ಉಡುಪಿ: ಸೋಮವಾರ ಪಿಯುಸಿ ಶೇ.85.47, ಎಸೆಸೆಲ್ಸಿ ಶೇ.84 ಹಾಜರಾತಿ

Update: 2021-01-11 13:36 GMT
ಸಾಂದರ್ಭಿಕ ಚಿತ್ರ

ಉಡುಪಿ, ಜ.11: ಜಿಲ್ಲೆಯಲ್ಲಿ ಸೋಮವಾರ ದ್ವಿತೀಯ ಪಿಯುಸಿಯಲ್ಲಿ ಶೇ. 85.20ರಷ್ಟು ಹಾಗೂ ಎಸೆಸೆಲ್ಸಿಯಲ್ಲಿ ಶೇ.84.6ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದಾರೆ. ವಿದ್ಯಾಗಮದಲ್ಲಿ 6ನೇ ತರಗತಿಯ ಶೇ.68 ಹಾಗೂ 9ನೇ ತರಗತಿಯ ಶೇ.68ರಷ್ಟು ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ದ್ದಾರೆ ಎಂದು ಜಿಲ್ಲಾ ವಿದ್ಯಾಂಗ ಇಲಾಖೆಗಳು ನೀಡಿದ ಮಾಹಿತಿಗಳು ತಿಳಿಸಿವೆ.

 ದ್ವಿತೀಯ ಪಿಯುಸಿಯ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಒಟ್ಟು 14317 ವಿದ್ಯಾರ್ಥಿಗಳಿದ್ದು, ಇವರಲ್ಲಿ 12,238 ಮಂದಿ (ಶೇ.85.47) ಇಂದು ತರಗತಿಗೆ ಹಾಜರಾಗಿದ್ದಾರೆ. 7282 ಬಾಲಕರ ಪೈಕಿ 5722 ಮಂದಿ (ಶೇ.78.57) ಹಾಗೂ 7549 ಬಾಲಕಿಯರ ಪೈಕಿ 6515 (ಶೇ.86.30) ಮಂದಿ ಇಂದು ತರಗತಿಯಲ್ಲಿ ಪಾಠ ಕೇಳಿದ್ದಾರೆ.

ಎಸೆಸೆಲ್ಸಿ ಶೇ.84.6: ಎಸೆಸೆಲ್ಸಿಯಲ್ಲಿ ಜಿಲ್ಲೆಯ ಐದು ವಲಯಗಳಲ್ಲಿ ಒಟ್ಟಾರೆಯಾಗಿ ಶೇ.84.6ರಷ್ಟು ವಿದ್ಯಾರ್ಥಿಗಳು ಸೋಮವಾರ ತರಗತಿಗಳಿಗೆ ಖುದ್ದಾಗಿ ಹಾಜರಾಗಿದ್ದಾರೆ. ಇವರಲ್ಲಿ ಸರಕಾರಿ ಶಾಲೆಗಳ ಶೇ.89, ಅನುದಾನಿತ ಶಾಲೆಗಳ ಶೇ.82 ಹಾಗೂ ಅನುದಾನ ರಹಿತ ಶಾಲೆಗಳ ಶೇ.83ರಷ್ಟು ಮಂದಿ ಮಕ್ಕಳು ಸೇರಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.

ವಿದ್ಯಾಗಮ ತರಗತಿ: 6 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂದು ನಡೆದ ವಿದ್ಯಾಗಮ ತರಗತಿಗಳಿಗೆ ಕ್ರಮವಾಗಿ ಶೇ.68 ಹಾಗೂ ಶೇ.68ರಷ್ಟು ವಿದ್ಯಾರ್ಥಿಗಳು ಪಾಠ ಆಲಿಸಲು ಹಾಜರಾಗಿದ್ದರು. ಆರನೇ ತರಗತಿಯ ಸರಕಾರಿ ಶಾಲೆಗಳಲ್ಲಿ ಶೇ.81ರಷ್ಟು, ಅನುದಾನಿತ ಶಾಲೆಗಳಲ್ಲಿ ಶೇ.72 ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಶೇ.51ರಷ್ಟು ಬಾಲಕ-ಬಾಲಕಿಯರು ಹಾಜರಾಗಿದ್ದರೆ, ಒಂಭತ್ತನೇ ತರಗತಿಗೆ ಸರಕಾರಿ ಶಾಲೆಗಳಲ್ಲಿ ಶೇ.75, ಅನುದಾನಿತ ಶಾಲೆಗಳಲ್ಲಿ ಶೇ.69 ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳು ಪಾಠ ಕಲಿಯಲು ಆಗಮಿಸಿದ್ದರು ಎಂದು ಮಾಹಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News