×
Ad

ಮಂಗಳೂರು ; ದೋಣಿಯಲ್ಲಿ ಸಿಲಿಂಡರ್‌ ಸ್ಫೋಟ : ಕರಾವಳಿ ರಕ್ಷಣಾ ಪಡೆಯಿಂದ ಮೀನುಗಾರರ ರಕ್ಷಣೆ

Update: 2021-01-10 21:34 IST

ಮಂಗಳೂರು, ಜ.10: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯಲ್ಲಿ ಸಿಲಿಂಡರ್‌ವೊಂದು ರವಿವಾರ ಸ್ಫೋಟ ಗೊಂಡಿದೆ. ಬೋಟಿನಲ್ಲಿದ್ದ 11 ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಗಾಯಗೊಂಡ ಓರ್ವ ಮೀನುಗಾರ ಹಾಗೂ ಮೀನುಗಾರರನ್ನು ನವಮಂಗಳೂರು ಬಂದರಿಗೆ ಕರೆತರಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮಿಳುನಾಡು ಮೂಲದ ಮೀನುಗಾರಿಕಾ ನೌಕೆಯು ಮಂಗಳೂರಿನಿಂದ ಸುಮಾರು 140 ನಾಟಿಕಲ್ ಮೈಲಿ ದೂರಲ್ಲಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿತ್ತು. ಈ ಸಂದರ್ಭ ಬೋಟಿನಲ್ಲಿದ್ದ ಗ್ಯಾಸ್ ಸಿಲಿಂಡರ್ ದಿಢೀರ್ ಸ್ಫೋಟಗೊಂಡಿದೆ. ಪರಿಣಾಮ ದೋಣಿಯು ಬೆಂಕಿಗೆ ಆಹುತಿಯಾಗಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಭಾರತೀಯ ಕರಾವಳಿ ರಕ್ಷಣಾ ಪಡೆಯು ಕೂಡಲೇ ಕಾರ್ಯೋನ್ಮುಖವಾಯಿತು. ಮುಂಬೈ ಕರಾವಳಿ ರಕ್ಷಣಾ ಪಡೆಯಿಂದ ಸಾಚೇತ್ ಮತ್ತು ಸುಜೀತ್ ಎನ್ನುವ ಎರಡು ಕಾವಲು ನೌಕೆಗಳನ್ನು ಸಹಾಯಕ್ಕಾಗಿ ಕಳುಹಿಸಲಾ ಯಿತು. ಅಲ್ಲದೆ, ಅಪಾಯಕ್ಕೆ ಈಡಾಗಿದ್ದ ದೋಣಿಯ ತ್ವರಿತ ಪತ್ತೆಗಾಗಿ ಡಾರ್ನಿಯರ್ ವಿಮಾನವನ್ನೂ ಕಳುಹಿಸಲಾಯಿತು.

ಈ ಪಡೆಯು ದೋಣಿ ಪತ್ತೆ ಮಾಡಿದ್ದಲ್ಲದೆ, ಮೀನುಗಾರರ ನೌಕೆಯೊಂದಿಗೆ ಸಂವಹನ ಸಾಧಿಸಿ ಧೈರ್ಯ ತುಂಬುವಲ್ಲಿಯೂ ಸಫಲವಾಯಿತು. ಅದೇ ಸ್ಥಳಕ್ಕೆ ಕೋಸ್ಟ್‌ಗಾರ್ಡ್ ನೌಕೆಗಳೆರಡೂ ತಲಪಿದ್ದು ತಕ್ಷಣವೇ ತೀವ್ರ ಗಾಯಗೊಂಡ ಓರ್ವನನ್ನು ಪ್ರಥಮ ಚಿಕಿತ್ಸೆಗೊಳಪಡಿಸಿ ಕರಾವಳಿ ಒಡೆಯ ನೌಕೆಗೆ ಸ್ಥಳಾಂತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News