ಜಿ.ರಾಜಶೇಖರ್‌ಗೆ ‘ಮಾನವರತ್ನ’, ಇಸ್ಮಾಯೀಲ್ ತೋನ್ಸೆಗೆ ‘ಸೇವಾರತ್ನ’ ಪ್ರಶಸ್ತಿ ಪ್ರದಾನ

Update: 2021-01-09 18:09 GMT

ಉಡುಪಿ, ಜ. 9: ದೇಶದಲ್ಲಿ ಇಂದು ಸಮುದಾಯಗಳು ಪರಸ್ಪರ ಕಚ್ಚಾಡುವುದರಿಂದ ಅಯೋಗ್ಯರು ರಾಜಕಾರಣ ಮಾಡು ವಂತಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ.43 ಕ್ರಿಮಿನಲ್‌ಗಳು ಆಯ್ಕೆಯಾಗಿದ್ದರು. ಇದೇ ರೀತಿ ಮುಂದುವರಿಸಿದರೆ ಇವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಹೀಗೆ ಅಧಿಕಾರದಲ್ಲಿ ಕ್ರಿಮಿನಲ್‌ಗಳೇ ತುಂಬಿಕೊಂಡರೆ ಸಭ್ಯರು ಜೈಲಿನಲ್ಲಿ ಇರಬೇಕಾಗುತ್ತದೆ. ಇದರಿಂದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಪ್ರತಿಕಾರಂಗ ಸೇರಿದಂತೆ ಇಡೀ ಪ್ರಜಾಪ್ರಭುತ್ವ ಬುನಾದಿ ಕುಸಿಯಲಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ಚಂದ್ರ ಪೂಜಾರಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಉಡುಪಿಯ ಅಂಬಾಗಿಲಿನ ಅಮೃತ್ ಗಾರ್ಡನ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ವಿವಿಧ ಸಮುದಾಯಗಳ ಸ್ನೇಹ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

ಸಮುದಾಯಗಳು ಪರಸ್ಪರ ಕಚ್ಚಾಡುತ್ತಿರುವುದು ಮಾನವ ನಿರ್ಮಿತವೇ ಹೊರತು ಪ್ರಕೃತಿದತ್ತ ಅಲ್ಲ. ನಮ್ಮ ಈ ಶ್ರೇಣಿಕೃತ ಸಮಾಜದಲ್ಲಿ ಶೇ.5ರಷ್ಟು ಮಂದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಧಿಕಾರ, ಸಂಪನ್ಮೂಲ, ಆದಾಯಗಳಿವೆ. ಶೇ.70ರಷ್ಟು ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರಲ್ಲಿ ಅಧಿಕಾರ, ಆದಾಯಗಳೇ ಇಲ್ಲ. ಹೀಗೆ ತಳಸ್ತರದಲ್ಲಿರುವವರು ಎತ್ತರಕ್ಕೆ ಬರುವಾಗ ಮೇಲ್ಮಟ್ಟದವರಲ್ಲಿ ಉಂಟಾಗುವ ಆತಂಕವೇ ಸಮುದಾಯದ ನಡುವಿನ ದ್ವೇಷಕ್ಕೆ ಕಾರಣವಾಗಿದೆ ಎಂದರು.

