ಗ್ರಾಮ ಪಂಚಾಯತ್ ಮಟ್ಟದಲ್ಲಿಯೇ ಜಾತಿ, ಆದಾಯ ಪ್ರಮಾಣ ಪತ್ರ ವಿತರಣೆಗೆ ಕ್ರಮ: ಸಚಿವ ಕೋಟ

Update: 2021-01-11 15:20 GMT

ಬಂಟ್ವಾಳ, ಜ.11: ಗ್ರಾಮ ಪಂಚಾಯತ್ ಸದಸ್ಯರು ಕ್ರಿಯಾಶೀಲತೆಯೊಂದಿಗೆ ಹಳ್ಳಿ‌ ಸರಕಾರದಂತೆ ಕಾರ್ಯನಿರ್ವಹಿಸಬೇಕು. ಇದಕ್ಕೆ ಪೂರಕವಾಗಿ ಜಾತಿ‌ ಮತ್ತು ಆದಾಯ ಪ್ರಮಾಣ ಪತ್ರವನ್ನು ಗ್ರಾಮ ಮಟ್ಟದಲ್ಲಿಯೇ ವಿತರಿಸಲು ಸರಕಾರ ಕ್ರಮಕೈಗೊಳ್ಳಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. 

ಬಂಟ್ವಾಳದ ಬಂಟರ ಭವನದಲ್ಲಿ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಜನಸೇವಕ ಸಮಾವೇಶದಲ್ಲಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯರಿಗೆ ನಡೆಯಲಿರುವ ತರಬೇತಿಯನ್ನು ಎಲ್ಲಾ ಸದಸ್ಯರು ಪಡೆದು ಸದಸ್ಯರ ಕಾರ್ಯನೀತಿಯ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದು ಅವರು ಹೇಳಿದರು.

ರಾಜ್ಯ ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಗೋಮಾತೆಯ ಶಾಪದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿಯನ್ನು ಕಳೆದುಕೊಂಡಿದ್ದಾರೆ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದಾರೆ. ಪಾಕಿಸ್ಥಾನ ಝಿಂದಾಬಾದ್ ಘೋಷಣೆ ಕೂಗಿರುವುದನ್ನು ಖಂಡಿಸುವ ಯೋಗ್ಯತೆ ಇಲ್ಲದ ಸಿದ್ದರಾಮಯ್ಯ ಗೋಮಾಂಸ ತಿನ್ನುತ್ತೇನೆ ಎಂದು ಹೇಳುತ್ತಾರೆ. ಅವರು ಗೋ ಮಾಂಸ ತಿಂದು ಸಾಯಲಿ ಎಂದು ನುಡಿದರು. 

ಗೋಮಾತೆಯನ್ನು‌ ನಿಂದಿಸಿದ ಪಕ್ಷಗಳು ನೆಲಕಚ್ಚಿ ಹೋಗಿವೆ. ಪ್ರತಿದಿನ ಸಿದ್ದರಾಮಯ್ಯ ಅವರ ಕನಸಿನಲ್ಲಿ ನಳಿನ್ ಕುಮಾರ್ ಕಟೀಲು ಬರುತ್ತಾರೆ. ಆ ಹಂತದಲ್ಲಿ ನಳಿನ್‌ ಕುಮಾರ್ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಹಳ್ಳಿ ಜನ ಕಾಂಗ್ರೆಸ್ ಅನ್ನು ಮಣ್ಣುಮುಕ್ಕಿಸಿದ್ದಾರೆ ಎಂದು ಈಶ್ವರಪ್ಪ ಹೇಳಿದರು. 

ಎರಡು ಪಂಚಾಯತ್ ಗೆದ್ದ ಪಕ್ಷದವರು ಪಾಕಿಸ್ಥಾನಕ್ಕೆ ಜೈಕಾರ ಹಾಕುವ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ಪಾಕಿಸ್ತಾನ‌ ಝಿಂದಾಬಾದ್ ಎಂದು ಕೂಗಿದವರು ಮತ್ತೊಮ್ಮೆ ಆ ಪ್ರಯತ್ನ ಮಾಡಿದರೆ ಅವರ ನಾಲಗೆಯನ್ನು ಕಿತ್ತು ಹಾಕಬೇಕಾದೀತು. ಅವರಿಗೆ ಕಾನೂನು ಪಾಲನೆ ಮಾಡುವವರ ಮೂಲಕವೇ ಸೂಕ್ತ ಉತ್ತರ ಕೊಡುವುದಾಗಿ ಅವರು ಹೇಳಿದರು.

ಗ್ರಾಮ ಪಂಚಾಯತ್ ಸದಸ್ಯರಿಗೆ ಐದು ದಿನಗಳ ತರಬೇತಿಯನ್ನು ಆಯೋಜಿಸಲಾಗುವುದು. ಇದಕ್ಕೆ ರಾಜ್ಯ ವ್ಯಾಪಿ 900 ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಲಾಗಿದೆ. ಪ್ರತೀಯೊಬ್ಬ ಗ್ರಾಮ ಪಂಚಾಯತ್ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. 

ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಈರಣ್ಣ ಕಡಾಡಿ, ಎಂ.ಎನ್.ರವಿಕುಮಾರ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿದರು.‌ ವೇದಿಕೆಯಲ್ಲಿ ಶಾಸಕರಾದ ಸಂಜೀವ ಮಠಂದೂರು, ಎಸ್.ಅಂಗಾರ, ಹರೀಶ್ ಪೂಂಜ, ಡಾ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಪ್ರತಾಪ ಸಿಂಹ ನಾಯಕ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಹರಿಕೃಷ್ಣ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು. 

ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಸ್ವಾಗತಿಸಿದರು. ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ವಂದಿಸಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು.


ನನಗೆ ಸಚಿವ ಸ್ಥಾನ ಕೊಡುವುದು ಪಕ್ಷದ ವರಿಷ್ಟರಿಗೆ ಬಿಟ್ಟ ವಿಚಾರ. ನಿರೀಕ್ಷೆಗಳು ಎಲ್ಲರಿಗೂ ಇರುತ್ತದೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. 
- ಎಸ್.ಅಂಗಾರ, ಸುಳ್ಯ ಶಾಸಕ 

ಬಿಜೆಪಿಯವರಾದ ನಾವು ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುತ್ತೇವೆ. ಕಾಂಗ್ರೆಸ್ ಗೆ ತಾಕತ್ತಿದ್ದರೆ ಬಿಜೆಪಿಯವರು ಕೆಡವಿದ ಬಾಬರಿ ಮಸೀದಿ‌ಯನ್ನು ಪುನರ್ ನಿರ್ಮಿಸುತ್ತೇವೆ ಎಂದು ಜನರಿಗೆ ಭರವಸೆ ನೀಡಿ ಮತ ಕೇಳಲಿ. ರಾಮ ಮಂದಿರದ ಬಳಿಕ ನಾವು ಮಥುರಾದಲ್ಲಿ ಕೃಷ್ಣನ ಮಂದಿರವನ್ನೂ ನಿರ್ಮಿಸುತ್ತೇವೆ. 
- ಕೆ.ಎಸ್.ಈಶ್ವರಪ್ಪ, ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News