ದೇಶದ್ರೋಹ ಪ್ರಕರಣ: ಪೊಲೀಸ್ ವಿಚಾರಣೆಗೆ ಹಾಜರಾದ ಕಂಗನಾ ರಣಾವತ್,ಸಹೋದರಿ ರಂಗೋಲಿ

Update: 2021-01-08 09:48 GMT

ಮುಂಬೈ: ನಟಿ ಕಂಗನಾ ರಣಾವತ್ ಹಾಗೂ ಆಕೆಯ ಸಹೋದರಿ ತಮ್ಮ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಗೆ ತೆರಳಿ ತಮ್ಮ ಹೇಳಿಕೆಯನ್ನು ದಾಖಲಿಸಿದರು.
ಕಂಗನಾ ಹಾಗೂ ಆಕೆಯ ಸಹೋದರಿ ರಂಗೋಲಿ ಚಾಂದೇಲ್ ಗೆ ಬಂಧನದಿಂದ ಮಧ್ಯಂತರ ರಕ್ಷಣೆ ಜಾರಿ ಮಾಡಿರುವ ಬಾಂಬೆ ಹೈಕೋರ್ಟ್ ಶುಕ್ರವಾರ ಮುಂಬೈ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. 
ರಣಾವತ್ ಗೆ ವೈ-ಪ್ಲಸ್ ಭದ್ರತೆಯನ್ನು ಒದಗಿಸಲಾಗಿದ್ದು, ಮಧ್ಯಾಹ್ನ 1 ಗಂಟೆ ಸುಮಾರಿಗೆ ತನ್ನ ವಕೀಲದೊಂದಿಗೆ ಬಾಂದ್ರಾ ಪೊಲೀಸ್ ಸ್ಟೇಶನ್‍ಗೆ ಆಗಮಿಸಿದರು. ಪ್ರಕರಣದಲ್ಲಿ ತನ್ನ ಹೇಳಿಕೆಗಳನ್ನು ದಾಖಲಿಸುವಂತೆ ಮುಂಬೈ ಪೊಲೀಸರು ಕಂಗನಾಗೆ ಮೂರು ಬಾರಿ ನೋಟಿಸ್ ಗಳನ್ನು ನೀಡಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಗಳನ್ನು ಹಾಕುವ ಮೂಲಕ ದ್ವೇಷ ಹಾಗೂ ಕೋಮು ಉದ್ವೇಗ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆಂದು ಅಕ್ಟೋಬರ್ ನಲ್ಲಿ ದೂರು ದಾಖಲಾದ ಬಳಿಕ ಬಾಂದ್ರಾ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದರು. ಬಾಂದ್ರಾದ ಮ್ಯಾಜಿಸ್ಟೇಟ್ ನ್ಯಾಯಾಲಯದ ಆದೇಶದ ಬಳಿಕ ಈ ಇಬ್ಬರ ವಿರುದ್ಧ ಪ್ರಥಮ ಮಾಹಿತಿ ವರದಿ(ಎಫ್ ಐಆರ್)ದಾಖಲಾಗಿತ್ತು.
 ಅಕ್ಟೋಬರ್ 17 ರಂದು ಮ್ಯಾಜಿಸ್ಟೇಟ್ ಹೊರಡಿಸಿದ ಆದೇಶ ಅನುಸರಿಸಿ ಈ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 
ಕಂಗನಾ ಹಾಗೂ ಆಕೆಯ ಸಹೋದರಿ ಎಫ್ ಐಆರ್ ನ್ನು ರದ್ದುಪಡಿಸುವಂತೆ ಕೋರಿ ಬಾಂಬೆ ಹೈಕೋರ್ಟಿನ ಮೊರೆ ಹೋಗಿದ್ದರು
ವಿಚಾರಣೆ ಸಮಯದಲ್ಲಿ ಜಸ್ಟಿಸ್ ಗಳಾದ ಎಸ್.ಎಸ್.ಶಿಂಧೆ ಹಾಗೂ ಎಂಎಸ್ ಕಾರ್ನಿಕ್ ಅವರಿದ್ದ ವಿಭಾಗೀಯ ಪೀಠವು ಈ ಪ್ರಕರಣದಲ್ಲಿ ದೇಶದ್ರೋಹದ ಆರೋಪವನ್ನು ಹೊರಿಸಿದ್ದಕ್ಕಾಗಿ ಪೊಲೀಸರನ್ನು ಪ್ರಶ್ನಿಸಿತು. ದೇಶದ್ರೋಹ ಪ್ರಕರಣವನ್ನು ತಪ್ಪಾಗಿ ಹೇರಲಾಗಿದೆ ಎಂದು ಅಭಿಪ್ರಾಯಪಟ್ಟಿತು. ನ್ಯಾಯಾಲಯವು ಜ.11ಕ್ಕೆ ಅರ್ಜಿಯನ್ನು ವಿಚಾರಣೆ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News