ಭಯೋತ್ಪಾದನೆಗೆ ಹಣ: ಉಗ್ರ ಲಾಖ್ವಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದ ಪಾಕ್ ನ್ಯಾಯಾಲಯ

Update: 2021-01-08 16:10 GMT

ಇಸ್ಲಾಮಾಬಾದ್ (ಪಾಕಿಸ್ತಾನ), ಜ. 8: ಭಯೋತ್ಪಾದನೆಗೆ ಹಣಕಾಸು ಪೂರೈಸಿದ ಪ್ರಕರಣದಲ್ಲಿ ಲಷ್ಕರೆ ತಯ್ಯಬ ಭಯೋತ್ಪಾದಕ ಝಕೀವುರ್ರಹ್ಮಾನ್ ಲಾಖ್ವಿಗೆ ಪಾಕಿಸ್ತಾನದ ನ್ಯಾಯಾಲಯವೊಂದು ಶುಕ್ರವಾರ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 3 ಲಕ್ಷ ಪಾಕಿಸ್ತಾನಿ ರೂಪಾಯಿ (ಸುಮಾರು 1.36 ಲಕ್ಷ ಭಾರತೀಯ ರೂಪಾಯಿ) ದಂಡ ವಿಧಿಸಿದೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

 ಭಯೋತ್ಪಾದನೆಗೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ಪಾಕಿಸ್ತಾನದ ಪಂಜಾಬ್ ಪ್ರಾಂತದ ಕೋಟ್ ಲಾಖ್‌ಪತ್‌ನಲ್ಲಿ ಆಸ್ಪತ್ರೆಯೊಂದನ್ನು ನಡೆಸುತ್ತಿರುವುದಕ್ಕಾಗಿ, ಪಾಕಿಸ್ತಾನದ ಭಯೋತ್ಪಾದಕ ನಿಗ್ರಹ ಕಾಯ್ದೆಯ ಮೂರು ಪರಿಚ್ಛೇದಗಳಡಿಯಲ್ಲಿ ಲಾಖ್ವಿಗೆ ಶಿಕ್ಷೆ ವಿಧಿಸಲಾಗಿದೆ.

ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಯಲ್ಲಿರುವ ಲಾಖ್ವಿಯನ್ನು ಪಾಕಿಸ್ತಾನದ ಪಂಜಾಬ್ ಭಯೋತ್ಪಾದಕ ನಿಗ್ರಹ ಇಲಾಖೆಯು ಜನವರಿ 2ರಂದು ಬಂಧಿಸಿತ್ತು.

61 ವರ್ಷದ ಲಾಖ್ವಿ 2008ರ ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರರ ಪೈಕಿ ಒಬ್ಬನಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿ ಅವನನ್ನು ಮೊದಲು 2008ರಲ್ಲಿ ಬಂಧಿಸಲಾಗಿತ್ತು. ಆದರೆ, ಬಳಿಕ ಅವನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News