ವಾಟ್ಸಾಪ್‌ ನ ಹೊಸ ನಿಯಮವನ್ನು ಒಪ್ಪಿಕೊಳ್ಳದಿದ್ದರೆ ಫೆಬ್ರವರಿಯಿಂದ ವಾಟ್ಸಪ್‌ ಡಿಲೀಟ್!‌

Update: 2021-01-09 13:50 GMT

ಹೊಸದಿಲ್ಲಿ,ಜ.09: ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್ಯಾಪ್ ತನ್ನ  ಗೌಪ್ಯತೆ ನೀತಿಯನ್ನು ಪರಿಷ್ಕರಿಸುವುದಾಗಿ ಘೋಷಿಸಿದೆ. ಇದರನ್ವಯ ಅದು ಬಳಕೆದಾರರ  ಮಾಹಿತಿಯನ್ನು ಇತರ ಫೇಸ್ ಬುಕ್ ಒಡೆತನದ ಕಂಪೆನಿಗಳು ಹಾಗೂ ಥರ್ಡ್ ಪಾರ್ಟಿ ಆ್ಯಪ್‍ಗಳ ಜತೆ ಶೇರ್ ಮಾಡಲಿದೆ.  ಆದರೆ ವಾಟ್ಸ್ಯಾಪ್‍ನಲ್ಲಿನ ಎಲ್ಲಾ ಸಂದೇಶಗಳು ಎಂಡ್-ಟು-ಎಂಡ್ ಎನ್ಕ್ರಿಪ್ಟೆಡ್ ಆಗಿರುತ್ತದೆ, ಅಂದರೆ ನಿಮ್ಮ ಸಂದೇಶಗಳನ್ನು ಕಂಪೆನಿ ಓದುವುದಿಲ್ಲ ಆದರೆ ಬ್ಯಾಟರಿ ಮಟ್ಟ, ಸಿಗ್ನಲ್ ಎಷ್ಟು ಬಲವಾಗಿದೆ ಹಾಗೂ ಐಪಿ ಅಡ್ರೆಸ್ ಸಹಿತ ಇತರ ಮಾಹಿತಿಗಳನ್ನು ಅದು ಸಂಗ್ರಹಿಸಿ ಶೇರ್ ಮಾಡಲಿದೆ.

ಬಳಕೆದಾರರು ತಮ್ಮ ವಾಟ್ಸ್ಯಾಪ್ ಖಾತೆಯನ್ನು ಬಳಸುವುದನ್ನು ಮುಂದುವರಿಸಲು ಬಯಸಿದ್ದರೆ ಈ ಪರಿಷ್ಕೃತ ಗೌಪ್ಯತಾ ನೀತಿಗಳನ್ನು ಅವರು ಫೆಬ್ರವರಿ 8, 2021ರೊಳಗಾಗಿ ಕಡ್ಡಾಯವಾಗಿ ಒಪ್ಪಬೇಕಿದೆ. ಇಲ್ಲದೇ ಹೋದರೆ ಅವರ ವಾಟ್ಸ್ಯಾಪ್ ಅಕೌಂಟ್ ಡಿಲೀಟ್ ಆಗಲಿದೆ. ವಾಟ್ಸ್ಯಾಪ್‍ನ ಪರಿಷ್ಕೃತ ನೀತಿಯನ್ನು ಒಪ್ಪುವಂತೆ ಬಳಕೆದಾರರಿಗೆ ಈಗಾಗಲೇ ಪಾಪ್-ಅಪ್ ಮೂಲಕ ಸಂದೇಶಗಳು ಬರಲಾರಂಭಿಸಿದೆ.

ವಾಟ್ಸ್ಯಾಪ್‍ನ ಹೊಸ ನೀತಿ ಮೂರು ವಿಷಯಗಳಿಗೆ ಸಂಬಂಧಿಸಿದ್ದಾಗಿದೆ. ಆ್ಯಪ್‍ನ ಸೇವೆಗಳು, ಅವುಗಳು ನಿಮ್ಮ ಡಾಟಾವನ್ನು ಹೇಗೆ ಬಳಸಬಹುದೆನ್ನುವುದು ಹಾಗೂ ಉದ್ಯಮಗಳು ಫೇಸ್ ಬುಕ್ ಹೋಸ್ಟೆಡ್ ಸರ್ವಿಸ್‍ಗಳನ್ನು ಹೇಗೆ ಬಳಸಬಹುದು, ವಾಟ್ಸ್ಯಾಪ್ ಚ್ಯಾಟ್‍ಗಳನ್ನು ಹೇಗೆ ಶೇಖರಿಸಿ ನಿರ್ವಹಿಸಬಹುದು,  ಹಾಗೂ ಫೇಸ್ ಬುಕ್ ಕಂಪೆನಿ ಉತ್ಪನ್ನಗಳೊಂದಿಗೆ ಸಮೀಕರಿಸಲು ವಾಟ್ಸ್ಯಾಪ್ ಹೇಗೆ ಫೇಸ್ ಬುಕ್ ಜತೆಗೆ ಕೆಲಸ ಮಾಡಬಹುದು ಎಂಬುದರ ಕುರಿತು ಹೊಸ ನೀತಿಯಿದೆ.

ಕಂಪೆನಿಯು ನಿಮ್ಮ ಐಪಿ ಅಡ್ರೆಸ್, ಅಕೌಂಡ್ ರಿಜಿಸ್ಟ್ರೇಶನ್ ಮಾಹಿತಿ (ನಿಮ್ಮ ಫೋನ್ ನಂಬರ್ ಸಹಿತ), ಟ್ರಾನ್ಸಾಕ್ಷನ್ ಡಾಟಾ, ಸರ್ವಿಸಸ್ ಸಂಬಂಧಿತ ಮಾಹಿತಿ,  ಆ್ಯಪ್ ಬಳಕೆ ವೇಳೆ ಇತರರ ಜತೆ ಹೇಗೆ ಸಂವಹನ ನಡೆಸುತ್ತೀರೆಂಬುದರ ಕುರಿತ ಮಾಹಿತಿ ಹಾಗೂ ಮೊಬೈಲ್ ಸಾಧನದ ಕುರಿತ ಮಾಹಿತಿಯನ್ನು ಸಂಗ್ರಹಿಸಲಿದೆ.

ವಾಟ್ಸ್ಯಾಪ್‍ನ ನೂತನ ನೀತಿ ಸಾಮಾಜಿಕ ಜಾಲತಾಣಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಇದೇ ವಿಚಾರ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದೆ. ಟೆಸ್ಲಾ ಸಿಇಒ ಹಾಗೂ ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರಂತೂ ಜನರಿಗೆ ಸಿಗ್ನಲ್ ಮೆಸೇಜಿಂಗ್ ಸೇವೆ ಬಳಸಲು ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News