ಕದ್ದ ಹಣವನ್ನು ದಾನ ಮಾಡುತ್ತಾ, ಆರೋಗ್ಯ ಶಿಬಿರಗಳನ್ನೇರ್ಪಡಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು

Update: 2021-01-10 15:35 GMT
photo/ndtv.com

ಹೊಸದಿಲ್ಲಿ,ಜ.10: ಹಲವಾರು ಕಳವು ಪ್ರಕರಣಗಳಲ್ಲಿ ಭಾಗಿಯಾಗಿ, ಕದ್ದ ಹಣವನ್ನು ದಾನ ಮಾಡುತ್ತಾ, ಐಶಾರಾಮಿ ಕಾರುಗಳನ್ನು ಕೊಳ್ಳುತ್ತಾ, ಆರೋಗ್ಯ ಶಿಬಿರಗಳನ್ನು ಏರ್ಪಡಿಸುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಹೊಸದಿಲ್ಲಿಯಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದು, ಪಂಜಾಬ್‌ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಈತ ಕಳ್ಳತನ ಮಾಡಿದ್ದ ಎಂದು ತಿಳಿದು ಬಂದಿದೆ. 

ಈತ ಬಿಹಾರದ ಸೀತಾಮರಿ ಜಿಲ್ಲೆಯ ನಿವಾಸಿಯಾಗಿದ್ದು, ಅಲ್ಲಿನ ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಸ್ಫರ್ಧಿಸಲು ಮುಂದಾಗಿದ್ದ ಎನ್ನಲಾಗಿದೆ. ಬಡವರ ರಕ್ಷಕನಾಗಬೇಕು ಎಂಬ ನಿಟ್ಟಿನಲ್ಲಿ ಈತ ಕದ್ದ ಹಣದಿಂದ ಹಲವಾರು ಮಂದಿಗೆ ದಾನ ಮಾಡಿದ್ದ ಹಾಗೂ ಹಳ್ಳಿಗಳಲ್ಲಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸುತ್ತಿದ್ದ ಎಂದು ndtv.com ವರದಿ ತಿಳಿಸಿದೆ.

ಆರೋಪಿಯನ್ನು ಮುಹಮ್ಮದ್‌ ಇರ್ಫಾನ್‌ ಎಂದು ಗುರುತಿಸಲಾಗಿದ್ದು, ಪೂರ್ವ ದಿಲ್ಲಿಯ ನರೈನಾ ಫ್ಲೈ ಓವರ್‌ ಬಳಿ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಶ್ರೀಮಂತರಿಂದ ಮಾತ್ರ ಕಳ್ಳತನ ಮಾಡುತ್ತಿದ್ದೆ, ಹಣ ಮತ್ತು ಚಿನ್ನವಲ್ಲದೇ ಬೇರೇನನ್ನೂ ಕದ್ದಿಲ್ಲ ಎಂದು ವಿಚಾರಣೆಯ ವೇಳೆ ಈತ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ಬಂಧಿತನಿಂದ ಒಂದು ಜಾಗ್ವಾರ್‌ ಕಾರು ಹಾಗೂ ಎರಡು ಬೆಲೆಬಾಳುವ ನಿಸ್ಸಾನ್‌ ಕಾರುಗಳನ್ನು ವಶಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News