ಬಾಲಾಕೋಟ್ ದಾಳಿ : ತಿರುಚಿದ ವೀಡಿಯೋ ಆಧಾರದಲ್ಲಿ ಸುಳ್ಳು ಸುದ್ದಿ ಹರಡಿದ ಎಎನ್ಐ, ನ್ಯೂಸ್ ಚಾನಲ್ ಗಳು

Update: 2021-01-11 17:08 GMT

ಹೊಸದಿಲ್ಲಿ,ಜ.11:  2019ರಲ್ಲಿ ನಡೆದಿದ್ದ ಬಾಲಾಕೋಟ್‌ ವಾಯುದಾಳಿಯಲ್ಲಿ 300 ಮಂದಿ ಪಾಕಿಸ್ತಾನಿ ಪ್ರಜೆಗಳು ಮೃತಪಟ್ಟಿದ್ದಾಗಿ ಪಾಕಿಸ್ತಾನದ ಮಾಜಿ ರಾಯಭಾರಿ ಹೇಳಿಕೆ ನೀಡಿದ್ದಾರೆಂದು ಜ.9ರಂದು ಪ್ರಮುಖ ಮಾಧ್ಯಮ ಸಂಸ್ಥೆ ANI ಹಾಗೂ ಹಲವಾರು ಮುಖ್ಯವಾಹಿನಿಯ ಮಾಧ್ಯಮಗಳು ಪ್ರಕಟಿಸಿದ್ದವು. ಇದೀಗ ಮಾಧ್ಯಮಗಳು ಸಂಪೂರ್ಣ ವೀಡಿಯೋದ ಸಣ್ಣ ತುಣಕನ್ನು ತಿರುಚಿ ಪ್ರಕಟಿಸಿದ್ದು, ಅವರ ಪೂರ್ಣ ಮಾತುಗಳನ್ನು ಪ್ರಕಟಿಸಿಲ್ಲ ಎಂದು ನೈಜ ವೀಡಿಯೋದೊಂದಿಗೆ Boomlive.in ವರದಿ ಪ್ರಕಟಿಸಿದೆ.

ಪಾಕಿಸ್ತಾನದ ಹಮ್‌ ನ್ಯೂಸ್‌ ಚಾನೆಲ್‌ ನಲ್ಲಿ ಮಾತನಾಡುತ್ತಿದ್ದ ವೇಳೆ ಪಾಕಿಸ್ತಾನದ ಮಾಜಿ ರಾಯಭಾರಿ ಝಫರ್‌ ಹಿಲಾಲಿ "ಬಾಲಾಕೋಟ್‌ ದಾಳಿಯ ವೇಳೆ 300 ಮಂದಿ ಮೃತಪಟ್ಟಿದ್ದಾರೆ" ಎಂದು ಹೇಳಿಕೆ ನೀಡಿದ್ದಾಗಿ ಹಲವು ಮಾಧ್ಯಮಗಳು ಪ್ರಕಟಿಸಿದ್ದವು. ಮೊದಲಿಗೆ ಈ ಸುದ್ದಿಯನ್ನು ಪ್ರಕಟಿಸಿದ್ದ ANI ಹಾಗೂ ಇನ್ನಿತರ ಮಾಧ್ಯಮಗಳು ಝಫರ್‌ ಹಿಲಾಲಿಯ ಖುದ್ದು ಸ್ಪಷ್ಟೀಕರಣದ ಬಳಿಕ ಸುದ್ದಿಯನ್ನು ತೆಗೆದುಹಾಕಲಾಗಿದೆ. 

ANI ಸುದ್ದಿಸಂಸ್ಥೆಯು ʼಭಾರತವು ನಡೆಸಿದ್ದ ಬಾಲಾಕೋಟ್‌ ವಾಯುದಾಳಿಯಲ್ಲಿ 300 ಮಂದಿ ಮೃತಪಟ್ಟಿದ್ದಾಗಿ ಟಿವಿ ಕಾರ್ಯಕ್ರಮದಲ್ಲಿ ಒಪ್ಪಿಕೊಂಡ ಪಾಕ್‌ ಮಾಜಿ ರಾಯಭಾರಿʼ ಎಂಬ ತಲೆಬರಹದಡಿ ಪ್ರಕಟ ಮಾಡಲಾಗಿತ್ತು. ಈ ಸುದ್ದಿಯನ್ನು ದೇಶದ ಪ್ರಮುಖ ಮಾಧ್ಯಮಗಳಾದ ಟೈಮ್ಸ್‌ ಆಫ್‌ ಇಂಡಿಯಾ, ಎನ್ಡಿಟಿವಿ, ಟೈಮ್ಸ್‌ ನೌ, ಎಬಿಪಿ ನ್ಯೂಸ್‌, ಹಿಂದೂಸ್ತಾನ್‌ ಟೈಮ್ಸ್‌, ಝೀ ನ್ಯೂಸ್‌, ಜಾಗರಣ್‌, ಡೆಕ್ಕನ್‌ ಹೆರಾಲ್ಡ್‌, ನ್ಯೂಸ್‌ ೧೮ ಸೇರಿದಂತೆ ಹಲವು ಪ್ರಮುಖ ಮಾಧ್ಯಮಗಳು ಪ್ರಕಟಿಸಿದ್ದವು. ರಿಪಬ್ಲಿಕ್‌ ವರ್ಲ್ಡ್‌, ಒಡಿಶಾ ಟಿವಿ ಹಾಗೂ ಇನ್ನಿತರ ಮಾಧ್ಯಮಗಳು ಈ ವೀಡಿಯೋ ಕ್ಲಿಪ್‌ ಅನ್ನು ತಮ್ಮ ದೃಶ್ಯ ಮಾಧ್ಯಮದಲ್ಲೂ ಬಿತ್ತರಿಸಿದ್ದರು ಎಂದು boomlive.in ವರದಿ ಮಾಡಿದೆ.

ಈ ವೀಡಿಯೋವನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿದ boomlive.in ಸತ್ಯಾಂಶವನ್ನು ಜನರ ಮುಂದಿಟ್ಟಿದೆ. "ಭಾರತವು ತಾನು ನಡೆಸಿದ ಬಾಲಾಕೋಟ್‌ ವಾಯುದಾಳಿಯಲ್ಲಿ 300 ಜನರನ್ನು ಕೊಲ್ಲಲು ಉದ್ದೇಶಿಸಿತ್ತು. ಆದರೆ ಅವರಿಗೆ ಕೊಲ್ಲಲು ಸಾಧ್ಯವಾಗಿಲ್ಲ. ಅವರು (ಭಾರತ) ವಾಯುದಾಳಿ ನಡೆಸುತ್ತೇವೆಂದು ಹೇಳಿ, ಫುಟ್ಬಾಲ್‌ ಗ್ರೌಂಡ್‌ ಗೆ ಬಾಂಬ್‌ ದಾಳಿ ಮಾಡಿ 300 ಮಂದಿಯನ್ನು ಕೊಂದಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಇನ್ನು ಭಾರತದ ವಾದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡಲು ಪಾಕಿಸ್ತಾನಕ್ಕೂ ಸಾಧ್ಯವಾಗಿಲ್ಲ" ಎಂದು ಅವರು ವೀಡಿಯೋದಲ್ಲಿ ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

ತಿರುಚಲ್ಪಟ್ಟ ವೀಡಿಯೋದಲ್ಲಿ ನಿರೂಪಕನನ್ನು ಮತ್ತು ಇತರ ಪ್ಯಾನಲಿಸ್ಟ್‌ ಗಳ ಚಿತ್ರವನ್ನೂ ತಿರುಚಲಾಗಿದೆ. ಮಾತ್ರವಲ್ಲದೇ ಅದೇ ವೀಡಿಯೋದಲ್ಲಿ ಮಿಲಿಟರಿ ಸಮವಸ್ತ್ರದಲ್ಲಿರುವ ನರೇಂದ್ರ ಮೋದಿಯ ಚಿತ್ರವನ್ನೂ ಸೇರಿಸಲಾಗಿದೆ.

ಈ ಕುರಿತು ಟ್ವಿಟರ್‌ ನಲಿ ಸ್ಪಷ್ಟನೆ ನೀಡಿದ ಪಾಕ್‌ ಮಾಜಿ ರಾಯಭಾರಿ ಝಫರ್‌ ಹಿಲಾಲಿ, " ನಾನು ಹಮ್‌ ಟಿವಿಯಲ್ಲಿ ನೀಡಿದ್ದ ಹೇಳಿಕೆಯನ್ನು ತಿರುಚಿ ಪ್ರಸಾರ ಮಾಡಿ ಭಾರತ ಸರಕಾರವು ತನ್ನ ಪರಮಾವಧಿಯನ್ನು ಮೀರಿದೆ. ಇದು ಸರಕಾರಕ್ಕಿರುವ ಹತಾಶೆ ಹಾಗೂ ಬಾಲಾಕೋಟ್‌ ದಾಳಿಯ ಕುರಿತು ಮೋದಿಯ ಸುಳ್ಳುಗಳನ್ನು ಸೂಚಿಸುತ್ತದೆ" ಎಂದು ಹೇಳಿಕೆ ನೀಡಿ, ಸುದ್ದಿ ಪ್ರಸಾರಮಾಡಿದ್ದ ಟೈಮ್ಸ್‌ ಆಫ್‌ ಇಂಡಿಯಾ ಕುರಿತಾದಂತೆಯೂ ಅಸಮಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News