ಇಂಡೋನೇಷ್ಯಾದಿಂದ 62 ಪ್ರಯಾಣಿಕರೊಂದಿಗೆ ಹೊರಟಿದ್ದ ವಿಮಾನ ನಾಪತ್ತೆ: ಶಂಕಿತ ಅವಶೇಷಗಳು ಪತ್ತೆ

Update: 2021-01-09 18:25 GMT

ಜಕಾರ್ತಾ,ಜ.9: ಇಂಡೋನೇಷ್ಯಾದ ಶ್ರೀವಿಜಯ ಏರ್‌ಲೈನ್ಸ್‌ಗೆ ಸೇರಿದ 737-500 ಬೋಯಿಂಗ್ ವಿಮಾನವೊಂದು ಶನಿವಾರ ನಾಪತ್ತೆಯಾಗಿದ್ದು,ಸಮುದ್ರದಲ್ಲಿ ಪತನಗೊಂಡಿರುವ ಭೀತಿ ವ್ಯಕ್ತವಾಗಿದೆ.

ಅಪರಾಹ್ನ 2:30ಕ್ಕೆ ರಾಜಧಾನಿ ಜಕಾರ್ತಾದ ಸುಕರ್ನೊ-ಹಟ್ಟಾ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 740 ಕಿ.ಮೀ.ದೂರದ ಪಶ್ಚಿಮ ಕಲಿಮಂತನ್‌ನ ಪಾಂಟಿಯಾನಕ್‌ಗೆ ಪ್ರಯಾಣವನ್ನು ಆರಂಭಿಸಿದ್ದ ಈ ನತದೃಷ್ಟ ವಿಮಾನವು ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ಕೊಠಡಿಯ ಸಂಪರ್ಕವನ್ನು ಕಳೆದುಕೊಂಡಿದ್ದು, ರಾಡಾರ್‌ನ ಪರದೆಯಿಂದ ಮಾಯವಾಗಿತ್ತು. ಜಕಾರ್ತಾ ಕರಾವಳಿಯಾಚೆ ಸಮುದ್ರದಲ್ಲಿ ನಾಪತ್ತೆಯಾಗಿರುವ ವಿಮಾನದ್ದೆಂದು ಶಂಕಿಸಲಾಗಿರುವ ಕೆಲವು ಅವಶೇಷಗಳು ಪತ್ತೆಯಾಗಿವೆ ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ.

12 ಸಿಬ್ಬಂದಿಗಳು ಸೇರಿದಂತೆ 62 ಜನರು ವಿಮಾನದಲ್ಲಿದ್ದರು ಎಂದು ಇಂಡೋನೇಷ್ಯಾದ ಸಾರಿಗೆ ಸಚಿವ ಬುದಿ ಕರ್ಯಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಜಕಾರ್ತಾದ ಉತ್ತರದ ಸಮುದ್ರ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಗಾಗಿ ತಂಡಗಳನ್ನು ರವಾನಿಸಲಾಗಿದ್ದು ಯಾವುದೇ ರೇಡಿಯೊ ಬೀಕನ್ ಸಂಕೇತವನ್ನು ಗುರುತಿಸಲಾಗಿಲ್ಲ ಎಂದು ದೇಶದ ಶೋಧ ಮತ್ತು ರಕ್ಷಣಾ ಸಂಸ್ಥೆ ಬಸರ್ನಾಸ್‌ನ ಮುಖ್ಯಸ್ಥ ಬಾಗಸ್ ಪುರುಹಿಟೊ ತಿಳಿಸಿದರು.ಕೆಲವು ಕೇಬಲ್‌ಗಳು,ಜೀನ್ಸ್‌ನ ಒಂದು ತುಂಡು,ಹಲವಾರು ಲೋಹದ ಚೂರುಗಳು ಸಮುದ್ರದಲ್ಲಿ ತೇಲುತ್ತಿರುವುದು ಪತ್ತೆಯಾಗಿವೆ. ಆದರೆ ಇವು ನಾಪತ್ತೆಯಾಗಿರುವ ವಿಮಾನದ ಅವಶೇಷಗಳಾಗಿವೆಯೇ ಎನ್ನುವುದು ದೃಢಪಟ್ಟಿಲ್ಲ ಎಂದು ಇನ್ನೋರ್ವ ಬಸರ್ನಾಸ್ ಅಧಿಕಾರಿ ಆಗಸ್ ಹರ್ಯೊನೊ ಅವರು ಸುದ್ದಿಗಾರರಿಗೆ ತಿಳಿಸಿದರು.

