ಜರ್ಮನಿಯಲ್ಲಿ ಕೋವಿಡ್-19 ಆರ್ಭಟ: ಕೊರೋನ ಮೂರನೇ ಅಲೆಗೆ ಜರ್ಮನಿ ತತ್ತರ

Update: 2021-01-10 18:23 GMT

ಮುಂಬರುವ ದಿನಗಳ ದೇಶದ ಪಾಲಿಗೆ ಸಂಕಷ್ಟಕರ: ಮರ್ಕೆಲ್ ಕಳವಳ

  ಬರ್ಲಿನ್,ಜ.1: ಜರ್ಮನಿಯಲ್ಲಿಯೂ ಕೊರೋನ ವೈರಸ್‌ನ ಅಟ್ಟಹಾಸ ಮಿತಿಮೀರಿದ್ದು, ಮಾರಣಾಂತಿಕ ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ ರವಿವಾರದ ವೇಳೆಗೆ 40 ಸಾವಿರವನ್ನು ದಾಟಿದೆ. ಈ ಮಧ್ಯೆ ಮುಂಬರುವ ದಿನಗಳು ದೇಶದ ಪಾಲಿಗೆ ಅತ್ಯಂತ ಕಷ್ಟಕರವಾಗಿವೆ ಎಂದು ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ 24 ತಾಸುಗಳಲ್ಲಿ ಜರ್ಮನಿಯಲ್ಲಿ 465 ಕೊರೋನ ಸಾವಿನ ಪ್ರಕರಣಗಳು ವರದಿಯಾಗಿರುವುದಾಗಿ ರಾಬರ್ಟ್ ಕೋಚ್ ರೋಗ ನಿಯಂತ್ರಣ ಸಂಸ್ಥೆ ತಿಳಿಸಿದೆ. ದೇಶದಲ್ಲಿ ಇದುವರೆಗೆ ಒಟ್ಟು 40,343 ಮಂದಿ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆಂದು ಅದು ಹೇಳಿದೆ.

ಈವರೆಗೆ 19 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗಲಿದ್ದು, ಶನಿವಾರದಿಂದೀಚೆಗೆ ಪ್ರತಿ ದಿನ 17 ಸಾವಿರಕ್ಕೂ ಅಧಿಕ ಮಂದಿಗೆ ಹೊಸತಾಗಿ ಸೋಂಕು ತಗಲಿದೆ ಎಂದು ಸಂಸ್ಥೆ ತಿಳಿಸಿದೆ.

  ಇತರ ಯುರೋಪಿಯನ್ ರಾಷ್ಟ್ರಗಳಿಗೆ ಹೋಲಿಸಿದರೆ ಜರ್ಮನಿಯು ಕೋವಿಡ್-19ನ ಮೊದಲ ಅಲೆಯನ್ನು ಉತ್ತಮವಾಗಿ ನಿಯಂತ್ರಿಸಿತ್ತು. ಆದರೆ ಎರಡನೆಯ ಅಲೆಯಿಂದ ಇಡೀ ದೇಶವು ಭಾರೀ ಆಘಾತ ಅನುಭವಿಸಿದೆ. ಯುರೋಪ್ ಒಕ್ಕೂಟದ ಅತ್ಯಧಿಕ ಜನಸಂಖ್ಯೆಯ ರಾಷ್ಟ್ರವಾದ ಜರ್ಮನಿಯು, ಕೊರೋನ ವೈರಸ್ ಹಾವಳಿಯನ್ನು ನಿಯಂತ್ರಿಸಲು ವ್ಯಾಪಕವಾಗಿ ಸಾಮಾಜಿಕ ನಿರ್ಬಂಧಗಳನ್ನು ವಿಧಿಸಿದೆ. ಪ್ರಸಕ್ತ ದೇಶಾದ್ಯಂತ 5 ಸಾವಿರಕ್ಕೂ ಅಧಿಕ ಮಂದಿ ರೋಗಿಗಳು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜರ್ಮನಿಯಲ್ಲಿ ಶೇ.80ರಷ್ಟು ತೀವ್ರ ನಿಗಾ ಘಟಕಗಳು ರೋಗಿಗಳಿಂದ ಭರ್ತಿಯಾಗಿವೆ. ಕೋವಿಡ್ ನಿಯಂತ್ರಣಕ್ಕಾಗಿ ಜರ್ಮನಿಯು ಶಾಲೆಗಳನ್ನು ಮುಚ್ಚುಗಡೆಗೊಳಿಸಿದೆ ಹಾಗೂ ಅನಗತ್ಯವಾದ ಅಂಗಡಿಗಳು, ಸಂಸ್ಕೃತಿ ಹಾಗೂ ಮನರಂಜನಾ ಕೇಂದ್ರಗಳನ್ನು ಜನವರಿ 31ರವರೆಗೆ ಬಂದ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News