ಬೆಳ್ತಂಗಡಿ: ಕಟ್ಟಿಗೆಯಿಂದ ಹೊಡೆದು ಪತ್ನಿಯ ಕೊಲೆ; ಆರೋಪಿ ಪತಿಯ ಬಂಧನ
ಬೆಳ್ತಂಗಡಿ, ಜ.8: ಮದ್ಯದ ಅಮಲಿನಲ್ಲಿ ಪತಿಯು ಪತ್ನಿಯನ್ನು ಹೊಡೆದು ಕೊಲೆಗೈದ ಕೃತ್ಯವೊಂದು ತಾಲೂಕಿನ ನೆರಿಯಾ ಗಂಡಿಬಾಗಿಲು ಸಮೀಪ ಗುರುವಾರ ರಾತ್ರಿ ನಡೆದಿರುವ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆರಿಯಾ ಗ್ರಾಮದ ಗಂಡಿಬಾಗಿಲು ನಿವಾಸಿ ಸೌಮ್ಯಾ ಫ್ರಾನ್ಸಿಸ್ (40) ಕೊಲೆಯಾದವರು. ಈಕೆಯ ಪತಿ ಜಾನ್ಸನ್ (47) ಕೊಲೆ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಪತಿ-ಪತ್ನಿ ಇಬ್ಬರೂ ರಬ್ಬರ್ ಟ್ಯಾಪಿಂಗ್ ವೃತ್ತಿ ನಿರ್ವಹಿಸುತ್ತಿದ್ದು, ಪ್ರತಿನಿತ್ಯ ಇವರೊಳಗೆ ಜಗಳ ಸಾಮಾನ್ಯವಾಗಿದ್ದು, ಗುರುವಾರ ರಾತ್ರಿ ಇದು ವಿಕೋಪಕ್ಕೆ ತಿರುಗಿದ್ದು, ಪತಿ ಜಾನ್ಸನ್ ಕಟ್ಟಿಗೆಯ ತುಂಡಿನಲ್ಲಿ ಸೌಮ್ಯಾರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.
ರಾತ್ರಿ 11 ಗಂಟೆ ವೇಳೆ ಈ ಘಟನೆ ಸಂಭವಿಸಿದ್ದು, ತೀವ್ರ ಹಲ್ಲೆಗೊಳಗಾದ ಸೌಮ್ಯಾ ಕುಸಿದುಬಿದ್ದರೆನ್ನಲಾಗಿದೆ. ಇದರಿಂದ ಗಾಬರಿಗೊಂಡ ಜಾನ್ಸನ್ ತಕ್ಷಣ ಅವರನ್ನು ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಕೊಂಡೊಯ್ಯಬೇಕಾದರೆ ಸೌಮ್ಯಾ ಕೊನೆಯುಸಿರೆಳೆದರೆನ್ನಲಾಗಿದೆ.
ಈ ಬಗ್ಗೆ ಸೌಮ್ಯಾ ಅವರ ಸಹೋದರ ಸನೋಜ್ ಫ್ರಾನ್ಸಿಸ್ ಧರ್ಮಸ್ಥಳ ಠಾಣೆಗೆ ನೀಡಿದ ದೂರಿನಂತೆ ಜಾನ್ಸನ್ ನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಈ ದಂಪತಿಗೆ 10 ವರ್ಷದ ಹೆಣ್ಣು ಮಗುವೊಂದಿದೆ.