ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌ನಿಂದ ಅನಗತ್ಯ ಆರೋಪ: ಶೋಭಾ ಕರಂದ್ಲಾಜೆ
ಮಂಗಳೂರು, ಜ.9: ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರದ ಅಭಿವೃದ್ಧಿ ಕೆಲಸಗಳಿಂದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಆತಂಕಗೊಂಡಿದ್ದಾರೆ. ಹಾಗಾಗಿ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ನಾಯಕರು ಬಿಜೆಪಿ ಹಾಗೂ ನಾಯಕರ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಕಂಕನಾಡಿ ಗರೋಡಿಯಲ್ಲಿಂದು ಸುದ್ದಿಗೋಷ್ಠಿಯ ಸಂದರ್ಭ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದರು.
ಡಿ.ಕೆ. ಶಿವಕುಮಾರ್ ಅಧ್ಯಕ್ಷರಾದ ಮೇಲೆ ಎಲ್ಲಾ ಚುನಾವಣೆಯನ್ನು ಕಳೆದುಕೊಂಡಿದ್ದಾರೆ. ಇದರಿಂದ ವಿಚಲಿತಗೊಂಡ ಡಿ.ಕೆ. ಶಿವಕುಮಾರ್ ಅನಗತ್ಯ ಹೇಳಿಕೆಯನ್ನು ನೀಡುತ್ತಿದ್ದು, ಇದಕ್ಕೆ ಯಾವುದೇ ಮಹತ್ವವಿಲ್ಲ ಎಂದರು.
ಬಿಜೆಪಿ ಯಾವ ರೀತಿಯ ಯಾತ್ರೆ, ಪ್ರವಾಸ ಮಾಡುತ್ತದೋ ಅದನ್ನು ಅನುರಿಸಲು ಡಿ.ಕೆ. ಶಿವಕುಮಾರ್ ಹೊರಟಿದ್ದಾರೆ. ಆದರೆ ಡಿ.ಕೆ.ಶಿಗೆ ಜನಬೆಂಬಲ, ಅವರದ್ದೇ ಕಾರ್ಯಕರ್ತರ ಬೆಂಬಲ ಇಲ್ಲ. ಕಾಂಗ್ರೆಸ್‌ನಲ್ಲಿ ಗೊಂದಲ ಇದೆ. ಸಿದ್ದರಾಮಯ್ಯನವರೇ ಡಿಕೆಶಿಯ ಕಾರ್ಯಶೈಲಿಯನ್ನು ಒಪ್ಪುತ್ತಿಲ್ಲ. ಅವರ ಗೊಂದಲ ಮುಚ್ಚಿಡಲು ಬಿಜೆಪಿ ಅಥವಾ ಸರಕಾರ ಅಥವಾ ಪ್ರಧಾನಿ ಮೋದಿ ವಿರುದ್ಧ, ಯಡಿಯೂರಪ್ಪ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. 50 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಈ ದೇಶಕ್ಕೆ ಏನು ಮಾಡಿದೆ ಎಂಬುದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ಹಿಂದೆ ಜನರನ್ನು ಮರಳು ಮಾಡಬಹುದಿತ್ತು. ಈಗ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಿವೆ. ಜನ ಬುದ್ಧಿವಂತರಾಗಿದ್ದಾರೆ. ಯಾರನ್ನೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದು ಶೋಭಾ ಹೇಳಿದರು.
