ಕಾರು, ರಸ್ತೆ, ಇಂಗಾಲದ ಹೊರಸೂಸುವಿಕೆ ಇಲ್ಲದ ನಗರವನ್ನು ಸೃಷ್ಟಿಸಲಿರುವ ಸೌದಿ ಅರೇಬಿಯಾ

Update: 2021-01-11 17:33 GMT

ರಿಯಾದ್ (ಸೌದಿ ಅರೇಬಿಯ), ಜ. 11: ತೈಲವನ್ನು ಹೊರತುಪಡಿಸಿದ ಸೌದಿ ಅರೇಬಿಯದ ಭವಿಷ್ಯಕ್ಕೆ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಹೊಸ ಕಲ್ಪನೆಯೊಂದನ್ನು ಸೇರಿಸಿದ್ದಾರೆ. ಕಾರುಗಳು, ರಸ್ತೆಗಳು ಮತ್ತು ಇಂಗಾಲ ಅನಿಲಗಳ ಹೊರಸೂಸುವಿಕೆಯಿಲ್ಲದ ನಗರವೊಂದರ ಕಲ್ಪನೆಯನ್ನು ಅವರು ಮುಂದಿಟ್ಟಿದ್ದಾರೆ.

‘ನಿಯೋಮ್’ ಎಂಬ 500 ಬಿಲಿಯ ಡಾಲರ್ (36.72 ಲಕ್ಷ ಕೋಟಿ ರೂಪಾಯಿ) ಯೋಜನೆಯ ಭಾಗವಾಗಿ 170 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ‘ದ ಲೈನ್’ ಎಂಬ ವಲಯವೊಂದನ್ನು ಸೃಷ್ಟಿಸಲಾಗುತ್ತದೆ ಎಂದು ರವಿವಾರ ಟೆಲಿವಿಶನ್‌ನಲ್ಲಿ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ಯುವರಾಜ ಹೇಳಿದರು. 2021ರ ಪ್ರಥಮ ತ್ರೈಮಾಸಿಕದಲ್ಲಿ ಯೋಜನೆಯ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ.

‘ದ ಲೈನ್’ ಎನ್ನುವುದು ನಡೆದಾಡುವ ವಲಯವಾಗಿರುತ್ತದೆ. ಅಲ್ಲಿ ಕಾರುಗಳು ಮತ್ತು ರಸ್ತೆಗಳು ಇರುವುದಿಲ್ಲ. ಹಾಗೂ ಪ್ರಕೃತಿಯ ನಡುವೆ ಅದನ್ನು ನಿರ್ಮಿಸಲಾಗುತ್ತದೆ’’ ಎಂದು ಪ್ರಕಟನೆಯೊಂದು ತಿಳಿಸಿದೆ. ನಗರದಲ್ಲಿ 2030ರ ವೇಳೆಗೆ 10 ಲಕ್ಷ ನಿವಾಸಿಗಳಿರುತ್ತಾರೆ ಹಾಗೂ 3,80,000 ಉದ್ಯೋಗಗಳ ಸೃಷ್ಟಿಯಾಗುತ್ತದೆ.

ಈ ಯೋಜನೆಯನ್ನು 2017ರಲ್ಲಿ ಘೋಷಿಸಲಾಗಿದ್ದು, ವಾಯುವ್ಯ ಸೌದಿ ಅರೇಬಿಯದ ಕಡಿಮೆ ಸಂಪರ್ಕಿತ ಪ್ರದೇಶವೊಂದರಲ್ಲಿ 10,000 ಚದರ ಮೈಲಿಗೂ ಅಧಿಕ ವಿಸ್ತೀರ್ಣವನ್ನು ಹೊಂದಿರುತ್ತದೆ.

ಈ ಯೋಜನೆ ಘೋಷಣೆಯಾದಂದಿನಿಂದಲೂ ವಿವಾದಕ್ಕೆ ಗುರಿಯಾಗುತ್ತಾ ಬಂದಿದೆ ಹಾಗೂ ಅದರ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ. ಯೋಜನೆಯು ವಾಸ್ತವಿಕವೇ ಎಂಬುದಾಗಿ ಹಲವು ವಿಶ್ಲೇಷಕರು ಪ್ರಶ್ನಿಸಿದ್ದಾರೆ.

ಎಲ್ಲ ಮೂಲಸೌಕರ್ಯ ಲಭ್ಯ

►ಕೇವಲ 5 ನಿಮಿಷ ನಡೆದರೆ ಹಸಿರು ಪರಿಸರ

‘ದ ಲೈನ್’ ನಗರವು ನಗರಾಭಿವೃದ್ಧಿಯ ಕಲ್ಪನೆಯನ್ನೇ ಬದಲಿಸುತ್ತದೆ. ಇಲ್ಲಿ ಮಾನವರೇ ಪ್ರಮುಖ ಆಧಾರಸ್ತಂಭಗಳು.

ಜೀವನ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶವನ್ನು ಅದು ಹೊಂದಿದೆ. ಆರೋಗ್ಯ ಕೇಂದ್ರಗಳು, ಶಾಲೆಗಳು ಮತ್ತು ಇತರ ಮೂಲಸೌಕರ್ಯಗಳು ಲಭ್ಯವಿರುತ್ತವೆ. ಮನರಂಜನೆ ಹಾಗೂ ಅತಿ ವೇಗದ ಪರ್ಯಾಯ ಸಾರಿಗೆ ವ್ಯವಸ್ಥೆ ಲಭಿಸುತ್ತದೆ. ಅದೂ ಅಲ್ಲದೆ, ಕೇವಲ 5 ನಿಮಿಷ ನಡೆದರೆ ಹಸಿರು ಪರಿಸರ ಸಿಗುವಂಥ ವಿನ್ಯಾಸ ರೂಪಿಸಲಾಗುವುದು.

ನಗರದಲ್ಲಿ ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ ಹಾಗೂ ಈ ಮೂಲಕ ಮಾನವರ ನಡುವಿನ ಸಂಪರ್ಕ ವಿಧಾನದಲ್ಲಿ ಕ್ರಾಂತಿಯನ್ನೇ ಮಾಡಲಿದೆ. ಇದು ನಿವಾಸಿಗಳು ಮತ್ತು ಕಂಪೆನಿಗಳ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News