ಬಹುಮಾನದ 20 ಲಕ್ಷ ರೂ. ಪಡೆಯಲು ನಕಲಿ ಎನ್‌ಕೌಂಟರ್: ಶೋಫಿಯಾನ್ ಎನ್‌ಕೌಂಟರ್ ಕುರಿತ ಆರೋಪಪಟ್ಟಿಯಲ್ಲಿ ಉಲ್ಲೇಖ

Update: 2021-01-10 16:06 GMT
ಸಾಂದರ್ಭಿಕ ಚಿತ್ರ 

ಶ್ರೀನಗರ, ಜ.10: ಪುರಸ್ಕಾರದ ಜೊತೆಗೆ ಸಿಗುವ 20 ಲಕ್ಷ ರೂಪಾಯಿ ಪಡೆಯಲು ಮೂವರು ಯುವಕರನ್ನು ನಕಲಿ ಎನ್‌ಕೌಂಟರ್ ಮೂಲಕ ಹತ್ಯೆ ಮಾಡುವ ಕ್ರಿಮಿನಲ್ ಒಳಸಂಚನ್ನು ಕ್ಯಾಪ್ಟನ್ ಭೂಪಿಂದರ್ ಸಿಂಗ್ ಇಬ್ಬರು ಸ್ಥಳೀಯ ವ್ಯಕ್ತಿಗಳೊಂದಿಗೆ ರೂಪಿಸಿದ್ದರು ಎಂದು ಶೋಫಿಯಾನ್‌ನ ಅಂಶೀಪುರದಲ್ಲಿ 2020ರ ಜುಲೈ 18ರಂದು ನಡೆದಿದ್ದ ಎನ್‌ಕೌಂಟರ್‌ಗೆ ಸಂಬಂಧಿಸಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್‌ಗೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ನಾಗರೀಕರಾದ ತಬೀಷ್ ನಾಸಿರ್ ಮತ್ತು ಬಿಲಾಲ್ ಅಹ್ಮದ್‌ರ ಪಾತ್ರದ ಬಗ್ಗೆಯೂ ಉಲ್ಲೇಖಿಸಲಾಗಿದೆ. ಎನ್‌ಕೌಂಟರ್‌ನಲ್ಲಿ ಇಮ್ತಿಯಾಜ್ ಅಹ್ಮದ್, ಅಬ್ರಾರ್ ಅಹ್ಮದ್ ಮತ್ತು ಮುಹಮ್ಮದ್ ಇಬ್ರಾರ್‌ರನ್ನು ಹತ್ಯೆ ಮಾಡಲಾಗಿದ್ದು ಇವರಿಗೆ ಉಗ್ರರೆಂದು ಹಣೆಪಟ್ಟಿ ಕಟ್ಟಲಾಗಿತ್ತು. ಆದರೆ ಮೃತ ಯುವಕರು ಭಯೋತ್ಪಾದಕರಲ್ಲ ಎಂಬ ವರದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಸೇನೆಯು ಈ ಪ್ರಕರಣದ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಸೆಪ್ಟಂಬರ್‌ನಲ್ಲಿ ಸಲ್ಲಿಸಲಾದ ತನಿಖಾ ವರದಿಯಲ್ಲಿ ‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ಭದ್ರತಾ ಪಡೆ ಉಲ್ಲಂಘಿಸಿದೆ’ ಎಂದು ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸೇನೆಯು ಶಿಸ್ತು ಕ್ರಮ ಪ್ರಕ್ರಿಯೆ ಆರಂಭಿಸಿದ್ದು ಕ್ಯಾಪ್ಟನ್ ಸಿಂಗ್ ವಿರುದ್ಧ ಸೇನಾ ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆಗೆ ಸೂಚಿಸಿದೆ. ಡಿಎನ್‌ಎ ಪರೀಕ್ಷೆಯ ಮೂಲಕ ಮೃತ ಯುವಕರ ಗುರುತು ಪತ್ತೆಹಚ್ಚಿದ ಬಳಿಕ ಮೃತದೇಹಗಳನ್ನು ಅಕ್ಟೋಬರ್‌ನಲ್ಲಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಜಮ್ಮು ಕಾಶ್ಮೀರ ಪೊಲೀಸ್‌ನ ವಿಶೇಷ ತನಿಖಾ ತಂಡ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ 75 ಸಾಕ್ಷಿಗಳ ಹೇಳಿಕೆಯನ್ನೂ ಉಲ್ಲೇಖಿಸಲಾಗಿದೆ. ಪ್ರಕರಣದಲ್ಲಿ ಆರೋಪಿಗಳಾಗಿರುವವರ ಮೊಬೈಲ್ ಕರೆ ಮಾಹಿತಿಯ ದಾಖಲೆಯನ್ನೂ ಲಗತ್ತಿಸಲಾಗಿದೆ. ಕ್ಯಾಪ್ಟನ್ ಸಿಂಗ್ ಜತೆಗೆ ಎನ್‌ಕೌಂಟರ್ ನಡೆದ ಸ್ಥಳಕ್ಕೆ ತೆರಳಿದ್ದ ಸೇನಾ ಸಿಬ್ಬಂದಿಗಳಾದ ಸುಬೇದಾರ್ ಗರು ರಾಮ್, ಲ್ಯಾನ್ಸ್‌ನಾಕ್ ರವಿ ಕುಮಾರ್, ಸಿಪಾಯಿಗಳಾದ ಅಶ್ವಿನಿ ಕುಮಾರ್ ಮತ್ತು ಯೋಗೇಶ್ ಹೇಳಿಕೆಯನ್ನೂ ಇರಿಸಲಾಗಿದೆ. ‘ಕ್ಯಾಪ್ಟನ್ ಸಿಂಗ್, ಇಬ್ಬರು ಸ್ಥಳೀಯ ವ್ಯಕ್ತಿಗಳೊಂದಿಗೆ ಎನ್‌ಕೌಂಟರ್ ಸ್ಥಳಕ್ಕೆ ತೆರಳಿದ್ದೆವು. ಅಲ್ಲಿ ತಲುಪಿದೊಡನೆ ವಿಭಿನ್ನ ದಿಕ್ಕಿನಲ್ಲಿ ಪ್ರದೇಶವನ್ನು ಸುತ್ತುವರಿಯುವಂತೆ ನಮಗೆ ಕ್ಯಾಪ್ಟನ್ ಸೂಚಿಸಿದರು. ನಾವು ಕಾರ್ಯಪ್ರವೃತ್ತರಾಗುವ ಮೊದಲೇ ಯುವಕರತ್ತ ಗುಂಡು ಹಾರಿಸಲಾಗಿದೆ’ ಎಂದು ಸೇನಾ ಸಿಬ್ಬಂದಿಗಳು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News