×
Ad

ಜ.13ರಂದು ರೆಡ್ ಕ್ರಾಸ್ ಸಂಸ್ಥೆಯಿಂದ ರಕ್ತ ಸಂಗ್ರಹ ಅಭಿಯಾನ

Update: 2021-01-11 16:22 IST

ಮಂಗಳೂರು, ಜ.11: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ರಕ್ತ ಸಂಗ್ರಹ ಅಭಿಯಾನ ಜ.13ರಂದು ಆರಂಭಗೊಳ್ಳಲಿದೆ. ದ.ಕ. ಈಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರದೊಂದಿಗೆ ನಡೆಯಲಿರುವ ರಕ್ತ ಸಂಗ್ರಹ ಅಭಿಯಾನಕ್ಕೆ ಲೇಡಿಹಿಲ್‌ನ ಪತ್ರಿಕಾಭವನದ ಮುಂಭಾಗದಲ್ಲಿ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಚಾಲನೆ ನೀಡಲಿರುವರು ಎಂದು ರೆಡ್‌ಕ್ರಾಸ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎ. ಶಾಂತರಾಮ ಶೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ರಕ್ತ ಸಂಗ್ರಹ ಮತ್ತು ರಕ್ತದಾನದ ಬಗ್ಗೆ ಜಾಗೃತಿ ಅಭಿಯಾನ ಜ.16ರ ತನಕ ನಡೆಯಲಿದೆ. ರಕ್ತ ಸಂಗ್ರಹಕ್ಕೆ ರೆಡ್ ಕ್ರಾಸ್ ರೋಟರಿ ಬಸ್ ನಗರದಾದ್ಯಂತ ಸಂಚರಿಲಿದ್ದು, ಈ ಬಸ್‌ನಲ್ಲಿ ಒಂದು ಬಾರಿ ಮೂವರಿಗೆ ರಕ್ತದಾನ ಮಾಡಲು ವ್ಯವಸ್ಥೆ ಇದೆ ಎಂದರು.

ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯ ಆವರಣದಲ್ಲಿರುವ ರೆಡ್‌ಕ್ರಾಸ್ ರಕ್ತನಿಧಿ ದಿನದ 24 ತಾಸು ನಿರಂತರವಾಗಿ ರೋಗಿಗಳ ರಕ್ತದ ಅಗತ್ಯತೆಯನ್ನು ಪೂರೈಸುವುದರೊಂದಿಗೆ ಅವರ ಜೀವ ಉಳಿಸುವ ಸೇವೆಯಲ್ಲಿ ನಿರತವಾಗಿದೆ. ನುರಿತ ವೈದ್ಯರು, ಅನುಭವಿ ಮತ್ತು ನಿಷ್ಠಾವಂತ ತಂತ್ರಜ್ಞರು ಹಾಗೂ ಸಿಬ್ಬಂದಿಗಳ ಪರಿಶ್ರಮದಿಂದ ಈ ರೆಡ್‌ಕ್ರಾಸ್ ರಕ್ತನಿಧಿ ಕಾರ್ಯ ನಿರ್ವಹಿಸುತ್ತಿದೆ. ನ್ಯಾಕೋ (ನ್ಯಾಶನಲ್ ಏಡ್ಸ್ ಕಂಟ್ರೋಲ್ ಆರ್ಗನೈಶೇಶನ್) ಮಾನ್ಯತೆ ಪಡೆದಿರುವ ನಮ್ಮ ರೆಡ್‌ಕ್ರಾಸ್ ರಕ್ತನಿಧಿ ನಿಯಮಾನುಸಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಏರ್ಪಡಿಸುವುದಲ್ಲದೆ, ಸಂಗ್ರಹಿಸಲ್ಪಟ್ಟ ರಕ್ತವನ್ನು ಕ್ರಮಬದ್ಧವಾಗಿ ಗುಂಪುವಾರು ವಿಂಗಡಿಸಿ ಎಲೈಸಾ ಇತ್ಯಾದಿ ಪರೀಕ್ಷೆಗಳನ್ನು ನಡೆಸಿ ರೋಗಿಗಳ ಕಡೆಯಿಂದ ಅವರ ವೈದ್ಯರ ಮೂಲಕ ಬರುವ ರಕತಿವನ್ನು ಮ್ಯಾಚಿಂಗ್ ಮಾಡಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ನಮ್ಮ ರಕ್ತನಿಧಿಯಲ್ಲಿ ಬದಲಿ ರಕ್ತಕ್ಕೆ ಒತ್ತಾಯಿಸದೇ ರಕ್ತವನ್ನು ನೀಡುವ ನೀತಿಯನ್ನು ಜಾರಿಗೆ ತರಲಾಗಿದೆ. ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯಿಂದ ಬರುವ ರಕ್ತ ಕೋರಿಕೆಯನ್ನು ಆದ್ಯತೆಯ ಮೇಲೆ ಪರಿಗಣಿಸಿ ರಕ್ತ ಹಾಗೂ ಅದರ ಘಟಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಪ್ರತಿ ತಿಂಗಳು ಸರಿಸುಮಾರು 250 ರಿಂದ 300 ಯುನಿಟ್‌ಗಳಷ್ಟು ರಕ್ತವನ್ನು ಲೇಡಿಗೋಶನ್ ಆಸ್ಪತ್ರೆಗೆ ನೀಡಲಾಗುತ್ತಿದ್ದು, ಇದೇ ಡಿಸೆಂಬರ್ ತಿಂಗಳಲ್ಲಿ 345 ಯುನಿಟ್ ರಕ್ತವನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಕೊರೋನ ಲಾಕ್‌ಡೌನ್ ಸಂದರ್ಭದಲ್ಲಿ ಕೂಡಾ ರಕ್ತದಾನ ಶಿಬಿರಗಳನ್ನು ಸಂಘಟಿಸಿ ರಕ್ತದ ಕೊರತೆಯಿಂದಾಗಿ ಜೀವ ಹಾನಿ ಉಂಟಾಗದಟತೆ ರೆಡ್‌ಕ್ರಾಸ್ ಕಾರ್ಯನಿರ್ವಹಿಸಿದೆ. ನಗರದ ಆಸ್ಪತ್ರೆಗಳಲ್ಲದೆ ಜಿಲ್ಲೆಯ ಇತರ ಆಸ್ಪತ್ರೆಗಳಿಗೆ ಮತ್ತು ಬೇರೆ ಜಿಲ್ಲೆಗಳಿಗೆ ಕೂಡ ರಕ್ತ ನೀಡಿ ಕೊರೋನ ಲಾಕ್‌ಡೌನ್ ಸಂದರ್ಭದಲ್ಲಿ ರಕ್ತದ ಕೊರತೆಯನ್ನು ನೀಗಿಸಿದೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿ ಎಸ್.ಎ. ಪ್ರಭಾಕರ ಶರ್ಮಾ, ಸದಸ್ಯರಾದ ಬಿ.ರವೀಂದ್ರ ಶೆಟ್ಟಿ , ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾ ಹೀಂ ಅಡ್ಕಸ್ಥಳ ಉಪಸ್ಥಿತರಿದ್ದರು.

ಸ್ವಯಂ ಪ್ರೇರಿತ ರಕ್ತದಾನಿಗಳಿಗೆ ಆಹ್ವಾನ

ಪ್ರತಿ ತಿಂಗಳು ನಮ್ಮ ರಕತಿನಿಧಿಗೆ ಸುಮಾರು 1000ಕ್ಕೂ ಹೆಚ್ಚು ಯುನಿಟ್‌ಗಳ ರಕ್ತ ಸಂಗ್ರಹವಾಗಬೇಕಾಗಿದೆ. ಕಾಲೇಜುಗಳು ಪ್ರಾರಂಭವಾಗದೇ ಇರುವುದರಿಂದ ವಿದ್ಯಾರ್ಥಿಗಳಿಂದ ರಕ್ತದಾನ ಮಾಡಲಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ರೋಟರಿ ಕ್ಲಬ್ ಮಂಗಳೂರು ಇವರು ರೆಡ್‌ಕ್ರಾಸ್‌ಗೆ ನೀಡಿರುವ ರಕ್ತ ಸಂಚಾರಿ ಘಟಕ (ಬಸ್) ಅತ್ಯಂತ ಪ್ರಯೋಜನಕಾರಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಭಾರತೀಯ ರೆಡ್‌ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾ ಘಟಕ ಜಂಟಿಯಾಗಿ ರಕ್ತದಾನ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿವೆ. ರಕ್ತದಾನ ಮಾಡಬಯಸುವ ವ್ಯಕ್ತಿಗಳು/ ಸಂಘ ಸಂಸ್ಥೆಗಳು/ಕಾಲೇಜುಗಳು ರೆಡ್‌ಕ್ರಾಸ್ ಸಂಯೋಜಕ ಪ್ರವೀಣ ಕುಮಾರ್ (ಮೊ. 9916262459) ಇವರನ್ನು ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News