ಸಂವಿಧಾನಾತ್ಮಕ ಸಂಸ್ಥೆಗಳು ನಮ್ಮ ಕಣ್ಣೆದುರಲ್ಲೇ ದುರ್ಬಲಗೊಳ್ಳುತ್ತಿದೆ: ಮಾಜಿ ಸ್ಪೀಕರ್ ರಮೇಶ್ ಕುಮಾರ್

Update: 2021-01-11 16:10 GMT

ಪುತ್ತೂರು: ಈ ದೇಶ ಯಾರದೋ ಒಬ್ಬರ ಸೊತ್ತಲ್ಲ. ಇದು ನಮ್ಮೆಲ್ಲರ ಸೊತ್ತು. ದೇಶದ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದ್ದು ದೇಶದ ಏಕತೆ ಮತ್ತು ಐಕ್ಯತೆ ಸಂವಿಧಾನದ ಆಶಯವಾಗಿದೆ. ಆದರೆ ಇಂದು ದೇಶದಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿರುವ ಕಾನೂನುಗಳು, ನಿಯಮಗಳು, ಮೇಲೈಸುತ್ತಿದ್ದು, ದೇಶಕ್ಕೆ ಕೊಡುಗೆ ನೀಡಿದವರಿಗೆ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಬೆಲೆಯೇ ಇಲ್ಲದಂತಾಗಿದೆ. ಇವೆಲ್ಲದರ ವಿರುದ್ಧ ಜಾಗೃತರಾಗಿ ಸುಭದ್ರ ದೇಶ ಕಟ್ಟುವುದು ನಮ್ಮ ನಿಮ್ಮೆಲ್ಲರ ಮೇಲಿನ ಹೊಣೆಗಾರಿಕೆಯಾಗಿದೆ ಎಂದು ಕರ್ನಾಟಕ ರಾಜ್ಯ ವಿಧಾನಸಭಾ ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಹೇಳಿದರು.

ಎಸ್ಕೆಎಸ್ಸೆಸ್ಸೆಫ್ ಕೇಂದ್ರೀಯ ಸಮಿತಿಯು `ಅಸ್ತಿತ್ವ, ಹಕ್ಕು ಯುವಜನಾಂಗ ಮರಳಿ ಪಡೆಯುತ್ತಿದೆ' ಎನ್ನುವ ಧ್ಯೇಯ ವಾಕ್ಯದೊಂದಿಗೆ ಸಯ್ಯದ್ ಹಮೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ನೇತೃತ್ವದಲ್ಲಿ ಆರಂಭಿಸಿರುವ ಮುನ್ನಡೆ ಯಾತ್ರೆಯ ಅಂಗವಾಗಿ ಸಂಪ್ಯ ಸಾದಾತ್ ನಗರದಲ್ಲಿಂದು ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಎಸ್ಕೆಎಸ್ಸೆಸ್ಸೆಫ್ ಅಸ್ತಿತ್ವ ಧಕ್ಕೆಯ ವಿಚಾರವನ್ನೆತ್ತಿಕೊಂಡು ಮುನ್ನಡೆ ಯಾತ್ರೆ ಕೈಗೊಂಡಿದ್ದು ಇಲ್ಲಿ ಎಲ್ಲರಿಗೂ ಸಮಾನ ಅಸ್ತಿತ್ವ ಸಿಗಬೇಕಾಗಿರುವುದು ಸಂವಿಧಾನದ ಭಾಗವಾಗಿದೆ. ಅಸ್ತಿತ್ವ ಉಳಿದರೆ ಮಾತ್ರ ನಮ್ಮ ರಾಷ್ಟ್ರಗೀತೆಯ ಗೌರವ ಉಳಿಯಬಹುದು. ಪ್ರಾಣವನ್ನು ಕೊಟ್ಟಾದರೂ ಅಸ್ತಿತ್ವವನ್ನು ಇಲ್ಲಿ ಉಳಿಸಲೇಬೇಕಾಗಿದೆ. ಅಸ್ತಿತ್ವದ ವಿಚಾರ ಯಾರ ಪರವೋ, ವಿರುದ್ಧವೋ ಅಲ್ಲ. ಈ ದೇಶ ಎಲ್ಲರದ್ದಾದ ಕಾರಣ ಅಸ್ತಿತ್ವ ಎಲ್ಲರ ಹಕ್ಕಾಗಿದೆ ಎಂದು ಅವರು ಹೇಳಿದರು.