50 ಜನರು ವಿಮಾನದ ಶೋಧ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು,ರಾತ್ರಿಯೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದರು.ವಿಮಾನವು ಜಕಾರ್ತಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ನಾಲ್ಕು ನಿಮಿಷಗಳ ಬಳಿಕ 10,000 ಅಡಿಗಳ ಎತ್ತರದಲ್ಲಿ ಹಾರುತ್ತಿದ್ದಾಗ ರಾಡಾರ್ ಸಂಪರ್ಕವನ್ನು ಕಳೆದುಕೊಂಡಿತ್ತು ಎನ್ನಲಾಗಿದೆ.ತಾನಿನ್ನೂ ಘಟನೆಯ ಬಗ್ಗೆ ವಿವರವಾದ ಮಾಹಿತಿಗಳನ್ನು ಸಂಗ್ರಹಿಸುತ್ತಿರುವುದಾಗಿ ಶ್ರೀವಿಜಯ ಏರ್‌ಲೈನ್ಸ್ ತಿಳಿಸಿದೆ.ವಿಮಾನವು ಅಪರಾಹ್ನ ಜಕಾರ್ತಾ ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭಿಸಿದಾಗ ಮಳೆ ಸುರಿಯುತ್ತಿತ್ತು.ತಾನು ಮತ್ತು ತನ್ನ ಸಹಚರರು ಸಮುದ್ರದಲ್ಲಿ ಹಲವಾರು ಲೋಹದ ತುಂಡುಗಳನ್ನು ಕಂಡಿದ್ದಾಗಿ ಥೌಸಂಡ್ ಐಲ್ಯಾಂಡ್ಸ್‌ನ ಮೀನುಗಾರನೋರ್ವ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾನೆ.2003ರಲ್ಲಿ ಜಕಾರ್ತಾದಲ್ಲಿ ಸ್ಥಾಪನೆಗೊಂಡಿದ್ದ ಶ್ರೀವಿಜಯ ಏರ್‌ಲೈನ್ಸ್ ಹೆಚ್ಚಾಗಿ ಆಂತರಿಕ ಯಾನಗಳನ್ನು ನಿರ್ವಹಿಸುತ್ತಿದೆ.

27 ವರ್ಷಗಳಷ್ಟು ಹಳೆಯದಾಗಿದ್ದ 737-500 ಬೋಯಿಂಗ್ ವಿಮಾನವು ಬೋಯಿಂಗ್ ಕಂಪನಿಯ ತಾಂತ್ರಿಕ ಸಮಸ್ಯೆಗಳಿಂದ ಕೂಡಿರುವ 737 ಮ್ಯಾಕ್ಸ್‌ಗಿಂತ ತುಂಬ ಹಳೆಯ ಮಾದರಿಯಾಗಿದೆ. 2018ರ ಲಯನ್ ಏರ್‌ಗೆ ಸೇರಿದ್ದ 737 ಮ್ಯಾಕ್ಸ್ ವಿಮಾನವೊಂದು ಜಕಾರ್ತಾದಲ್ಲಿ ಪತನಗೊಂಡು ಅದರಲ್ಲಿದ್ದ ಎಲ್ಲ 189 ಜನರು ಮೃತಪಟ್ಟಿದ್ದರು. ಇಥಿಯೋಪಿಯಾದಲ್ಲಿಯೂ ಈ ಮಾದರಿಯ ವಿಮಾನವೊಂದು ಪತನಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News