×
Ad

ಪಿಲಿಕುಳ ನಿಸರ್ಗಧಾಮ ‘ಸೊಸೈಟಿ’ಗೆ ‘ಪ್ರಾಧಿಕಾರ’ ಪಟ್ಟ

Update: 2021-01-10 20:24 IST

ಮಂಗಳೂರು, ಜ.10: ನಗರ ಹೊರವಲಯದ ಪಿಲಿಕುಳದಲ್ಲಿರುವ ನಿಸರ್ಗಧಾಮಕ್ಕೆ ‘ಪ್ರಾಧಿಕಾರ’ದ ಪಟ್ಟ ಲಭಿಸಿದೆ. ಅಂದರೆ ಈ ವರ್ಷದ ಈ ತಿಂಗಳಿನಿಂದಲೇ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುವುದಕ್ಕೆ ಸಿದ್ಧತೆಗಳು ನಡೆದಿವೆ. ಅಷ್ಟೇ ಅಲ್ಲ, 2021ರ ಎಪ್ರಿಲ್ 1ರಿಂದ ಹೊಸ ಆರ್ಥಿಕ ವರ್ಷ ಪ್ರಾರಂಭವಾಗುವಾಗ ಪೂರ್ಣ ಪ್ರಮಾಣದ ಪ್ರಾಧಿಕಾರವಾಗಿ ಪಿಲಿಕುಳ ಕೆಲಸ ಮಾಡಲಿದೆ.

ಪಿಲಿಕುಳ ನಿಸರ್ಗಧಾಮವು 1996ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಬಳಿಕ ಅದು ಸೊಸೈಟಿಯಾಗಿ ಮಾರ್ಪಾಡಾಯಿತು. ಇದೀಗ ಪ್ರಾಧಿಕಾರವಾಗುವ ಮೂಲಕ ಮೇಲ್ದರ್ಜೆಗೇರಿಸಲ್ಪಟ್ಟಿವೆ. ಪ್ರಸ್ತುತ ಇಲ್ಲಿ ಎರಡು ಸೊಸೈಟಿಗಳಿವೆ. ಪಿಲಿಕುಳ ನಿಸರ್ಗಧಾಮ ಸೊಸೈಟಿ ಒಂದಾದರೆ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿ ಎರಡನೇಯದ್ದು. ಪಿಲಿಕುಳ ಸೊಸೈಟಿಯ ಕಾರ್ಯಕಾರಿ ನಿರ್ದೇಶಕರೇ ವಿಜ್ಞಾನ ಕೇಂದ್ರಕ್ಕೂ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಪಿಲಿಕುಳವು ಸುಮಾರು 370 ಎಕರೆಯಲ್ಲಿ ಅತ್ಯಾಧುನಿಕ 3ಡಿ ಪ್ಲಾನೆಟೋರಿಯಂ, ಪ್ರಾದೇಶಿಕ ವಿಜ್ಞಾನ ಕೇಂದ್ರ, ವಾಟರ್ ಪಾರ್ಕ್, ದೋಣಿ ವಿಹಾರ, ಕುಶಲಕರ್ಮಿಗಳ ಪಾರ್ಕ್, ಗುತ್ತಿನಮನೆ, ಗಾಲ್ಫ್ ಕೋರ್ಸ್, ವನ್ಯಜೀವಿ ಧಾಮ, ಅರ್ಬನ್ ಹಾತ್‌ಗಳನ್ನು ಒಳ ಗೊಂಡಿದೆ. ಸೊಸೈಟಿಯಾಗಿದ್ದ ಪಿಲಿಕುಳ ನಿಸರ್ಗಧಾಮವು ಪದೇ ಪದೇ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿತ್ತು.