ಇತಿಹಾಸ ತಿಳಿಯದವರು ಇತಿಹಾಸ ನಿರ್ಮಿಸಲಾರರು, ತ್ಯಾಗ ಮಾಡಿದವನಿಗೆ ಈ ದೇಶದಲ್ಲಿ ಬೆಲೆಯೇ ಇಲ್ಲ. ದೇಶ ಇಂದು ಅತ್ಯಂತ ಕಷ್ಟಕರ ಸನ್ನಿವೇಶಗಳನ್ನು ಎದುರಿಸುತ್ತಿದ್ದು ಸಂವಿಧಾನಾತ್ಮಕ ಸಂಸ್ಥೆಗಳು ನಮ್ಮ ಕಣ್ಣೆದುರಲ್ಲೇ ದುರ್ಬಲಗೊಳ್ಳುತ್ತಿದೆ ಮತ್ತು ದುರುಪಯೋಗವಾಗುತ್ತಿದೆ. ತಿನ್ನುವ ಹಕ್ಕು, ವಿವಾಹ ವಿಚಾರಗಳು ಅಷ್ಟೇ ಏಕೆ ಬದುಕುವ ಹಕ್ಕನ್ನೇ ಇನ್ನೊಬ್ಬರು ಪ್ರಶ್ನೆ ಮಾಡುವ ಹಂತಕ್ಕೆ ಈ ದೇಶ ಬಂದು ನಿಂತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಇವನ್ನು ಪ್ರಶ್ನಿಸಬೇಕಾದವರು ಸುಮ್ಮನಾಗಿದ್ದಾರೆ ಎಂದು ರಮೇಶ್ ಕುಮಾರ್ ಹೇಳಿದರು.

ದೇಶದ ರೈತ ಚಳಿಯಲ್ಲಿ ನಡುಗುತ್ತಾ ದೆಹಲಿಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವಾಗ ಅದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ದೇಶದ ಆಡಳಿತ ಕಣ್ಮುಚ್ಚಿ ಕುಳಿತಿದೆ. ದೇಶವಾಸಿಗಳಾದ ನಾವೂ ಸುಮ್ಮನಾಗಿದ್ದೇವೆ. ನಮ್ಮೆಲ್ಲರ ಚರ್ಮ, ಕಿವಿ ದಪ್ಪಗಾಗಿ ಅನ್ನದಾತರ ಕೂಗು ನಮಗೆ ಕೇಳದಾಗಿದೆ. ರೈತರು, ಸೈನಿಕರು ಜಾತಿ, ಧರ್ಮ ಬಿಟ್ಟು ದೇಶಕ್ಕೆ ಕೊಡುಗೆ ನೀಡುವಾಗ ರಾಜಕೀಯದವರು ಜಾತಿ, ಧರ್ಮಗಳನ್ನು ತಂದು ಸಮಾಜವನ್ನು ಹಾಳು ಮಾಡುತ್ತಿದ್ದಾರೆ ಎಂದರು.

