ಪಂಚನಬೆಟ್ಟು ಪ್ರೌಢ ಶಾಲೆಯನ್ನು ಉಳಿಸಲು ಆಡಳಿತ ಮಂಡಳಿ ಮನವಿ
ಉಡುಪಿ, ಜ.11: ಹಿರಿಯಡ್ಕ ಸಮೀಪದ ತೀರಾ ಗ್ರಾಮೀಣ ಪ್ರದೇಶಗಳ ಬಡ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡಬೇಕೆಂಬ ಸದುದ್ದೇಶದಿಂದ ಪಂಚನಬೆಟ್ಟು ವಿದ್ಯಾವರ್ಧಕ ಸಂಘ 30 ವರ್ಷಗಳ ಹಿಂದೆ ಪ್ರಾರಂಭಿಸಿದ ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢ ಶಾಲೆಯನ್ನು ಮಕ್ಕಳ ಕೊರತೆಯ ನೆಪವೊಡ್ಡಿ ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಎ.ನರಸಿಂಹ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸದ್ಯ ಶಾಲೆಯಲ್ಲಿ 8-9-10ನೇ ತರಗತಿಗಳಲ್ಲಿ 40 ಮಕ್ಕಳು ಕಲಿಯುತಿದ್ದಾರೆ. ಕೊರೋನದ ಕಾರಣದಿಂದ ಈ ಬಾರಿ ಎಂಟನೇ ತರಗತಿಗೆ ಕೇವಲ 10 ಮಕ್ಕಲು ಮಾತ್ರ ಸೇರಿದ್ದಾರೆ. ಊರಿನ ಆಸುಪಾಸಿನ 10ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಪ್ರೌಢ ಶಾಲೆಗಳು ಇಲ್ಲದ ಕಾರಣ, ತೀರಾ ಹಿಂದುಳಿದವರೇ ಅಧಿಕ ಸಂಖ್ಯೆ ಯಲ್ಲಿರುವ, ಕಾಡುಪ್ರದೇಶದ ಅಂಚಿನ ಮುಂಡುಜೆ, ಕುಯಿಲಾಡಿ, ಸಾಣೆಕಲ್ಲು, ತೋಟ, ಕುಳೇದು, ಸಾಗು, ಕಣಂಜಾರು, ಪೆಲತ್ತೂರುಗಳ ಗ್ರಾಮಗಳ ಮಕ್ಕಳಿಗೆ ಎಲ್ಲಾ ಸೌಲಭ್ಯಗಳೊಂದಿಗೆ ಉಚಿತ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದೆ ಎಂದವರು ಹೇಳಿದರು.
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಉಚಿತ ಶಿಕ್ಷಣ ನೀಡುತಿದ್ದ ನಮ್ಮ ಸಂಸ್ಥೆ ಯನ್ನು ಪ್ರೋತ್ಸಾಹಿಸುವ ಬದಲು ಸದ್ಯದ ಸಂಖ್ಯಾನುಪಾತದ ನೆಪ ಒಡ್ಡಿ ಜಿಲ್ಲೆಯ ಹಿಂದಿನ ಡಿಡಿಪಿಐ ಶೇಷಶಯ ಕಾರಿಂಜ ಹಾಗೂ ಉಡುಪಿ ಬಿಇಓ ಮಂಜುಳಾ ಕೆ. ಅವರು ಮುಚ್ಚಲು ಕಿರುಕುಳ ನೀಡುತಿದ್ದಾರೆ ಎಂದು ನರಸಿಂಹ ಅವರು ದೂರಿದರು.
2019ರಲ್ಲೇ ಇಲಾಖೆಯ ಅಧಿಕಾರಿಗಲು ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಅವರ ನೌಕರಿಯ ಬೆದರಿಕೆಯೊಡ್ಡಿ ಬೇರೆ ಕಡೆಯ ಅನುದಾನಿತ ಶಾಲೆಗಳಿಗೆ ವರ್ಗಾಯಿಸಿದ್ದಾರೆ. ಈ ಬಗ್ಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಗಮನ ಸೆಳೆದಾಗ ಅವರ ಸಹಾಯದಿಂದ ವರ್ಗಾಯಿಸಲ್ಪಟ್ಟ ಎಲ್ಲಾ ಶಿಕ್ಷಕರು ಹಾಗೂ ಶಿಕ್ಷತೇರ ಸಿಬ್ಬಂದಿಗಳನ್ನು ವಾಪಾಸು ಕರೆಸಿ ಶಾಲೆಯನ್ನು ಮುಂದುವರಿಸಲು ಅನುಮತಿ ದೊರಕಿತ್ತು.
ಈ ವರ್ಷ ಮಕ್ಕಳ ದಾಖಲಾತಿಗೆ ಅನುಮತಿ ನೀಡುವಂತೆ ಜನವರಿ ತಿಂಗಳಲ್ಲೇ ಡಿಡಿಪಿಐ ಅವರಿಗೆ ಮನವಿ ಮಾಡಿಕೊಂಡಿದ್ದರೂ, ಕೊರೋನದ ಲಾಕ್‌ಡೌನ್ ಅವಧಿಯಲ್ಲಿ ನಮ್ಮ ಕನ್ನಡ ಮಾಧ್ಯಮ ಶಾಲೆಯನ್ನು ಮುಚ್ಚುವ ಸಂಕಲ್ಪ ಮಾಡಿ, ಶಾಲೆಯ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದ್ದ ಅವಧಿಯಲ್ಲಿ ಶಾಲೆಯನ್ನು ಮುಚ್ಚುವಂತೆ ಆದೇಶವನ್ನು ನೀಡಿದರು ಎಂದು ನರಸಿಂಹ ಅವರು ಹೇಳಿದರು.
