ಧರ್ಮಸ್ಥಳದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರ ಉದ್ಘಾಟನೆ

Update: 2021-01-09 15:35 GMT

ಬೆಳ್ತಂಗಡಿ: ಪ್ರಧಾನಿಯವರ ಆಶಯದಂತೆ ಆಯುಷ್ ಸಚಿವಾಲಯದಿಂದ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಸಂಶೋಧನೆಗೆ ಆದ್ಯತೆ ಮತ್ತು ಪ್ರೋತ್ಸಾಹ ನೀಡಲಾಗುತ್ತದೆ. ಪ್ರಕೃತಿ ಚಿಕಿತ್ಸಾ ಪದ್ಧತಿ ಮತ್ತು ಯೋಗ ವಿಜ್ಞಾನದಲ್ಲಿ ದೇಶದಲ್ಲೆ ಪ್ರಥಮವಾಗಿ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ಸಂಶೋಧನಾ ಕೇಂದ್ರವನ್ನು ಮಂಜೂರು ಮಾಡಿದ್ದು, ಇದು ಜಾಗತಿಕ ಮಟ್ಟದಲ್ಲಿ ಮಾದರಿ ಸಂಶೋಧನಾ ಕೇಂದ್ರವಾಗಿ ಬೆಳೆಯಲಿ, ಬೆಳಗಲಿ ಎಂದು ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಸಚಿವ ಶ್ರೀಪಾದ್ ಯೆಸ್ಸೋ ನಾಯಕ್ ಹೇಳಿದರು.

ಅವರು ಶನಿವಾರ ಧರ್ಮಸ್ಥಳದಲ್ಲಿರುವ ಶಾಂತಿವನದಲ್ಲಿ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಅನುದಾನದೊಂದಿಗೆ ಪ್ರಾರಂಭಿಸಿದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

2014ರಲ್ಲಿ ತಾನು ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ರಜತ ಮಹೋತ್ಸವ ಸಮಾರಂಭಕ್ಕೆ ಬಂದಾಗ ಕಾಲೇಜಿನ ಉತ್ತಮ ಶೈಕ್ಷಣಿಕ ಗುಣಮಟ್ಟ, ಪ್ರಯೋಗಾಲಯ ಹಾಗೂ ಸೌಲಭ್ಯಗಳನ್ನು ಗಮನಿಸಿ ಕಾಲೇಜಿಗೆ ದೇಶದಲ್ಲೆ ಪ್ರಥಮ ಸಂಶೋಧನಾ ಕೇಂದ್ರ ಮಂಜೂರು ಗೊಳಿಸಲಾಗಿದೆ.

ಈಗಾಗಲೆ ಸಂಶೋಧನಾ ಕೇಂದ್ರಕ್ಕೆ 8.73  ಕೋಟಿ ರೂ. ನೀಡಿದ್ದು, ಇನ್ನೂ 1.27  ಕೋಟಿ ರೂ. ನೆರವು ನೀಡುವುದಾಗಿ ಸಚಿವರು ಪ್ರಕಟಿಸಿದರು.ಜಾಗತಿಕ ಮಟ್ಟದ ಪತ್ರಿಕೆಗಳಲ್ಲಿ ಸಂಶೋಧನಾ ಕೇಂದ್ರದ ಲೇಖನಗಳನ್ನು ಪ್ರಕಟಿಸಬೇಕೆಂದು ಅವರು ಸಲಹೆ ನೀಡಿದರು.

60 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಕಟ್ಟಡ, ಪ್ರಯೋಗಾಲಯ ಹಾಗೂ ಸಂಶೋಧನಾ ಕೇಂದ್ರವನ್ನು ಅತಿ ಕಡಿಮೆ ಸಮಯದಲ್ಲಿ ಉತ್ತಮವಾಗಿ ನಿರ್ಮಿಸಿರುವ ಬಗ್ಯೆ ಡಾ. ಹೆಗ್ಗಡೆಯವರನ್ನು ಸಚಿವರು ಅಭಿನಂದಿಸಿದರು. ನಾಯಕತ್ವ, ಸಂಶೋಧನೆ ಹಾಗೂ ಉತ್ತಮ ಅಭ್ಯಾಸಗಳೊಂದಿಗೆ ಆರೋಗ್ಯಪೂರ್ಣ ಜೀವನ ನಡೆಸಲು ಸಂಶೋಧನಾ ಕೇಂದ್ರವು ಮಾರ್ಗದರ್ಶನ ಮತ್ತು ತರಬೇತಿ ನೀಡಲಿದೆ ಎಂದರು.

ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಾರತೀಯ ನಂಬಿಕೆ ನಡವಳಿಕೆಗಳು ಸಂಪ್ರದಾಯಗಳು ಆಚಾರ-ವಿಬಾರಗಳು ಮೂಡನಂಬಿಕೆಗಳಲ್ಲ. ಅವುಗಳಲ್ಲಿ ವೈಜ್ಞಾನಿಕ ದೃಷ್ಟಿಕೋನವನ್ನು ಕಾಣಬಹುದಾಗಿದೆ.
ಭಾರತದಲ್ಲಿ ಸುಮಾರು ಐದು ಸಾವಿರ ವರ್ಷಗಳಿಂದ ಋಷಿ-ಮುನಿಗಳು, ಸಾಧು-ಸಂತರು ಪ್ರಶಾಂತ ಪ್ರಕೃತಿಯ ಮಡಿಲಲ್ಲಿ ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಯ ಮೂಲಕ ಆರೋಗ್ಯ ಭಾಗ್ಯವನ್ನು ಪಡೆಯುತ್ತಿದ್ದರು. ವಿದೇಶಗಳಲ್ಲಿ ಕೂಡಾ ಇಂದು ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಆಸಕ್ತಿಯಿಂದ ಅಭ್ಯಾಸ ಮಾಡುತ್ತಿದ್ದಾರೆ ಎಂದರು.

ಧಾರವಾಡದಲ್ಲಿರುವ ಎಸ್.ಡಿ.ಎಂ. ವೈದ್ಯಕೀಯ ವಿಶ್ವವಿದ್ಯಾಯಲಯವು ಈಗಾಗಲೆ ದೇಶದಲ್ಲಿ ಪ್ರಥಮ ಸ್ಥಾನ ಹೊಂದಿದ್ದು ಧರ್ಮಸ್ಥಳದಲ್ಲಿರುವ ಸಂಶೋಧನಾ ಕೇಂದ್ರವನ್ನು ಕೂಡಾ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಶುಭಾಶಂಸನೆ ಮಾಡಿದ ಸಂಸದ ನಳಿನ್‌ಕುಮಾರ್ ಕಟೀಲ್, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಆಯುರ್ವೇದ, ಪ್ರಕೃತಿ ಚಿಕಿತ್ಸಾ ಪದ್ಧತಿ ಮತ್ತು ಯೋಗ ವಿಜ್ಞಾನಕ್ಕೆ ನೀಡುತ್ತಿರುವ ಪ್ರೋತ್ಸಾಹದಿಂದಾಗಿ ಇಂದು ಭಾರತ ವಿಶ್ವದ ಗಮನ ಸೆಯುವಂತಾಗಿದೆ ಎಂದರು. ಪ್ರಕೃತಿ  ಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪ್ರಶಾಂತ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಎಸ್. ಸಚ್ಚಿದಾನಂದ ಮಾತನಾಡಿ, ರಾಜ್ಯದಲ್ಲಿ 500 ವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ ನೂರು ಕಾರ್ಯಯೋಜನೆಗಳನ್ನು ರೂಪಿಸಲಾಗಿದೆ. ಪ್ರತಿ ವರ್ಷ ರಾಜೀವ ಗಾಂಧಿ ಆರೋಗ್ಯ ವಿ.ವಿ.ಯು ಸಂಶೋಧನೆ ಗಾಗಿ 400 ಕೋಟಿ ರೂ. ವಿನಿಯೋಗಿಸುತ್ತಿದೆ ಎಂದರು.

ವಿದ್ಯಾರ್ಥಿಗಳು ಸಂಶೋಧನಾ ಕೇಂದ್ರದ ಸದುಪಯೋಗ ಪಡೆದು ತಮ್ಮ ಜ್ಞಾನ ವರ್ಧನೆಯೊಂದಿಗೆ ವೃತ್ತಿಯ ಘನತೆ, ಗೌರವ ಕಾಪಾಡಬೇಕು ಎಂದು ಸಲಹೆ ನೀಡಿದರು. ಆಯುಷ್ ನಿರ್ದೇಶನಾಲಯದ ಆಯುಕ್ತರಾದ ಮೀನಾಕ್ಷಿ ನೇಗಿ ಮಾತನಾಡಿ,   ಈಗಾಗಲೆ ಜಿಲ್ಲಾ ಆಸ್ಪತ್ರೆಗಳಲ್ಲಿ ಆಯುಷ್ ಘಟಕಗಳು ಸೇವೆ ನೀಡುತ್ತಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ ಹತ್ತು ಕೇಂದ್ರಗಳನ್ನು ಸದ್ಯದಲ್ಲಿಯೇ ಪ್ರಾರಂಭಿಸಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಏಳು ಆಯುಷ್ ಗ್ರಾಮಗಳನ್ನು ರೂಪಿಸಲಾಗುವುದು ಎಂದು ಪ್ರಕಟಿಸಿದರು.

ಶಾಸಕರುಗಳಾದ ಹರೀಶ್ ಪೂಂಜ, ಕೆ. ಹರೀಶ್ ಕುಮಾರ್ ಮತ್ತು ಕೆ. ಪ್ರತಾಪಸಿಂಹ ನಾಯಕ್, ಡಿ. ಹರ್ಷೇಂದ್ರ ಕುಮಾರ್, ಮತ್ತು ಶಾಂತಿವನ ಟ್ರಸ್ಟ್ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಉಪಸ್ಥಿತರಿದ್ದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಸ್ವಾಗತಿಸಿದರು. ಕಾಲೇಜಿನ ಯೋಗ ವಿಭಾಗದ ಡೀನ್ ಡಾ. ಶಿವಪ್ರಸಾದ್ ಶೆಟ್ಟಿ ಧನ್ಯವಾದ ಇತ್ತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News