×
Ad

ಸಿಬ್ಬಂದಿಗಳ ಕರ್ತವ್ಯ ಲೋಪ ದುರಂತಕ್ಕೆ ಕಾರಣ: ಮೃತ ಮಕ್ಕಳ ಪೋಷಕರ ಆರೋಪ

Update: 2021-01-10 20:45 IST
ಫೋಟೊ ಕೃಪೆ: ಎಎನ್ ಐ 

ಭಂಡಾರಾ(ಮಹಾರಾಷ್ಟ): ಭಂಡಾರಾ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ತಮ್ಮ ಕರುಳಕುಡಿಗಳನ್ನು ಕಳೆದುಕೊಂಡಿರುವ ಪೋಷಕರು,ಸಿಬ್ಬಂದಿಗಳ ಕರ್ತವ್ಯಲೋಪ ಈ ದುರಂತಕ್ಕೆ ಕಾರಣವೆಂದು ಆರೋಪಿಸಿದ್ದಾರೆ.

ನಾಲ್ಕು ಅಂತಸ್ತುಗಳ ಭಂಡಾರಾ ಜಿಲ್ಲಾಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಶನಿವಾರ ನಸುಕಿನಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ 10 ಕಂದಮ್ಮಗಳು ಸಾವನ್ನಪ್ಪಿವೆ.

ಗೀತಾ-ವಿಶ್ವನಾಥ ದಂಪತಿ ತಮ್ಮ ಎರಡು ತಿಂಗಳ ಮಗುವನ್ನು ಕಳೆದುಕೊಂಡಿದ್ದು,ಆಸ್ಪತ್ರೆ ಅಧಿಕಾರಿಗಳ ಕರ್ತವ್ಯಲೋಪ ಈ ಘಟನೆಗೆ ಕಾರಣವೆಂದು ದೂರಿರುವ ಅವರ ಬಂಧುಗಳು,ಬೆಂಕಿ ಸಂಭವಿಸಿದಾಗ ತೀವ್ರ ನಿಗಾ ಘಟಕದಲ್ಲಿ ವೈದ್ಯರಾಗಲೀ ನರ್ಸ್‌ಗಳಾಗಲಿ ಉಪಸ್ಥಿತರಿರಲಿಲ್ಲ. ದುರಂತಕ್ಕೆ ಆಸ್ಪತ್ರೆಯ ಆಡಳಿತವೇ ಹೊಣೆಯಾಗಿದೆ ಎಂದು ಆರೋಪಿಸಿದರು. ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಅವರು ಆಗ್ರಹಿಸಿದರು.

 ಭಂಡಾರಾ ಜಿಲ್ಲೆಯ ವಂದನಾ ಸಿದಮ್ ಜ.3ರಂದು ಪಹೇಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಶಿಶುವಿನ ತೂಕ ಸಾಮಾನ್ಯಕ್ಕಿಂತ ಕಡಿಮೆಯಿದ್ದರಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಂಕಿ ಅವಘಡಕ್ಕೆ ಆಸ್ಪತೆಯ ಅಧಿಕಾರಿಗಳೇ ಹೊಣೆಗಾರರು ಎಂದು ದೂರಿರುವ ವಂದನಾರ ಕುಟುಂಬ ಸದಸ್ಯರು,ಸುರಕ್ಷತಾ ನಿಯಮಗಳನ್ನು ಕಡೆಗಣಿಸಿದ್ದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಘಟನೆಯ ಬಗ್ಗೆ ತನಿಖೆಗೆ ಈಗಾಗಲೇ ಆದೇಶಿಸಿರುವ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರು ರವಿವಾರ ಭಂಡಾರಾ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ,ಮೃತ ಮಕ್ಕಳ ಕುಟುಂಬಗಳಿಗೆ ಸಾಂತ್ವನವನ್ನು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News