ಕೇರಳ ವಿಧಾನ ಸಭೆ: ಬಜೆಟ್ ಅಧಿವೇಶನದ ಮೊದಲ ದಿನವೇ ಪ್ರತಿಭಟನೆ

Update: 2021-01-08 16:49 GMT

ಕೊಚ್ಚಿ, ಜ. 8: ಕೇರಳ ವಿಧಾನ ಸಭೆಯ ಬಜೆಟ್ ಅಧಿವೇಶನದ ಮೊದಲ ದಿನವಾದ ಶುಕ್ರವಾರ ರಾಜ್ಯಪಾಲರ ಭಾಷಣವನ್ನು ಬಹಿಷ್ಕರಿಸಿದ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಯುಡಿಎಫ್ ರಾಜ್ಯ ಸರಕಾರ ಹಾಗೂ ವಿಧಾನ ಸಭೆ ಸ್ವೀಕರ್ ವಿರುದ್ಧ ಘೋಷಣೆಗಳನ್ನು ಕೂಗಿತು.

ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ತನ್ನ ಭಾಷಣ ಆರಂಭಿಸಿ ಎಲ್‌ಡಿಎಫ್ ಸರಕಾರದ ಕಳೆದ ಐದು ವರ್ಷಗಳ ಸಾಧನೆಯನ್ನು ವಿವರಿಸುತ್ತಿರುವಾಗ ಪ್ರತಿಪಕ್ಷದ ಶಾಸಕರು ಸದನದ ಬಾವಿಗೆ ಪ್ರವೇಶಿಸಿದರು. ಅಲ್ಲದೆ, ಫಲಕ ಹಾಗೂ ಬ್ಯಾನರ್‌ಗಳನ್ನು ಪ್ರದರ್ಶಿಸಿದರು.

ಘೋಷಣೆಗಳನ್ನು ಕೂಗಿದರು. ಕೆಲವು ನಿಮಿಷಗಳ ಭಾಷಣದ ಬಳಿಕ ಖಾನ್ ಅವರು, ‘‘ನೀವು ಸಾಕಷ್ಟು ಘೋಷಣೆಗಳನ್ನು ಕೂಗಿದ್ದೀರಿ. ಈಗ ನನಗೆ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸಲು ಅವಕಾಶ ನೀಡಿ. ದಯವಿಟ್ಟು ಮಧ್ಯಪ್ರವೇಶಿಸಬೇಡಿ’’ ಎಂದು ಶಾಸಕರಲ್ಲಿ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷದ ಶಾಸಕರು ಸದನದಿಂದ ಹೊರ ನಡೆದರು ಹಾಗೂ ಕಟ್ಟಡ ಪ್ರವೇಶಿಸುವ ಮೆಟ್ಟಿಲ ಮೇಲೆ ಪ್ರತಿಭಟನೆ ನಡೆಸಿದರು. ಯುಡಿಎಫ್ ಶಾಸಕರೊಂದಿಗೆ ಸ್ವತಂತ್ರ ಶಾಸಕ ಪಿ.ಸಿ ಜಾರ್ಜ್ ಕೂಡ ಸದನದಿಂದ ಹೊರ ನಡೆದರು.

ಸದನದಲ್ಲಿ ಬಿಜೆಪಿ ಶಾಸಕ ಒ. ರಾಜಗೋಪಾಲ್ ಮಾತ್ರ ಉಳಿದಿದ್ದರು. ಡಾಲರ್ ಅಕ್ರಮ ಸಾಗಾಟ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ವಿರುದ್ಧ ಯುಡಿಎಫ್ ಆಕ್ರೋಶ ವ್ಯಕ್ತಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಸ್ವೀಕರ್ ಅವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಕೆ. ಅಯ್ಯಪ್ಪನ್ ಶುಕ್ರವಾರ ಕಸ್ಟಮ್ಸ್ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಆದರೆ, ಸ್ಪೀಕರ್ ತಾನು ಯಾವುದೇ ಅಕ್ರಮಗಳಲ್ಲಿ ಭಾಗಿಯಾಗಿಲ್ಲ ಎಂದು ಮತ್ತೆ ಮತ್ತೆ ಪ್ರತಿಪಾದಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News