ಸಿದ್ದರಾಮಯ್ಯ ಅವರು ವಿಚಾರವಾದಿ ನಾಯಕರಿರಬಹುದು. ಆದರೆ ಹಿಂದೂಗಳು, ಕೊಡವರ ಭಾವನೆಗೆ ಅವರು ಧಕ್ಕೆ ಮಾಡುತ್ತಿದ್ದಾರೆ. ಕೊಡವರು ಗೋಮಾಂಸ ತಿನ್ನುತ್ತಾರೆ ಎಂದ ಒಂದೆಡೆ ಹೇಳಿದರೆ, ನಾನೂ ಗೋಮಾಂಸ ತಿನ್ನುತ್ತೇನೆ ಎನ್ನುತ್ತಾರೆ. ಹಾಗಾಗಿ ಅವರ ಸಮಾಜ ಆ ಜನಾಂಗದವರು ಗೋಮಾಂಸ ತಿನ್ನುತ್ತಾರಾ ಅಥವಾ ಸಿದ್ದರಾಮಯ್ಯ ಆ ಜನಾಂಗಕ್ಕೆ ಅವಮಾನ ಮಾಡುತ್ತಿದ್ದಾರಾ ಎಂಬುದನ್ನು ಹೇಳಬೇಕು. ಓಟ್‌ಬ್ಯಾಂಕ್ ರಾಜಕಾರಣಕ್ಕಾಗಿ ಈ ಎಲ್ಲಾ ನಾಟಕವನ್ನು ಸಿದ್ದರಾಮಯ್ಯ ಮಾಡುತ್ತಿದ್ದು, ಹಿಂದೂಗಳ, ಕೊಡವರ ಭಾವನೆಗೆ ಧಕ್ಕೆ ತರುವ ಯಾವುದೇ ಹಕ್ಕು ಅವರಿಗಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಉಜಿರೆಯಲ್ಲಿ ಪಾಕ್ ಪರ ಘೋಷಣೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಮಾಜ ಎಚ್ಚೆತ್ತುಕೊಳ್ಳಬೇಕು. ಯಾವ ಎಸ್‌ಡಿಪಿಐ ನಮ್ಮ ಹಲವಾರು ಕಾರ್ಯಕರ್ತರ ಹತ್ಯೆಗೆ ಕಾರಣಿಕರ್ತರಾದರೋ ಅವರು ಚುನಾವಣೆಗೆ ಸ್ಪರ್ಧಿಸಿ ಒಂದೆರಡು ಸ್ಥಾನ ಗೆದ್ದಾಗ ಪಾಕ್ ಪರ ಘೋಷಣೆ ಕೂಗುವುದು ಅವರ ನಿಲುವನ್ನು ತೋರಿಸುತ್ತದೆ. ಅವರು ಯಾರ ಪರ ಇದ್ದಾರೆಂಬುದನ್ನು ತೋರಿಸುತ್ತದೆ. ಇಲ್ಲಿನ ಸರಕಾರಿ ಸೌಲಭ್ಯಗಳನ್ನು ಪಡೆದು ನಮ್ಮ ವಿರೋಧಿ ಪಾಕ್ ಪರ ಮಾತನಾಡುವುದಾದರೆ ಅವರನ್ನು ದೇಶದ್ರೋಹಿ ಎಂದು ಘೋಷಣೆ ಮಾಡುವ ಕಾಲ ದೂರವಿಲ್ಲ. ಇದಕ್ಕೆ ಅಗತ್ಯವಾದ ಕಾನೂನು ಬದಲಾವಣೆಯನ್ನು ಸರಕಾರ ಮಾಡಬೇಕಾಗಿದೆ. ಆ ಒತ್ತಡವನ್ನು ನಾವು ಮಾಡಲಿದ್ದೇವೆ. ನಮ್ಮ ಕಾರ್ಯಕರ್ತರು ಪಾಕ್ ಪರ ಘೋಷಣೆ ಕೂಗಿರಲು ಸಾಧ್ಯವಿಲ್ಲ. ಇದು ಮೋಸದ ಆಟ. ಇದು ಅನಗತ್ಯ ಆರೋಪ. ಅವರ ಹುಳುಕನ್ನು ಅವರ ದೇಶ ವಿರೋಧಿ ಚಟುವಟಿಕೆಯನ್ನು ಮುಚ್ಚಿಡಲು ಆರೋಪ ಮಾಡುತ್ತಿದ್ದಾರೆ. ಯಾರು ಭಾರತ ವಿರೋಧಿ ಘೋಷಣೆ ಕೂಗುತ್ತಾರೋ ಅವರನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಹೇಳಿದರು.