×
Ad

ರಾಮಕೃಷ್ಣ ಮಿಷನ್‌ನಿಂದ ಸ್ವಚ್ಛತಾ ಅಭಿಯಾನ ಪುನಾರಂಭಿಸಲು ನಿರ್ಧಾರ

Update: 2021-01-10 22:13 IST

ಮಂಗಳೂರು, ಜ.10: ರಾಮಕೃಷ್ಣ ಮಿಷನ್ ವತಿಯಿಂದ ನಗರದಲ್ಲಿ ನಡೆಸಲಾದ ಸ್ವಚ್ಛ ಮಂಗಳೂರು ಅಭಿಯಾನವನ್ನು ಮತ್ತೆ ಮುಂದಿನ ಐದು ವರ್ಷಗಳ ಕಾಲ ನಡೆಸಲು ನಿರ್ಧರಿಸಲಾಗಿದೆ.

ನಗರದ ಮಂಗಳಾದೇವಿ ರಾಮಕೃಷ್ಣ ಮಠದಲ್ಲಿ ರವಿವಾರ ನಡೆದ ‘ಸ್ವಚ್ಛ ಮಂಗಳೂರು ಮುಂದೇನು?- ಸಮಾಲೋಚನಾ ಸಭೆಯಲ್ಲಿ ನಾಗರಿಕರು, ಗಣ್ಯರು, ವಿವಿಧ ಸಂಘ ಸಂಸ್ಥೆ ಪ್ರತಿನಿಧಿಗಳ ಅಭಿಪ್ರಾಯದಂತೆ ಈ ತೀರ್ಮಾನ ಕೈಗೊಳ್ಳಲಾಯಿತು.

ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಪಾಲ್ಗೊಂಡ ಹಿರಿಯ ಕಾರ್ಯಕರ್ತರನ್ನು ಸೇರಿಸಿಕೊಂಡು ಸ್ವಚ್ಛ ಮಂಗಳೂರು ಫೌಂಡೇಶನ್ ಸ್ಥಾಪಿಸಲಾಗುವುದು. ಇದರ ಮೂಲಕ ಮುಂದಿನ ಎಲ್ಲ ಸ್ವಚ್ಛತಾ ಅಭಿಯಾನದ ಕಾರ್ಯಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಸ್ವಚ್ಛ ಮಂಗಳೂರು ಅಭಿಯಾನದೊಂದಿಗೆ ಹಸಿರು ಮಂಗಳೂರು ಯೋಜನೆಯನ್ನೂ ಸೇರಿಸಿ ಕೊಳ್ಳಲಾಗುವುದು. ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಅಭಿಯಾನ ಮುಂದುವರೆಸಲು ವಿನಂತಿಸಿದರು.

ಸ್ವಚ್ಛತೆ ಕುರಿತು ಜಾಗೃತಿಗಾಗಿ ಸ್ವಚ್ಛ ಮನಸ್ಸು ಕಾರ್ಯಕ್ರಮ ಪರಿಣಾಮಕಾರಿ ಎಂಬ ಅಭಿಪ್ರಾಯ ಮಂಡನೆಯಾಯಿತು.
ಈ ಸಂದರ್ಭ ಮಾತನಾಡಿದ ಚೆನ್ನೈನ ವೇದಾಂತ ಕೇಸರಿಯ ಸಂಪಾದಕ ಸ್ವಾಮಿ ಮಹಾಮೇಧಾನಂದ, ಕೊರೋನೋತ್ತರ ವರ್ಷದಲ್ಲಿ ಸಮಾಜದಲ್ಲಿ ಅಪೌಷ್ಠಿಕತೆ ದೊಡ್ಡ ಸವಾಲಾಗಿದೆ. ಸ್ವಸ್ಥ ಮಂಗಳೂರು ಎನ್ನುವ ಯೋಜನೆಯನ್ನು ಸೇರಿಸಿಕೊಂಡು ಕೊಳಚೆ ಪ್ರದೇಶದಲ್ಲಿನ ಬಡ ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ಒದಗಿಸುವುದೂ ಸೂಕ್ತ ಎಂದರು.

ನಿಟ್ಟೆ ಸಂಸ್ಥೆಗಳ ಮುಖ್ಯಸ್ಥ ನಿಟ್ಟೆ ವಿನಯ ಹೆಗ್ಡೆ ಮಾತನಾಡಿ, ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನವನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ. ರಾಮಕೃಷ್ಣ ಮಿಷನ್‌ನ ಎಲ್ಲ ಕಾರ್ಯಗಳಿಗೆ ತಮ್ಮ ಬೆಂಬಲವಿದೆ ಎಂದರು.

ಭಂಡಾರಿ ಫೌಂಡೇಶನ್ ಅಧ್ಯಕ್ಷ ಡಾ.ಮಂಜುನಾಥ ಭಂಡಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಸ್ವಾಗತಿಸಿದರು. ಸ್ವಚ್ಛ ಮಂಗಳೂರು ಸಂಚಾಲಕ ಏಕಗಮ್ಯಾನಂದಜಿ ಅಭಿಯಾನ ಸಾಗಿ ಬಂದ ದಾರಿ ಬಗ್ಗೆ ಮಾತನಾಡಿದರು.

ವಿವಿಧ ಸಲಹೆ ಸೂಚನೆಗಳು: ಕಸ ಪ್ರತ್ಯೇಕಿಸುವಿಕೆ ಬಗ್ಗೆ ಮನೆ ಮನೆಗಳಲ್ಲಿ ಜಾಗೃತಿಗೆ ವಿಭಿನ್ನ ಕಾರ್ಯವಾಗಬೇಕು ಎಂದು ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ, ವಾರ್ಡ್ ಮಟ್ಟದಲ್ಲಿ ಕಸ ಸಂಗ್ರಹ ಕೇಂದ್ರ ನಿರ್ಮಾಣವಾಗಬೇಕೆಂದು ಮಾಜಿ ಕಾರ್ಪೊರೇಟರ್ ಪ್ರಕಾಶ್ ಸಾಲಿಯಾನ್ ಹೇಳಿದರು.

ಕಲಾವಿದರನ್ನು ಬಳಸಿಕೊಂಡು ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಬೇಕು ಎಂದು ಜಾದೂಗಾರ ಕುದ್ರೋಳಿ ಗಣೇಶ್, ಕೇವಲ ಸ್ವಚ್ಛತಾ ಕಾರ್ಯವಷ್ಟೇ ಅಲ್ಲ, ಕಸ ಎಸೆದು ಗಲೀಜು ಮಾಡುವವರ ಮೇಲೆ ಕಠಿಣ ಕ್ರಮ, ದಂಡ ಹಾಕಬೇಕು ಎಂದು ಸಾಮಾಜಿಕ ಕಾರ್ಯಕರ್ತ ದೀಪು ಶೆಟ್ಟಿಗಾರ್, ಮಕ್ಕಳಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸುವುದು ಶಾಶ್ವತವಾದ ಕ್ರಮ ಎಂದು ಉಪನ್ಯಾಸಕಿ ಸರಿತಾ, ರಾಮಕೃಷ್ಣ ಆಶ್ರಮವೇ ಅಭಿಯಾನದ ನೇತೃತ್ವ ವಹಿಸಿದರೆ ಅದಕ್ಕೆ ಹೆಚ್ಚು ವಿಶ್ವಾಸಾರ್ಹತೆ ಇರುತ್ತದೆ ಎಂದು ಸದಾನಂದ ಉಪಾಧ್ಯಾಯ ಅಭಿಪ್ರಾಯಪಟ್ಟರು.

''ಸ್ವಚ್ಛ ಮಂಗಳೂರು ಅಭಿಯಾನಕ್ಕೆ ಸಹಕಾರ ನೀಡುವ ಮೂಲಕ ‘ವೇದಾಂತ ಇನ್ ಪ್ರಾಕ್ಟೀಸ್’ ಎಂಬ ಸ್ವಾಮಿ ವಿವೇಕಾನಂದರ ಸಂದೇಶವನ್ನು ಮಂಗಳೂರಿನ ಜನತೆ ಪಾಲಿಸಿದ್ದಾರೆ. ಸ್ವಚ್ಛ ಮಂಗಳೂರು ಅಭಿಯಾನ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ''.
-ಸ್ವಾಮಿ ಜಿತಕಾಮಾನಂದಜಿ
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರು

''ಸ್ವಚ್ಛ ಮಂಗಳೂರು ಅಭಿಯಾನದಡಿ ಮಡಿಕೆ ಕಾಂಪೋಸ್ಟ್ 4 ಸಾವಿರ ಮನೆಗಳಲ್ಲಿ ಅಳವಡಿಸಲಾಗಿದ್ದು, ಶೇ.90ರಷ್ಟು ಯಶಸ್ವಿಯಾಗಿದೆ. ಕಳೆದ ಮಾರ್ಚ್ 8ರಂದು ಆರಂಭಗೊಂಡ ಸ್ವಚ್ಛ ಉಬಾರ್ ಪರಿಕಲ್ಪನೆ ಮೂಲಕ ಉಪ್ಪಿನಂಗಡಿಯ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ. ಸ್ಟಾರ್ಟ್ ಅಪ್ ಯೋಜನೆಯಂತೆ ಪ್ರತಿದಿನ 1.5 ಟನ್ ಕಸ ನಿರ್ವಹಣೆ ಮಾಡಲಾಗುತ್ತಿದೆ.''
-ಸ್ವಾಮಿ ಏಕಗಮ್ಯಾನಂದಜಿ
ರಾಮಕೃಷ್ಣ ಮಠ ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News