×
Ad

"ಠಾಕೂರ್‌ ಎಂದು ಬರೆದ ಶೂ ತಯಾರಕರನ್ನು ಪೊಲೀಸರು ಏನೂ ಮಾಡಲಿಲ್ಲ, ಮಾರಿದ ನನ್ನನ್ನು ಮಾತ್ರ ಜೈಲಿನಲ್ಲಿಟ್ಟರು"

Update: 2021-01-08 17:04 IST

ಲಕ್ನೋ, ಜ.08:  "ಠಾಕೂರ್ʼ‌ ಎಂದು ಹಿಂಬದಿಯಲ್ಲಿ ಬರೆಯಲಾಗಿದ್ದ ಶೂ ಮಾರಾಟ ಮಾಡುತ್ತಿದ್ದ ತಪ್ಪಿಗೆ ಉತ್ತರ ಪ್ರದೇಶದ ಬುಲಂದ್‍ಶಹರ್‍ನ  ಚಪ್ಪಲಿ ವ್ಯಾಪಾರಿ ನಾಸಿರ್ ಎರಡು ದಿನ ಪೊಲೀಸ್ ಕಸ್ಟಡಿಯಲ್ಲಿ ಕಳೆಯುವಂತಾಯಿತಲ್ಲದೆ ಸಾರ್ವಜನಿಕವಾಗಿ ಸಾಕಷ್ಟು ಅವಮಾನವನ್ನೂ ಎದುರಿಸುವಂತಾಯಿತು ಎಂದು thequint.com ವರದಿ ಮಾಡಿದೆ.

"ಈ ಶೂ ಮಾರಾಟದಿಂದ ಇಷ್ಟು ದೊಡ್ಡ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ತಿಳಿದಿದ್ದರೆ ನಾನು ಅವುಗಳನ್ನು ಮಾರಾಟ ಮಾಡುತ್ತಲೇ ಇರಲಿಲ್ಲ," ಎಂದು ಆತ ಹೇಳುತ್ತಾನೆ.

"ಠಾಕೂರ್ʼ‌ ಮೇಲ್ಜಾತಿಗೆ ಸೇರಿದ ಹಿಂದುಗಳಾಗಿದ್ದು ಬಹಳ ಪ್ರಭಾವಿಗಳು ಎಂದೇ ತಿಳಿಯಲ್ಪಡುತ್ತಾರೆ.  ಠಾಕುರ್ ಎಂದು ಬರೆದಿರುವ ಶೂ ಮಾರಾಟ ಮಾಡಿ ಸಮುದಾಯವೊಂದರ ಭಾವನೆಗೆ ಧಕ್ಕೆ ತಂದಿದ್ದಾನೆಂದು ಆರೋಪಿಸಿ ಆತನ ವಿರುದ್ಧ ಬಜರಂಗದಳ ನಾಯಕನೊಬ್ಬ ದೂರು ನೀಡಿದ್ದ. ದೂರಿನಲ್ಲಿ  ಬರಯಲಾದಂತೆ `ಗಲಭೆ ಪ್ರಚೋದನೆ' ಆರೋಪವನ್ನು ಎಫ್‍ಐಆರ್‍ನಿಂದ ಪೊಲೀಸರು ತೆಗೆದು ಹಾಕಿದ್ದರೂ ಆತನನ್ನು ವಶಪಡಿಸಿಕೊಂಡು ಎರಡು ದಿನ ಕಸ್ಟಡಿಯಲ್ಲಿರಿಸಿದ್ದರು ಎಂದು ವರದಿ ತಿಳಿಸಿದೆ.

"ಗಝಿಯಾಬಾದ್‍ನ ಸಂಜಯ್ ಗೋಯೆಲ್ ಎಂಬ ಪೂರೈಕೆದಾರರೊಬ್ಬರಿಂದ ಈ ಶೂಗಳನ್ನು  ಖರೀದಿಸಿದ್ದೆ. ನಾನು ಕಳೆದ 25-30 ದಿನಗಳಿಂದ ಈ ಕೆಲಸ ಮಾಡುತ್ತಿದ್ದೇನೆ. ತನಿಖೆಯ ಭಾಗವಾಗಿ ಪೊಲೀಸರು ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿ "ಠಾಕೂರ್ʼ‌ ಬ್ರ್ಯಾಂಡ್‍ನ 16 ಜತೆ ಶೂಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಶೂ ತಯಾರಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರು ನನ್ನನ್ನು ಎರಡು ದಿನಗಳ ಕಾಲ ಕಸ್ಟಡಿಯಲ್ಲಿರಿಸಿದ್ದರು," ಎಂದು ಆತ ಬೇಸರ ವ್ಯಕ್ತಪಡಿಸುತ್ತಾನೆ.

"ಅವರು ನನ್ನ ಜತೆ ಕೆಟ್ಟದಾಗಿ ನಡೆದುಕೊಳ್ಳಲಿಲ್ಲ. ಆದರೆ ಶೂ ಪೂರೈಕೆದಾರನ ಬಳಿ ತೆರಳಲೆಂದು ಗಾಝಿಯಾಬಾದ್‍ಗೆ ನನ್ನನ್ನು ಕರೆದುಕೊಂಡು ಹೋಗುವ ವೇಳೆ ಒಂದೆರಡು ಬಾರಿ ಕೆನ್ನೆಗೆ ಬಾರಿಸಿದ್ದಾರೆ," ಎಂದು ಆತ ಹೇಳುತ್ತಾನೆ.

ಈ ನಿರ್ದಿಷ್ಟ ಶೂ ಯಾವ ಕಂಪೆನಿ  ತಯಾರಿಸಿದೆ ಎಂದು ತಿಳಿದಿಲ್ಲವಾದರೂ ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ಆಗ್ರಾದ "ಠಾಕೂರ್ʼ‌ ಫೂಟ್ವೇರ್ ಕಂಪೆನಿ  ತಯಾರಿಕಾ ಸಂಸ್ಥೆ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಕಂಪೆನಿಯ ಮಾಲಿಕ ನರೇಂದರ್ ತ್ರಿಲೋಕನಿ ಅವರು ದಿ ಖ್ವಿಂಟ್ ಜತೆ ಮಾತನಾಡುತ್ತಾ "ನಾವು 40 ವರ್ಷ ಹಳೆಯ ಕಂಪೆನಿ. ನಮ್ಮ ಲಾಂಛನ ಟಿಎಫ್‍ಸಿ ಆಗಿದೆ ಹಾಗೂ ನಾವು "ಠಾಕೂರ್ʼ‌ ಎಂದು ಶೂಗಳಲ್ಲಿ ಬರೆಯುವುದಿಲ್ಲ. ಬುಲಂದ್‍ಶಹರ್‍ನ ಮಾರಾಟಗಾರ ಮಾರಾಟ ಮಾಡಿದ್ದ ಶೂ ನಮ್ಮ ಬ್ರ್ಯಾಂಡ್‍ನದ್ದಲ್ಲ," ಎಂದು ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News