ದೇಶದಲ್ಲಿ ಶೇ.70ರಷ್ಟಿರುವ ಕೆಳಸ್ತರದವರ ಸಂಖ್ಯೆಯನ್ನು ಒಡೆಯುವುದು ಮೇಲ್ತಸರದಲ್ಲಿರುವ ರಾಜಕೀಯ ತಂತ್ರವಾಗಿದೆ. ಹೀಗೆ ಕೆಳಸ್ತರದಲ್ಲಿರುವವರು ಕಚ್ಚಾಡಿದರೆ ಮಾತ್ರ ಮೇಲಿನವರು ಅಧಿಕಾರ ನಡೆಸಲು ಸಾಧ್ಯ. ಇದನ್ನು ಸಮುದಾಯಗಳು ಬೆರೆತು, ಅರ್ಥ ಮಾಡಿಕೊಳ್ಳಬೇಕು. ಸಮುದಾಯ ಗಳ ಪರಸ್ಪರ ಕಚ್ಚಾಟದಿಂದ ದೇಶ ಉದ್ದಾರ ಸಾಧ್ಯ ಇಲ್ಲ. ನಾವು ಸಮುದಾಯಗಳ ನಡುವಿನ ಸಹಕಾರ ಸಹಬಾಳ್ವೆಯಿಂದ ಮಾತ್ರ ದೇಶದ ಉನ್ನತಿ ಸಾಧ್ಯ ಎಂದವರು ತಿಳಿಸಿದರು.

ಸಮಾರಂಭವನ್ನು ಪದ್ಮಶ್ರೀ ಹರೇಕಳ ಹಾಜಬ್ಬ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಹಿರಿಯ ಚಿಂತಕ ಜಿ.ರಾಜಶೇಖರ್‌ರಿಗೆ ‘ಮಾನವ ರತ್ನ’ ಪ್ರಶಸ್ತಿ ಹಾಗೂ ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಇಸ್ಮಾಯೀಲ್ ತೋನ್ಸೆ ಅವರಿಗೆ ‘ಸೇವಾರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಿ.ರಾಜಶೇಖರ್, ಈ ನಾಡಿನಲ್ಲಿ ಮುಸ್ಲಿಮರು ದಿನೇ ದಿನೇ ಅಭಿವ್ಯಕ್ತಿ ಇಲ್ಲದ ಒಂದು ಸಮುದಾಯ ಆಗುತ್ತಿದ್ದಾರೆ. ದೇಶದ ಸಾರ್ವಜನಿಕ ಉದ್ಯಮ ಹಾಗೂ ಸಾರ್ವಜನಿಕ ಜೀವನದಲ್ಲಿ, ಮುಸ್ಲಿಂ ಪ್ರಾತಿನಿಧ್ಯ ಅಪಾಯಕಾರಿ ಮಟ್ಟಕ್ಕೆ ಇಳಿಯುತ್ತಿದೆ. ತಕ್ಷಣಕ್ಕೆ ಈ ಸಮಸ್ಯೆಗೆ ಯಾವ ಪರಿಹಾರ ಇಲ್ಲದಂತೆ ಕಾಣುತ್ತದೆ. ಆದರೆ, ದೀರ್ಘ ಕಾಲದಲ್ಲಿ ಸೆಕ್ಯುಲರ್ ವ್ಯವಸ್ಥೆ ಒಂದೇ ಈ ಸಮಸ್ಯೆಗೆ ಪರಿಹಾರ ಎಂದು ಅಭಿಪ್ರಾಯಪಟ್ಟರು.