ಮಾಧ್ಯಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಮೇಶ್ ಕುಮಾರ್ ಅವರು, ನಾವು ಒಂದು ಹೇಳಿದರೆ ಮಾಧ್ಯಮಗಳು ಇನ್ನೊಂದನ್ನು ಬರೆಯುತ್ತವೆ. ಸಮಾಜದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ ಮಾಧ್ಯಮಗಳು ಜವಾಬ್ದಾರಿ ಮರೆತು ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಮಾತನಾಡಿ ಎಸ್ಕೆಎಸ್ಸೆಸ್ಸೆಫ್ ಮುನ್ನಡೆ ಯಾತ್ರೆಯು ಮಹತ್ವದ ಸದುದ್ದೇಶವನ್ನು ಇಟ್ಟುಕೊಂಡು ಹಮ್ಮಿಕೊಳ್ಳಲಾದ ಯಾತ್ರೆಯಾಗಿದ್ದು ಸಮಸ್ತ ಮೇಧಾವಿಗಳ ದೂರದೃಷ್ಟಿ ಮತ್ತು ಚಿಂತನಾ ಶೀಲತೆಯಿಂದ ಸಮಾಜದ ಸುಭೀಕ್ಷೆ ಇಟ್ಟುಕೊಂಡು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕೋಮುವಾದ ವಿಜ್ರಂಭಿಸುವ ಇಂದಿನ ಕಾಲಘಟ್ಟದಲ್ಲಿ ಸಮುದಾಯ ನಿರಾಶರಾಗಬೇಕಾದ ಅಗತ್ಯವಿಲ್ಲ, ದೇಶದ ಬಹುಪಾಲು ಜನರು ಸಂವಿಧಾನದಲ್ಲಿ ನಂಬಿಕೆಯಿಟ್ಟವರಾಗಿದ್ದು ನಾವು ದೇಶವನ್ನು ಕಟ್ಟಬೇಕಾದ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ದ.ಕ ಜಿಲ್ಲೆಯನ್ನು ಕೋಮುವಾದದ ಪ್ರಯೋಗ ಶಾಲೆ ಎಂದು ಬಿಂಬಿಸಲಾಗುತ್ತಿದೆ, ಆದರೆ ಈ ಜಿಲ್ಲೆ ಕೋಮು ಸೌಹಾರ್ದತೆಯ ಪ್ರಯೋಗ ಶಾಲೆ ಎನ್ನುವುದು ನಮ್ಮ ವಾದವಾಗಿದೆ, ಎಸ್ಕೆಎಸ್ಸೆಸ್ಸೆಫ್ ಇರುವವರೆಗೂ ಕೂಮು ಸೌಹಾರ್ದತೆಯ ಕಾವಲಾಳುಗಳು ನಾವಾಗುತ್ತೇವೆ, ನವ ತಲೆಮಾರಿಗೆ ದೇಶದ ಸೌಹಾರ್ದತೆ ಬಗ್ಗೆ ನಾವು ತಿಳಿಸಿಕೊಡುತ್ತೇವೆ ಎಂದು ಅವರು ಹೇಳಿದರು.

ಸ್ವಾಗತಿಸಿದ ಎಸ್ಕೆಎಸ್ಸೆಸ್ಸೆಫ್ ಪುತ್ತೂರು ವಲಯಾಧ್ಯಕ್ಷ ಮಹಮ್ಮದ್ ಮುಸ್ಲಿಯಾರ್ ಮುಂಡೋಳೆ ಮಾತನಾಡಿ ಸಮುದಾಯದ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿರುವ ಸಮಸ್ತದ ನಾಯಕರು ಮುನ್ನಡೆ ಯಾತ್ರೆ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು. ಅಮೀರ್ ತಂಙಳ್ ಕಿನ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಧ್ವಜಾರೋಹಣ: ಇದಕ್ಕೂ ಮೊದಲು ನಡೆದ ಧ್ವಜಾರೋಹಣವನ್ನು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷರು, ಸ್ವಾಗತ ಸಮಿತಿ ಕೋಶಾಧಿಕಾರಿಯಾಗಿರುವ ಎಲ್.ಟಿ ಅಬ್ದುಲ್ ರಝಾಕ್ ಹಾಜಿ ನೆರವೇರಿಸಿದರು.

ಸಂಪ್ಯ ಖತೀಬ್ ಅಬ್ದುಲ್ ಹಮೀದ್ ದಾರಿಮಿ ನೇತೃತ್ವದಲ್ಲಿ ಮಖಾಂ ಝಿಯಾರತ್ ನಡೆಯಿತು. ಹಾಫಿಳ್ ಸಯೀದ್ ಮಾಡನ್ನೂರು ಖಿರಾಅತ್ ಪಠಿಸಿದರು.
ಹಬೀಬುರ್ರಹ್ಮಾನ್ ತಂಙಳ್ ಮುಕ್ವೆ, ಅನಸ್ ತಂಙಳ್ ಗಂಡಿಬಾಗಿಲು, ಎಸ್.ಬಿ ಮಹಮ್ಮದ್ ದಾರಿಮಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಜಿ.ಪಂ ಸದಸ್ಯ ಎಂ.ಎಸ್ ಮುಹಮ್ಮದ್, ಸಂಯುಕ್ತ ಜಮಾಅತ್ ಅಧ್ಯಕ್ಷ ಕೆ.ಪಿ ಮಹಮ್ಮದ್ ಹಾಜಿ, ಉದ್ಯಮಿ ಅಬ್ದುಲ್ ಖಾದರ್ ಹಾಜಿ ಹಿರಾ, ಹಸೈನಾರ್ ಹಾಜಿ ಸಿಟಿ ಬಜಾರ್, ತಾಜ್ ಮಹಮ್ಮದ್ ಸಂಪಾಜೆ, ಕೆಎಂಎ ಕೊಡುಂಗಾಯಿ, ಅಬೂಬಕ್ಕರ್ ಹಾಜಿ ಮಂಗಳಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News