ರೈತರ ಪ್ರತಿಭಟನೆಯ ಕುರಿತು ಕೇಂದ್ರ ಸರಕಾರಕ್ಕೆ ಸುಪ್ರೀಂ ಛಾಟಿಯೇಟು: ಇಲ್ಲಿದೆ 5 ಪ್ರಮುಖ ಹೇಳಿಕೆಗಳು

Update: 2021-01-11 13:23 GMT

ಹೊಸದಿಲ್ಲಿ,ಜ.11: ಕೇಂದ್ರ ಜಾರಿಗೊಳಿಸಿರುವ ಕೃಷಿ ಕಾನೂನುಗಳ ವಾಪಸಾತಿಗೆ ಆಗ್ರಹಿಸಿ ಕಳೆದ ಹಲವಾರು ದಿನಗಳಿಂದ ದಿಲ್ಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳ ಕುರಿತಂತೆ ಇಂದಿನ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಕೇಂದ್ರಕ್ಕೆ ಛಾಟಿಯೇಟು ಬೀಸಿದೆ. ಇಲ್ಲಿಯ ತನಕ ಸರಕಾರ ಮತ್ತು ರೈತ ಪ್ರತಿನಿಧಿಗಳ ನಡುವೆ  ಎಂಟು ಸುತ್ತಿನ ಮಾತುಕತೆಗಳು ವಿಫಲವಾಗಿರುವುದು ಹಾಗೂ  ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಹಲವು ರೈತರು ಸಾವನ್ನಪ್ಪಿರುವ ಬೆಳವಣಿಗೆಗಳು ಸುಪ್ರೀಂ ಕೋರ್ಟ್ ತಾಳ್ಮೆಯನ್ನು ಪರೀಕ್ಷಿಸಿವೆ.

ಇಂದಿನ ಕಲಾಪದ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ನೀಡಿದ ಹೇಳಿಕೆಗಳಲ್ಲಿ ಪ್ರಮುಖ ೫ ಅಂಶಗಳನ್ನು ndtv.com ವರದಿ ಮಾಡಿದೆ. ಅವು ಈ ಕೆಳಗಿನಂತಿವೆ.

1. "ನಮಗೆ ತಾಳ್ಮೆ ಕುರಿತು ಭಾಷಣ ನೀಡಬೇಡಿ... ನಮಗೀಗಾಗಲೇ ಉದ್ದನೆಯ ಹಗ್ಗವೊಂದನ್ನು ನೀಡಲಾಗಿದೆ. ನೀವು (ಕೇಂದ್ರ ಸರಕಾರ) ಪರಿಹಾರದ ಕಡೆಗಿದ್ದೀರೋ? ಅಥವಾ ತೊಂದರೆಯ ಕಡೆಗಿದ್ದೀರೋ?

2. "ನಾವು ಕೃಷಿ ಮತ್ತು ಅರ್ಥಶಾಸ್ತ್ರದ ತಜ್ಞರಲ್ಲ. ನೀವು ಈ ಕಾನೂನುಗಳನ್ನು  ತಡೆ ಹಿಡಿಯುತ್ತೀರೋ  ಎಂದು ನಮಗೆ ಹೇಳಿ, ಇಲ್ಲದೇ ಇದ್ದರೆ ನಾವೇ ಅದನ್ನು ಮಾಡುತ್ತೇವೆ. ಇಲ್ಲಿ ಪ್ರತಿಷ್ಠೆಯ ವಿಚಾರ ಎಲ್ಲಿದೆ?" ಎಂದು ಸಿಜೆಐ ಬೊಬ್ಡೆ ಸರಕಾರವನ್ನು ಪ್ರಶ್ನಿಸಿದರು.

3. "ಮುಂದೊಂದು ದಿನ ಶಾಂತಿ ಭಂಗವಾಗುವ ಭಯ ನಮಗಿದೆ. ಏನಾದರೂ ತಪ್ಪಾದರೆ ನಮ್ಮಲ್ಲಿ ಪ್ರತಿಯೊಬ್ಬರೂ ಜವಾಬ್ದಾರರಾಗುತ್ತೇವೆ. ನಮ್ಮ ಕೈಗಳಲ್ಲಿ ಯಾವುದೇ ಗಾಯಗಳು ಹಾಗೂ ರಕ್ತ ನಮಗೆ ಬೇಡ," 

4. ಸರಕಾರ ಈ ವಿಚಾರವನ್ನು ನಿಭಾಯಿಸಿದ ರೀತಿಯಿಂದ ನಿರಾಸೆಯಾಗಿದೆ. ನೀವು ಈ ವಿಚಾರವನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತಿರುವುದು ನಮಗೆ ಕಾಣಿಸುತ್ತಿಲ್ಲ ಕಾನೂನು ಜಾರಿಗೊಳಿಸುವ ಮುನ್ನ  ಯಾವ ಸಲಹಾ ಪ್ರಕ್ರಿಯೆ ನೀವು ಅನುಸರಿಸಿದ್ದೀರೆಂದು ನಮಗೆ ತಿಳಿದಿಲ್ಲ, ಈ ವಿಚಾರವನ್ನು ಸೌಹಾರ್ದಯುತವಾಗಿ ಪರಿಹರಿಸುವುದು ನಮ್ಮ ಉದ್ದೇಶ,"

5. "ಪ್ರತಿಭಟಿಸುವ ಹಕ್ಕು ಇದೆ. ಮಹಾತ್ಮ ಗಾಂಧೀಜಿಯ ಸತ್ಯಾಗ್ರಹದಂತೆ ಪ್ರತಿಭಟನೆಯ ಹಕ್ಕನ್ನು ಚಲಾಯಿಸಬೇಕು. ಅದು ಶಾಂತಿಯುತವಾಗಿರಬೇಕು," ಎಂದು ಹೇಳಿದ ಸುಪ್ರೀಂ ಕೋರ್ಟ್, ʼಕೇಂದ್ರ ಸರಕಾರ ಹಿಂದಿನ ಸರಕಾರಗಳನ್ನು ದೂರಲು ಸಾಧ್ಯವಿಲ್ಲ. "ನಾವು ಹಿಂದಿನ ವಿಚಾರಣೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರವಿಲ್ಲ. ಪರಿಸ್ಥಿತಿ ಕೆಟ್ಟದಾಗಿದೆ. ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಈ ಹವಾಮಾನದಲ್ಲಿ  ವೃದ್ಧರು ಹಾಗೂ ಮಹಿಳೆಯರು ಏಕೆ ಪ್ರತಿಭಟನೆಯ ಭಾಗವಾಗಿದ್ದಾರೆ?  ಹಿರಿಯ ನಾಗರಿಕರು, ಮಹಿಳೆಯರು ಮಕ್ಕಳು ಹಿಂದೆ ಹೋಗಲಿ," ಎಂದು ಸಿಜೆಐ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News