ದೈವ, ದೇವರ ಆರಾಧನೆಯಲ್ಲಿ ಮದ್ಯ ಸಲ್ಲ : ಕತ್ತಲ್‌ಸಾರ್

Update: 2021-01-10 13:24 GMT

ಉಡುಪಿ, ಜ.10: ಕೆಲವು ದೈವ ಹಾಗೂ ದೇವರ ಆರಾಧನೆಯ ಹೆಸರಿನಲ್ಲಿ ಮದ್ಯ ಸೇವನೆ ಮಾಡಲಾಗುತ್ತದೆ. ಆದರೆ ಆರಾಧನೆಯಲ್ಲಿ ಮದ್ಯಪಾನ ಮಾಡ ಬೇಕಾಗಿಲ್ಲ. ಕೇವಲ ಭಕ್ತಿಯ ಮೂಲಕವೇ ದೇವರ ಕೃಪೆಗೆ ಪಾತ್ರರಾಗಬಹುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ ‌ಸಾರ್ ಹೇಳಿದ್ದಾರೆ.

ಮುಂಬೈ ಕಮಲ್ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್, ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ-ಕರಾವಳಿ ಭಾರತೀಯ ವೈದ್ಯ ಕೀಯ ಸಂಘ, ಹಾಜಿ ಅಬ್ದುಲ್ಲಾ ಚಾರೀಟೇಬಲ್ ಟ್ರಸ್ಟ್‌ಗಳ ಸಹಯೋಗದಲ್ಲಿ ರವಿವಾರ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ 28ನೇ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತಿ ದ್ದರು.

ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಮಮತಾ ಮಾತನಾಡಿ, ಮದ್ಯ ಹಾಗೂ ವಿಷ ಎರಡು ಒಂದೇ ಗುಣವನ್ನು ಹೊಂದಿದೆ. ವಿಷದಲ್ಲಿ ತೀವ್ರತೆ ಹೆಚ್ಚಿರುವುದರಿಂದ ಸೇವಿಸಿದ ತತ್‌ಕ್ಷಣ ವ್ಯಕ್ತಿ ಮರಣ ಹೊಂದುತ್ತಾನೆ. ಆದರೆ ಮದ್ಯ ದೇಹವನ್ನು ನಿಯಂತ್ರಣಕ್ಕೆ ತೆಗೆದು ಕೊಂಡು ಹಂತ ಹಂತವಾಗಿ ಮುನುಷ್ಯನ ಸಾವಿಗೆ ಕಾರಣವಾಗುತ್ತದೆ ಎಂದರು.

ಮದ್ಯವು ಮನುಷ್ಯನ ದೇಹದಲ್ಲಿರುವ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ, ಅನಾರೋಗ್ಯ ಪೀಡಿತರನ್ನಾಗಿಸುತ್ತದೆ. ಈ ಮೂಲಕ ಮದ್ಯವು ಮನುಷ್ಯ ರನ್ನು ಸಾವಿನ ದವಡೆಗೆ ದೂಡುತ್ತದೆ. ಅದರೊಂದಿಗೆ ವ್ಯಕ್ತಿಯನ್ನು ಮಾನಸಿಕ ಸಮಸ್ಯೆಗಳಿಂದ ಬಳಲುವಂತೆ ಮಾಡುತ್ತದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ.ವಿ.ಭಂಡಾರಿ ವಹಿಸಿದ್ದರು. ಮುಖ್ಯ ಅತಿಥಿಗಳಳಾಗಿ ಹಿರಿಯ ವಕೀಲ ದೇವ ರಾಜ್ ಶೆಟ್ಟಿಗಾರ್, ಭಾರತೀಯ ವೈದ್ಯಕೀಯ ಸಂಘದ ಉಡುಪಿ-ಕರಾವಳಿ ಶಾಖೆಯ ಉಪಾಧ್ಯಕ್ಷ ಡಾ.ವಿನಾಯಕ್ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಆಸ್ಪತ್ರೆಯ ಮನೋವೈದ್ಯ ಡಾ.ಮಾನಸ್ ಇ.ಆರ್. ಸ್ವಾಗತಿಸಿದರು. ಮನ ಶಾಸ್ತ್ರಜ್ಞ ನಾಗರಾಜ್ ಮೂರ್ತಿ ವಂದಿಸಿದರು. ಆಪ್ತಸಮಾಲೋಚಕಿಯರಾದ ಮುಝಾಮಿಲ್ ಮತ್ತು ದೀಪಾಶ್ರೀ ವರದಿ ಮಂಡಿಸಿದರು. ಸುಚಿತ್ರಾ ಮತ್ತು ನಾಗರಾಜ್ ಟಿ.ಪಿ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News