ಹಿರಿಯ ಸಾಧಕರುಗಳಾದ ಕ್ರೈಸ್ತ ಧರ್ಮ ಗುರು, ಸಾಮಾಜಿಕ ಹೋರಾಟಗಾರ ಫಾ.ವಿಲಿಯಮ್ ಮಾರ್ಟಿಸ್, ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಮಲ್ಪೆಯ ಮತ್ಸೋದ್ಯಮಿ ಸಾಧು ಸಾಲಿಯಾನ್, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವಿಠ್ಠಲ್‌ದಾಸ್ ಬನ್ನಂಜೆ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಥಮ ಅಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ, ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಉಡುಪಿ ಆಶಾನಿಲಯ ವಿಶೇಷ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕಿ ಶಶಿಕಲಾ ಬೆಂಜಮಿನ್ ಕೋಟ್ಯಾನ್, ಕಾರ್ಕಳದ ಸಮಾಜ ಸೇವಕಿ ಆಯಿಶಾ ಕಾರ್ಕಳ, ಕೋಡಿ-ಕುಂದಾಪುರದ ಸಮಾಜ ಸೇವಕಿ ಲಕ್ಷ್ಮೀಬಾಯಿ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ  'ವಾರ್ತಾಭಾರತಿ' ಕನ್ನಡ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮಾತನಾಡಿ, ಈ ದೇಶದ ಪ್ರತಿಯೊಬ್ಬರನ್ನು ಬಾಧಿಸುವ ಸಮಸ್ಯೆ, ಸವಾಲುಗಳನ್ನು ಚರ್ಚೆಗೆ ತಂದು ಅವುಗಳ ಪರಿಹಾರಕ್ಕೆ ಸರ್ವಧರ್ಮೀಯರು ಒಟ್ಟಾಗಿ ಪ್ರಯತ್ನಿಸಬೇಕು. ತಮ್ಮ ಲಾಭಕ್ಕಾಗಿ ನಮಗೆ ರಾಜಕಾರಣಿಗಳು ನೀಡುವ ಅಜೆಂಡಾಗಳನ್ನು ಬದಿಗಿಡಬೇಕು ಎಂದು ಹೇಳಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಜಿಪಂ ಅಧ್ಯಕ್ಷ ರಾಜು ಪೂಜಾರಿ ಬೈಂದೂರು, ಸಹಬಾಳ್ವೆ ಉಡುಪಿ ಅಧ್ಯಕ್ಷ ಅಮೃತ ಶೆಣೈ, ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ ಮಾತನಾಡಿದರು.

ಒಕ್ಕೂಟದ ಮಾಜಿ ಅಧ್ಯಕ್ಷರುಗಳಾದ ಹಾಜಿ ಅಬ್ದುಲ್ಲಾ ನಾವುಂದ, ಕಾಸಿಮ್ ಬಾರ್ಕೂರು, ಎಂ.ಪಿ.ಮೊದಿನಬ್ಬ ಹಾಗೂ ಅಶ್ಫಾಕ್ ಅಹ್ಮದ್ ಕಾರ್ಕಳ ಮತ್ತಿತರರು ಉಪಸ್ಥಿತರಿದ್ದರು.

ಒಕ್ಕೂಟದ ಜಿಲ್ಲಾಧ್ಯಕ್ಷ ಮುಹಮ್ಮದ್ ಯಾಸೀನ್ ಮಲ್ಪೆಪ್ರಾಸ್ತಾವಿಕವಾಗಿ ಮಾತನಾಡಿ, ಅಭಿನಂದನಾ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ ಸ್ವಾಗತಿಸಿದರು. ಕೋಶಾಧಿಕಾರಿ ಇಕ್ಬಾಲ್ ಎಸ್.ಕಟಪಾಡಿ ವಂದಿಸಿದರು. ಪತ್ರಿಕಾ ಕಾರ್ಯದರ್ಶಿ ಸಲಾಹುದ್ದೀನ್ ಅಬ್ದುಲ್ಲಾ, ಅನ್ವರ್ ಅಲಿ ಕಾಪು ಪ್ರಶಸ್ತಿ ಪತ್ರ ವಾಚಿಸಿದರು. ಅಬ್ದುರ್ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಚಿಂತಕ ಜಿ.ರಾಜಶೇಖರ್ ಹಾಗೂ ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಇಸ್ಮಾಯೀಲ್ ತೋನ್ಸೆ ತಮಗೆ ದೊರೆತ ಪ್ರಶಸ್ತಿ ಮೊತ್ತವಾದ ತಲಾ 25000 ರೂ.ವನ್ನು ಒಕ್ಕೂಟಕ್ಕೆ ಮರಳಿಸಿದರು. ಆ ಮೊತ್ತವನ್ನು ಸಂಘಟಕರು 25 ಸಾವಿರ ರೂ. ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಮತ್ತು 25 ಸಾವಿರ ರೂ. ಆಶಾನಿಲಯ ವಿಶೇಷ ಶಿಕ್ಷಣ ಸಂಸ್ಥೆಗೆ ಹಸ್ತಾಂತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News