×
Ad

ಮಾಂಸ ವ್ಯಾಪಾರದ ಸ್ಟಾಲ್‌ಗೆ ಬೆಂಕಿ: ಎಸ್‌ಡಿಪಿಐ ಖಂಡನೆ

Update: 2021-01-09 20:44 IST

ಮಂಗಳೂರು, ಜ.9: ಉಳ್ಳಾಲ ನಗರ ಸಭಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯಲ್ಲಿ ಮಾಂಸ ವ್ಯಾಪಾರದ ಶೆಡ್‌ಗಳಿಗೆ ಬೆಂಕಿ ಹಚ್ಚಿದ ಕೃತ್ಯವನ್ನು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಬ್ಬಾಸ್ ಕಿನ್ಯ ಖಂಡಿಸಿದ್ದಾರೆ.

ಕಳೆದ 40 ವರ್ಷಗಳಿಂದ ಇದೇ ಸ್ಥಳದಲ್ಲಿ ಮಾಂಸ ಹಾಗೂ ವಿವಿಧ ವ್ಯಾಪಾರಸ್ಥರು ವ್ಯಾಪಾರ ನಡೆಸುತ್ತಿದ್ದು, ಇಲ್ಲಿನ ಹಳೇ ಕಟ್ಟಡವನ್ನು ನಿರ್ನಾಮ ಮಾಡಿ ಹೊಸ ಕಟ್ಟಡ ಕಟ್ಟುವ ಯೋಜನೆಗೆ ಇಲ್ಲಿನ ನಗರಸಭೆ ಮುಂದಾಗಿತ್ತು. ಈ ಸಂದರ್ಭದಲ್ಲಿ ಬೀಫ್ ಸ್ಟಾಲ್‌ಗಳ ಮಾಲಕರಿಗೆ ಪರ್ಯಾಯ ವ್ಯವಸ್ಥೆ ಇಲ್ಲದ ಅಥವಾ ಲಭಿಸದ ಕಾರಣದಿಂದ ತಾತ್ಕಾಲಿಕ ಶೆಡ್ ನಿರ್ಮಿಸಿ ವ್ಯಾಪಾರ ನಡೆಸುತ್ತಿದ್ದರು. ಉಳಿದ ಎಲ್ಲ ವ್ಯಾಪಾರಸ್ಥರು ಪಕ್ಕದಲ್ಲಿರುವ ಖಾಸಗಿ ಸ್ಥಳಕ್ಕೆ ತಾತ್ಕಾಲಿಕ ಸ್ಥಳಾಂತರ ಮಾಡಿ ವ್ಯಾಪಾರ ನಡೆಸುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಪಕ್ಷದ ಕಚೇರಿಗೆ ಬೆಂಕಿ ಹಚ್ಚುವುದು ಸೇರಿದಂತೆ ಹಲವು ಘಟನೆಗಳು ಸಂಭವಿಸುತ್ತಿವೆ. ಕೋಮು ಸೂಕ್ಷ್ಮ ಪ್ರದೇಶವಾದ ದ.ಕ. ಜಿಲ್ಲೆಯಲ್ಲಿ ಗಲಭೆ ಸೃಷ್ಟಿಸುವ ಷಡ್ಯಂತ್ರ ಅಡಗಿದೆ. ಇಲ್ಲಿನ ಬಿಜೆಪಿ, ಸಂಘಪರಿವಾರದ ನಾಯಕರ ಜಿಲ್ಲೆಗೆ ಬೆಂಕಿ ಹಚ್ಚುತ್ತೇವೆ ಎಂಬ ಬಹಿರಂಗ ಹೇಳಿಕೆಗಳಿಂದ ಪ್ರಚೋದನೆಗೊಂಡ ಸಮಾಜ ವಿರೋಧಿ ಶಕ್ತಿಗಳು ಇಂತಹ ಕೃತ್ಯಗಳನ್ನು ನಡೆಸುತ್ತಿವೆ ಎಂದು ಅವರು ಆರೋಪಿಸಿದರು.

ಇದು ನಾಗರಿಕ ಸಮಾಜ ಒಪ್ಪುವಂತದಲ್ಲ. ಇದರ ಹಿಂದಿರುವ ಸೂತ್ರದಾರಿಗಳನ್ನು ಕೂಡಲೇ ಬಂಧಿಸಿ, ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಈ ಘಟನೆಯಿಂದ ಸಂತ್ರಸ್ತರಾದ ವ್ಯಾಪಾರಸ್ಥರಿಗೆ ಸರಕಾರ ಸೂಕ್ತ ಪರಿಹಾರ ಹಾಗೂ ಭದ್ರತೆ ಒದಗಿಸಬೇಕು ಎಂದು ಅಬ್ಬಾಸ್ ಕಿನ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News