ಇತ್ತೀಚೆಗೆ ಕೊರೋನ ಸೋಂಕಿನಿಂದ ಗೇಟ್ ಕಲೆಕ್ಷನ್ ಸಾರ್ವಕಾಲಿಕ ಕುಸಿತ ಕಂಡಿತ್ತು. ಇದರಿಂದ ಪ್ರಾಣಿಗಳ ನಿರ್ವಹಣೆ ಮತ್ತು ಸಿಬ್ಬಂದಿ ವರ್ಗಕ್ಕೆ ವೇತನ ಕೊಡುವ ಸವಾಲು ಕೂಡ ಎದುರಾಗಿತ್ತು. ವನ್ಯಜೀವಿಧಾಮಕ್ಕೆ ಎಂಆರ್‌ಪಿಎಲ್ ಕಂಪನಿ ಸಹಾಯಹಸ್ತ ಚಾಚಿತ್ತು. ಇಂತಹ ಪರಿಸ್ಥಿತಿಯಲ್ಲಿ ಪ್ರಾಧಿಕಾರ ರಚನೆಯಾದರೆ ಸರಕಾರದ ಮಟ್ಟದಲ್ಲಿ ಪಿಲಿಕುಳಕ್ಕೆ ಹೆಚ್ಚಿನ ಆದ್ಯತೆ ಸಿಗುವುದು, ಬಜೆಟ್ ಅನುದಾನ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಭರತ್‌ಲಾಲ್ ಮೀನಾ ಹಾಗೂ ಆಗಿನ ಕೆಎಎಸ್ ಅಧಿಕಾರಿಯಾಗಿದ್ದ ಮಾಜಿ ಶಾಸಕ ಜೆ.ಆರ್. ಲೋಬೋ ಪಿಲಿಕುಳ ನಿಸರ್ಗಧಾಮದ ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿದ್ದರು. ಆವಾಗ ಹಲವು ಹೊಸ ಯೋಜನೆಗಳೂ ಬರುತ್ತಿದ್ದವು. ಇದೀಗ ಯೋಜನೆಗಳೇ ಮಾಯವಾಗಿದೆ.

ಅರ್ಬನ್ ಹಾತ್‌ನಂತಹ ಯೋಜನೆಗಳಿಂದ ಶೇ.15ರಷ್ಟು ಸೂಪರ್‌ವಿಷನ್ ಶುಲ್ಕ ಸೊಸೈಟಿಗೂ ಸಲ್ಲುತ್ತದೆ. ಇದರಿಂದ ಖರ್ಚು ವೆಚ್ಚ ಸುಗಮವಾಗಿ ಸಾಗುತ್ತದೆ. ಈಗೀಗ ಅಂತಹ ಪ್ರಾಜೆಕ್ಟ್‌ಗಳು ಬರುತ್ತಿಲ್ಲ. ವಿಜ್ಞಾನ ಕೇಂದ್ರದ ಕೆಲವು ಸಿಬ್ಬಂದಿಗೆ ಮಾತ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಸಂಬಳ ಸಿಗುತ್ತದೆ. ಈ ಭಾಗ್ಯ ಸೊಸೈಟಿಯ ಇತರ ಸೌಲಭ್ಯಗಳ ಸಿಬ್ಬಂದಿಗಿಲ್ಲ. ಏನಿದ್ದರೂ ಗೇಟ್ ಕಲೆಕ್ಷನ್‌ನಿಂದಲೇ ಸರಿದೂಗಿಸಿಕೊಂಡು ಹೋಗಬೇಕಾಗಿದೆ.

ಪ್ರಸ್ತುತ ಜಿಲ್ಲಾಧಿಕಾರಿಯವರು ಪಿಲಿಕುಳವನ್ನು ಪ್ರಾಧಿಕಾರವನ್ನಾಗಿಸುವ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಅದಕ್ಕಾಗಿ ಆಯುಕ್ತರ ನೇಮಕ, ಸಿಬ್ಬಂದಿ ಸೂತ್ರ ರಚನೆ, ಬಜೆಟಿಂಗ್ ಇತ್ಯಾದಿಗಳನ್ನು ಸಿದ್ಧಪಡಿಸಬೇಕಾಗಿದೆ. ಮೂವರು ನಾಮನಿರ್ದೇಶಿತ ಸದಸ್ಯರ ನೇಮಕವಾಗಬೇಕು. ಅಧ್ಯಕ್ಷರಾಗಿ ಜಿಲ್ಲಾಧಿಕಾರಿ ಮುಂದುವರಿಯುತ್ತಾರೆ.

ಬಜೆಟ್‌ನಲ್ಲಿ ಘೋಷಣೆಯಾಗಿದ್ದರೂ ಹಣಕಾಸು ಇಟ್ಟಿರಲಿಲ್ಲ, ಹಾಗಾಗಿ ಇದುವರೆಗೆ ಪ್ರಾಧಿಕಾರ ಇರಲಿಲ್ಲ, ಜನವರಿಯಲ್ಲೇ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬರಲಿದೆ. ಪ್ರಾಧಿಕಾರ ವ್ಯಾಪ್ತಿಯ ಅಭಿವೃದ್ಧಿ ಕೆಲಸಗಳಿಗಾಗಿ 5 ಕೋಟಿ ರೂ. ಪ್ರಸ್ತಾವನೆ ಕೂಡಾ ಸಲ್ಲಿಸಲಾಗುವುದು.
-ಡಾ.ರಾಜೇಂದ್ರ ಕೆ.ವಿ, 
ಜಿಲ್ಲಾಧಿಕಾರಿ, ದ.ಕ. ಅಧ್ಯಕ್ಷರು ಪಿಲಿಕುಳ ಪ್ರಾಧಿಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News