ಇದರೊಂದಿಗೆ ಜೂನ್-ಜುಲೈ ತಿಂಗಳಲ್ಲಿ ಶಾಲೆಗೆ ಬೆದರಿಕೆ ಹಾಗೂ ಆದೇಶ ಗಳನ್ನು ನೀಡಿದ ಬಿಇಓ ಕೆ.ಮಂಜುಳಾ ಅವರು, ಜುಲೈ 30ರಂದು ಶಾಲೆಯ ಮೂವರು ಶಿಕ್ಷಕರನ್ನು ಕಚೇರಿಗೆ ಕರೆಸಿ, ಬೇರೆ ಅನುದಾನಿತ ಶಾಲೆಗಳಿಗೆ ನಿಯುಕ್ತಿ ಗೊಳಿಸಿ ವರ್ಗಾವಣೆ ಪತ್ರವನ್ನು ಕೈಗಿತ್ತರು. ಎರಡು ತಿಂಗಳಿನಿಂದ ಇಲಾಖೆಯಿಂದ ಸಂಬಳ ಬಾರದ ಹಿನ್ನೆಲೆಯಲ್ಲಿ ಈ ಶಿಕ್ಷಕರ ಅಸಹಾಯಕತೆ ಯನ್ನು ಅವರು ಉಪಯೋಗಿಸಿಕೊಂಡರು ಎಂದರು. ಇದೀಗ ಉಳಿದ ಇಬ್ಬರು ಶಿಕ್ಷಕರಿಗೂ ಬೇರೆ ಕಡೆಗೆ ವರ್ಗಾಯಿಸಿಕೊಳ್ಳುವಂತೆ, ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೂ ಬೇರೆ ಶಾಲೆಗೆ ಹೋಗುವಂತೆ ದೂರವಾಣಿ ಕರೆ ಮಾಡಿ ಬೆದರಿಸಲಾಗುತ್ತಿದೆ ಎಂದವರು ನುಡಿದರು.
ಸಚಿವರ ಆದೇಶಕ್ಕೂ ನಿರ್ಲಕ್ಷ್ಯ: ಇಲಾಖೆ ಅಧಿಕಾರಿಗಳೂ ಸೇರಿದಂತೆ ಇತರ ಕೆಲವರ ಹುನ್ನಾರದಿಂದ ನಡೆಯುತ್ತಿರುವ ಈ ಬೆಳವಣಿಗೆಯಿಂದ ಅಸಹಾಯಕಾರದ ನಾವು ಶಿಕ್ಷಣ ಸಚಿವ ಸುರೇಶ್ ಕುಮಾರ್, ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಲಾಲಾಜಿ ಆರ್.ಮೆಂಡನ್ ಅವರಿಗೆ ಕಳಕಳಿಯ ಮನವಿ ಮಾಡಿಕೊಂಡಾಗ, ನಮಗೆ ಶಾಲೆಯನ್ನು ಮುಂದುವರಿಸಲು ಅನುಮತಿ ನೀಡಿ ಸೆ.22ರಿಂದ ಆದೇಶ ಬಂದಿತ್ತು ಎಂದರು.
ಆದರೆ ಈ ಆದೇಶ ಬಂದ ನಂತರವೂ ಶಾಲೆಯನ್ನು ನವೀಕರಿಸಲು ಹಾಗೂ ಮುಂದುವರಿಸಲು ಬಿಡದೇ ಶಿಕ್ಷಕರಿಗೂ ಕಳೆದ 7 ತಿಂಗಳಿನಿಂದ ವೇತನ ತಡೆ ಹಿಡಿದು ಶಾಲೆ ಮುಚ್ಚಿಸಲು ಶತಪ್ರಯತ್ನ ನಡೆಯುತ್ತಿದೆ. ಇಲಾಖೆಯ ಅಧಿಕಾರಿಗಳು ಶಾಲೆಯ ಮಕ್ಕಳು ಹಾಗೂ ಪೋಷಕರ ಮನೆಗೆ ಭೇಟಿ ನೀಡಿ ಶಾಲೆ ಮುಚ್ಚಿದೆ ಎಂದು ಪ್ರಚಾರ ಮಾಡುತಿದ್ದಾರೆ ಎಂದೂ ಅವರು ಆರೋಪಿಸಿದರು.
ಶಾಲೆಗೆ ಮಕ್ಕಳನ್ನು ಸೆಳೆಯುವುದಕ್ಕಾಗಿ ಸಂಘವೇ ದಾನಿಗಳು ಹಾಗೂ ಇತರ ನೆರವಿನಿಂದ ಮಕ್ಕಳಿಗಾಗಿ ಹಾಸ್ಟೆಲ್‌ನ್ನು ತೆರೆದು ಅವರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿದೆ. ಹೀಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಡೆಯುತ್ತಿರುವ ಈ ತೀರಾ ಗ್ರಾಮೀಣ ಪ್ರದೇಶದ ಅನುದಾನಿತ ಶಾಲೆಗೆ ನ್ಯಾಯ ಒದಗಿಸಿ ಅದು ಮುಂದುವರಿಯಲು ಅವಕಾಶ ಮಾಡಿಕೊಡಬೇಕೆಂದು ಸರಕಾರವನ್ನು ವಿನಂತಿ ಸುವುದಾಗಿ ಎ.ನರಸಿಂಹ ಕಳಕಳಿಯ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಅಶೋಕ ಆಚಾರ್ಯ ಉಪಸ್ಥಿತರಿದ್ದರು.