ಬೈಡನ್‌ ಪ್ರತಿಜ್ಞಾ ಸ್ವೀಕಾರ ಸಮಾರಂಭದಲ್ಲಿ ನಾನು ಭಾಗವಹಿಸುವುದಿಲ್ಲ: ಡೊನಾಲ್ಡ್‌ ಟ್ರಂಪ್‌ ಹತಾಶೆಯ ಹೇಳಿಕೆ

Update: 2021-01-08 16:48 GMT

ವಾಷಿಂಗ್ಟನ್‌ ಡಿಸಿ,ಜ.08: ಅಮೆರಿಕಾದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಡೊನಾಲ್ಡ್‌ ಟ್ರಂಪ್‌ ಅಧಿಕಾರದಿಂದ ಕೆಳಗಿಳಿಯಲು ಹಿಂಜರಿದಿದ್ದು ಮಾತ್ರವಲ್ಲದೇ ತಮ್ಮ ಬೆಂಬಲಿಗರನ್ನು ಪ್ರಚೋದಿಸಿದ ಕಾರಣ ಅವರು ಅಮೆರಿಕಾದ ಸಂಸತ್‌ ಮೇಲೆ ದಾಳಿ ನಡೆಸಿದ್ದರು. ಪರಿಣಾಮ ಓರ್ವ ಪೊಲೀಸ್‌ ಅಧಿಕಾರಿ ಸೇರಿದಂತೆ ಐದು ಮಂದಿ ಮೃತಪಟ್ಟಿದ್ದರು. ಇದೀಗ ಜ.20ರಂದು ನಡೆಯಲಿರುವ ನೂತನ ಅಧ್ಯಕ್ಷರ ಪ್ರತಿಜ್ಞಾ ಸ್ವೀಕಾರ ಸಮಾರಂಭಕ್ಕೆ ನಾನು ಹಾಜರಾಗುವುದಿಲ್ಲ ಎಂದು ಟ್ರಂಪ್‌ ಹೇಳಿಕೆ ನೀಡಿದ್ದಾಗಿ hindustantimes.com  ವರದಿ ತಿಳಿಸಿದೆ.

ಆಂಡ್ರೂ ಜಾನ್ಸನ್‌ ಬಳಿಕ ಪ್ರತಿಜ್ಞಾ ಸ್ವೀಕಾರ ಸಮಾರಂಭಕ್ಕೆ ಹಾಜರಾಗದೇ ಇರುವ ಮೊದಲ ಅಧ್ಯಕ್ಷರಾಗಿದ್ದಾರೆ ಡೊನಾಲ್ಡ್‌ ಟ್ರಂಪ್.‌ ಶುಕ್ರವಾರ ಟ್ವೀಟ್‌ ಮಾಡಿದ ಅವರು,  "ನನ್ನೊಂದಿಗೆ ಹಲವು ಬಾರಿ ಪ್ರಶ್ನಿಸಿದವರಿಗಾಗಿ, ನಾನು ಹೊಸ ಸರಕಾರದ ಪ್ರತಿಜ್ಞಾವಿಧಿ ಸಮಾರಂಭಕ್ಕೆ ಹಾಜರಾಗುವುದಿಲ್ಲ" ಎಂದು ಹೇಳಿಕೆ ನೀಡಿದ್ದಾರೆ. ಕೊನೆಯ ಅಧಿಕಾರದ ದಿನಗಳನ್ನು ಟ್ರಂಪ್‌ ಹೇಗೆ ವ್ಯಯಿಸಲಿದ್ದಾರೆ ಎನ್ನುವುದ ಕುರಿತು ಅವರು ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ ಎಂದು ವರದಿ ತಿಳಿಸಿದೆ.

ಟ್ರಂಪ್‌ ಅಧಿಕಾರದಿಂದ ಕೆಳಗಿಳಿಯಲು ಇನ್ನು 12 ದಿನ ಮಾತ್ರ ಬಾಕಿ ಇದ್ದು, ಕೊನೆಗೂ ತಾನು ಅಧಿಕಾರದಿಂದ ಶಾಂತಿಯುತವಾಗಿ ನಿರ್ಗಮಿಸುವುದಾಗಿ ಅವರು ತಮ್ಮ ಅಧಿಕೃತ ವೀಡಿಯೋದಲ್ಲಿ ಹೇಳಿಕೆ ನೀಡಿದ್ದರು. ಆದರೆ ದಂಗೆಯಲ್ಲಿ ಮೃತಪಟ್ಟವರ ಕುರಿತು ಒಂದೂ ಮಾತನ್ನಾಡದೇ, ಅವರಿಗೆ ಶ್ರದ್ಧಾಂಜಲಿ ತಿಳಿಸದೇ, ʼಅಮೆರಿಕಾದ ನೈಜ ದೇಶಪ್ರೇಮಿಗಳಿಗೆ ಧನ್ಯವಾದʼ ಎಂದು ತಮಗೆ ಮತ ಹಾಕಿದವರ ಕುರಿತು ಪ್ರಶಂಸಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News