×
Ad

ಮತ್ತಷ್ಟು ಹಿಂಸೆಗೆ ಕುಮ್ಮಕ್ಕು ಸಾಧ್ಯತೆ : ಟ್ರಂಪ್ ಟ್ವಿಟ್ಟರ್ ಖಾತೆ ಶಾಶ್ವತವಾಗಿ ರದ್ದು

Update: 2021-01-09 09:15 IST

 ಸ್ಯಾನ್‌ಫ್ರಾನ್ಸಿಸ್ಕೊ,ಜ.9: ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟ್ಟರ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಶಾಶ್ವತವಾಗಿ ರದ್ದುಪಡಿಸಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಸಂಸತ್‌ಭವನದ ಮೇಲೆ ಇನ್ನೊಂದು ದಾಳಿ ನಡೆಯುವ ಸಾಧ್ಯತೆಯನ್ನು ತಪ್ಪಿಸುವುದಕ್ಕಾಗಿ ಟ್ರಂಪ್ ಅವರ

 ಖಾತೆ ಯನ್ನು ರದ್ದುಪಡಿಸಿರುವುದಾಗಿ ಅದು ಹೇಳಿದೆ.

ಅಮೆರಿಕ ಅಧ್ಯಕ್ಷರಾಗಿ ತನ್ನ ಅಧಿಕಾರವಧಿಯುದ್ದಕ್ಕೂ ಟ್ರಂಪ್ ಅವರು @realDonaldTrump  ಖಾತೆಯನ್ನು ಬಳಸಿಕೊಂಡು ವಿವಾದಾತ್ಮಕ ಘೋಷಣೆಗಳನ್ನು, ಆರೋಪಗಳನ್ನು ಪ್ರಕಟಿಸುತ್ತಿದ್ದರು.

ಹಿಂಸಾಚಾರಕ್ಕೆ ಇನ್ನಷ್ಟು ಪ್ರಚೋದನೆ ದೊರೆಯುವ ಅಪಾಯವಿದೆಯೆಂಬುದು ಡೊನಾಲ್ಡ್ ಟ್ರಂಪ್ ಅವರ @realDonaldTrump  ಖಾತೆಯ ಮೂಲಕ ಪ್ರಕಟಿಸಲಾದ ಇತ್ತೀಚಿನ ಟ್ವೀಟ್‌ಗಳನ್ನು ನಿಕಟವಾಗಿ ಪರಿಶೀಲಿಸಿದ ಬಳಿಕ ಮನದಟ್ಟಾಗಿದ್ದು, ಈ ಕಾರಣಕ್ಕಾಗಿ ನಾವು ಆ ಖಾತೆಯನ್ನು ಶಾಶ್ವತವಾಗಿ ರದ್ದುಗೊಳಿಸಿದ್ದೇವೆ ಎಂದು ಟ್ವಿಟ್ಟರ್ ಬ್ಲಾಗ್ ಪೋಸ್ಟ್ ಒಂದರಲ್ಲಿ ತಿಳಿಸಿದೆ.

ತನ್ನ ಟ್ವಿಟ್ಟರ್ ಖಾತೆ ರದ್ದುಗೊಳಿಸಲ್ಪಟ್ಟ ಕೆಲವೇ ನಿಮಿಷಗಳ ಬಳಿಕ ಟ್ರಂಪ್ ಅವರು ತನ್ನ ಅಧ್ಯಕ್ಷೀಯ ಖಾತೆ @potus  ಮೂಲಕ ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣ ಸಂಸ್ಥೆಯು ‘ಎಡಪಂಥೀಯ ತೀವ್ರವಾದಿ’ಗಳ ಜೊತೆ ಕೈಜೋಡಿಸಿದೆಯೆಂದು ಆರೋಪಿಸಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಟ್ವಿಟ್ಟರ್ ಅವರ ಟ್ವೀಟ್‌ಗಳನ್ನು ಅಳಿಸಿ ಹಾಕಿತು.

 ಆನಂತರ ಟ್ರಂಪ್ ಅವರು @Team Trump  ಚುನಾವಣಾ ಪ್ರಚಾರ ಖಾತೆಯಿಂದ ಟ್ವೀಟ್ ಮಾಡಿದರು. ಆದರೆ ಆ ಖಾತೆಯನ್ನು ಕೂಡಾ ಟ್ವಿಟ್ಟರ್ ರದ್ದುಪಡಿಸಿತು. ಅಮಾನತಿನಿಂದ ತಪ್ಪಿಸಿಕೊಳ್ಳಲು ಇನ್ನೊಂದು ಖಾತೆಯನ್ನು ಬಳಸಿಕೊಳ್ಳುವುದು ನಮ್ಮ ನಿಯಮಾವಳಿಗಳಿಗೆ ವಿರುದ್ಧವಾಗಿದೆ ಎಂದು ಟ್ವಿಟ್ಟರ್ ತಿಳಿಸಿದೆ.

 ಕಳೆದ ಬುಧವಾರ ಅಮೆರಿಕ ಸಂಸತ್ ಕಟ್ಟಡದ ಮೇಲೆ ಟ್ರಂಪ್ ಬೆಂಬಲಿಗರು ದಾಳಿ ನಡೆಸಿದ ಬಳಿಕ ಟ್ರಂಪ್ ಅವರ ಖಾತೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಿತ್ತು.

 ಶುಕ್ರವಾರ ಟ್ರಂಪ್ ಅವರು ಮಾಡಿದ ಸರಣಿ ಟ್ವೀಟ್‌ಗಳಲ್ಲಿ, ತನ್ನ ಯಾವುದೇ ಬೆಂಬಲಿಗರಿಗೂ ಅಪಮಾನವಾಗಲು ಬಿಡುವುದಿಲ್ಲ ಎಂದಿದ್ದರು. ಜನವರಿ 20ರಂದು ನಡೆಯಲಿರುವ ತನ್ನ ಉತ್ತರಾಧಿಕಾರಿ ಜೋ ಬೈಡನ್ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸುವುದಿಲ್ಲವೆಂಬುದಾಗಿಯೂ ಟ್ರಂಪ್ ಟ್ವೀಟಿಸಿದ್ದರು.

   ಟ್ರಂಪ್ ಅವರು ಟ್ವಿಟ್ಟರ್‌ನಲ್ಲಿ 8.17 ಕೋಟಿಗೂ ಅಧಿಕ ಟ್ವಿಟ್ಟರ್ ಹಿಂಬಾಲಕರನ್ನು ಹೊಂದಿದ್ದು, ಟ್ವಿಟ್ಟರ್‌ನ ಟಾಪ್ 10 ಖಾತೆಗಳಲ್ಲೊಂದಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಬಹುತೇಕ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸುವ ಟ್ರಂಪ್ ಅವರು ಟ್ವಿಟ್ಟರ್ ಮೂಲಕವೇ ಹೇಳಿಕೆಗಳನ್ನು ಪ್ರಕಟಿಸುವುದಕ್ಕೆ ಆದ್ಯತೆ ನೀಡುತ್ತಾ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News