲಿನಲ್ಲಿ ಕೈಯಲ್ಲಿ ಚಾಕು ಹಿಡಿದು ತನ್ನ ಮೇಲೆ ಅತ್ಯಾಚಾರ ನಡೆಸಲು ಮುಂದಾದಾಗ 19ರ ಹರೆಯದ ಯುವತಿಯು ಆತನನ್ನು ತಳ್ಳಿದ್ದಾಳೆ. ಚಾಕು ಕೆಳಗೆ ಬಿದ್ದಾಗ ತಕ್ಷಣವೇ ಎತ್ತಿಕೊಂಡು ಸಂಬಂಧಿಯ ಕುತ್ತಿಗೆ ಹಾಗೂ ಮುಖಕ್ಕೆ ಇರಿದಿದ್ದಾಳೆ. ಬಳಿಕ ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ.

“ಯುವತಿ ಏನು ನಡೆಯಿತ್ತೆಂಬ ಕುರಿತು ನಿಖರವಾಗಿ ವಿವರಿಸಿದ್ದಳು. ಇದರಿಂದ ಪೊಲೀಸರಿಗೆ ಶಾಕ್ ಆಯಿತು. ಹುಡುಗಿ ತುಂಬಾ ಧೈರ್ಯವಂತೆಯಾಗಿದ್ದಳು. ಆಕೆಯ  ಹೇಳಿಕೆಯಲ್ಲಿ ಯಾವುದೇ ಹಿಂಜರಿಕೆ ಇರಲಿಲ್ಲ'' ಎಂದು ತಿರುನಲ್ಲೂರು ಪೊಲೀಸ್ ಅಧೀಕ್ಷಕ ಪಿ.ಅರವಿಂದನ್ ಹೇಳಿದ್ದಾರೆ.

ಪೊಲೀಸರ ಪ್ರಕಾರ ಆರೋಪಿಯು ಕಳೆದ ಕೆಲವು ತಿಂಗಳುಗಳಿಂದ ಯುವತಿಗೆ ಕಿರುಕುಳ ನೀಡುತ್ತಿದ್ದ. ಈ ವಿಚಾರವನ್ನು ಯುವತಿ ತನ್ನ ತಾಯಿಗೆ ತಿಳಿಸಿದ್ದಳು. ಆರೋಪಿಗೆ ಎಚ್ಚರಿಕೆಯನ್ನು ನೀಡಲಾಗಿತ್ತು.

ಪ್ರಕರಣದ ಕುರಿತು ಪೊಲೀಸರು ಉಪ ಪೊಲೀಸ್ ಅಧೀಕ್ಷಕಿ ಕಲ್ಪನಾ ದತ್ತಗೆ ತಿಳಿಸಿದರು. ಅವರು ಎಸ್ಪಿ ಅರವಿಂದನ್ ಗೆ ಮಾಹಿತಿ ನೀಡಿದ್ದರು.

“ಕಲ್ಪನಾದತ್ತ ನನಗೆ ಕರೆ ಮಾಡಿದ ಬಳಿಕ ನಾನು ಪ್ರಾಸಿಕ್ಯೂಶನ್ ಉಪ ನಿರ್ದೇಶಕರಿಗೆ ಮಾಹಿತಿ ನೀಡಿದೆ. ಈ ಪ್ರಕರಣ ಸೆಕ್ಷನ್ 100 ಸಾಮಾನ್ಯ ವಿನಾಯಿತಿಗಳ ಅಡಿಯಲ್ಲಿ ಬರುತ್ತದೆ. ಆತ್ಮರಕ್ಷಣೆಯ ಸಂದರ್ಭಗಳಲ್ಲಿ ಇದನ್ನು ಅನ್ವಯಿಸಬಹುದು ಎಂದು ನನಗೆ ತಿಳಿದಿತ್ತು. ಆದರೆ ಎಫ್ ಐಆರ್ ಹೇಗೆ ಸಲ್ಲಿಸುವುದು ಎಂಬ ಬಗ್ಗೆ  ನಾವು ಅರ್ಥಮಾಡಿಕೊಳ್ಳಬೇಕಾಗಿತ್ತು’’ಎಂದು ಅರವಿಂದನ್ ಹೇಳಿದರು.

ಆತ್ಮ ರಕ್ಷಣೆ ಸಂದರ್ಭ ಸಾವು ಸಂಭವಿಸಿದಲ್ಲಿ(ಅತ್ಯಾಚಾರ ಅಥವಾ ಹತ್ಯೆಯನ್ನು ತಡೆಯಲು ಅಥವಾ ತಪ್ಪಿಸಿಕೊಳ್ಳಲು)ಭಾರತೀಯ ದಂಡ ಸಂಹಿತೆಯ ಸೆಕ್ಷನ್ 100ನ್ನು ಅನ್ವಯಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ಈ ಕೃತ್ಯ ಎಸಗಿದ ವ್ಯಕ್ತಿಯನ್ನು ಕೊಲೆಗೆ ಸಂಬಂಧಿಸಿ ವಿಚಾರಣೆ ನಡೆಸುವ ಅಗತ್ಯವಿಲ್ಲ. ಬಂಧನವೂ ಸಹ ಅಗತ್ಯವಿಲ್ಲ ಎಂದು ಹೈಕೋರ್ಟ್ ಈ ಹಿಂದೆ ಪ್ರತಿಪಾದಿಸಿದೆ. ನಾವು ಪೂರ್ವ ನಿದರ್ಶನಗಳನ್ನು ಹುಡುಕಿದಾಗ ಮಾಜಿ ಎಸ್ಪಿ ಅಸ್ರ ಗರ್ಗ್ ನಿಭಾಯಿಸಿದ್ದ ಮಧುರೈ ಪ್ರಕರಣವೊಂದು ನೆನಪಿಗೆ ಬಂತು. ಆ ಪ್ರಕರಣದಲ್ಲಿ ಆತ್ಮ ರಕ್ಷಣೆಯನ್ನು ಅನ್ವಯಿಸಲಾಗಿತ್ತು ಎಂದು ಎಸ್ಪಿ ಅರವಿಂದನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News