ಪವರ್‌ಗ್ರಿಡ್ ವೈಫಲ್ಯ: ಕತ್ತಲಲ್ಲಿ ಮುಳುಗಿದ ಪಾಕ್

Update: 2021-01-10 17:53 GMT

 ಇಸ್ಲಾಮಾಬಾದ್,ಜ.10: ಶನಿವಾರ ರಾತ್ರಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದು, ಪಾಕಿಸ್ತಾನವು ವಸ್ತುಶಃ ಕತ್ತಲೆಯಲ್ಲಿ ಮುಳುಗಿತ್ತು. ಆದರೆ ರವಿವಾರ ದೇಶದ ಪ್ರಮುಖ ನಗರಗಳಲ್ಲಿ ವಿದ್ಯುತ್ ಸಂಪರ್ಕವನ್ನು ಹಂತಹಂತವಾಗಿ ಮರುಸ್ಥಾಪಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

 21 ಕೋಟಿಗೂ ಅಧಿಕ ಜನಸಂಖ್ಯೆಯಿರುವ ಪಾಕಿಸ್ತಾನದಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆಯು ತೀರಾ ಸಂಕೀರ್ಣವಾದ ಜಾಲವಾಗಿದೆ. ಪವರ್‌ಗ್ರಿಡ್‌ನ ಒಂದು ವಿಭಾಗದಲ್ಲಿ ಏನಾದರೂ ಸಮಸ್ಯೆಯುಂಟಾದಲ್ಲಿ ದೇಶವಿಡೀ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿರುತ್ತದೆ.

  ಶನಿವಾರ ದಕ್ಷಿಣ ಪಾಕಿಸ್ತಾನದ ವಿದ್ಯುತ್ ಗ್ರಿಡ್ ಒಂದರಲ್ಲಿ ಉಂಟಾದ ಎಂಜಿನಿಯರಿಂಗ್ ಲೋಪವು, ದೇಶದ ಇಡೀ ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಹಾನಿಯುಂಟು ಮಾಡಿತೆಂದು ವಿದ್ಯುತ್ ಸಚಿವ ಉಮರ್ ಅಯೂಬ್ ಖಾನ್ ರವಿವಾರ ತಿಳಿಸಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ತಜ್ಞರು ವಿದ್ಯುತ್ ಪೂರೈಕೆಯಲ್ಲಿ ಆಗಿರುವ ವ್ಯತ್ಯಯ ನಿಖರವಾದ ಸ್ಥಳವನ್ನು ನಿರ್ಧರಿಸಲು ಯತ್ನಿಸುತ್ತಿದ್ದಾರೆ. ಆದರೆ ಈವರೆಗೆ ಅದನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲವೆಂದು ತಿಳಿಸಿದರು.

 ಪಾಕಿಸ್ತಾನದ ಅತ್ಯಂತ ಜನದಟ್ಟಣೆಯ ಪ್ರಾಂತವಾದ ಪಂಜಾಬ್‌ನ ಬಹುತೇಕ ಪ್ರದೇಶಗಳು ಹಾಗೂ ದಕ್ಷಿಣ ಪಾಕ್‌ನ ವಾಣಿಜ್ಯ ಕೇಂದ್ರವಾದ ಕರಾಚಿಯಲ್ಲಿ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಲಾಗಿದೆಯೆಂದು ಅವರು ತಿಳಿಸಿದರು.

ಶನಿವಾರ ವಿದ್ಯುತ್ ಪೂರೈಕೆ ಸ್ಥಗಿತದಿಂದಾಗಿ ರಾಜಧಾನಿ ಇಸ್ಲಾಮಾಬಾದ್, ವಾಣಿಜ ನಗರಿ ಕರಾಚಿ ಹಾಗೂ ಪಾಕ್‌ನ ಎರಡನೇ ಅತಿ ದೊಡ್ಡ ನಗರವಾದ ಲಾಹೋರ್ ರಾತ್ರಿಯಿಡೀ ಅಂಧಕಾರದಲ್ಲಿ ಮುಳುಗಿದ್ದವು.

  ಆದಾಗ್ಯೂ ಪಾಕಿಸ್ತಾನದ ಆಸ್ಪತ್ರೆಗಳಲ್ಲಿ ಜನರೇಟರ್ ಸೌಲಭ್ಯವಿರುವ ಕಾರಣ ಅವುಗಳ ಕಾರ್ಯನಿರ್ವಹಣೆಗೆ ತೊಂದರೆಯಾಗಿರುವ ಬಗ್ಗೆ ಈವರೆಗೆ ಯಾವುದೇ ವರದಿಗಳು ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News