ಅಯೋಧ್ಯೆಯಂತೆ ಕಾಶಿ, ಮಥುರಾದಲ್ಲೂ ದೇವಸ್ಥಾನ ನಿರ್ಮಾಣ: ಈಶ್ವರಪ್ಪ
ಉಡುಪಿ, ಜ.12: ಮೋದಿ ಅಧಿಕಾರಕ್ಕೆ ಬಂದ ನಂತರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವಂತೆಯೇ ಆದಷ್ಟು ಬೇಗ ಕಾಶಿಯಲ್ಲಿ ವಿಶ್ವೇಶರನ ದೇವಸ್ಥಾನ ಮತ್ತು ಮಥುರಾದಲ್ಲಿ ಶ್ರೀಕೃಷ್ಣನ ದೇವಸ್ಥಾನ ಕೂಡ ಖಂಡಿತ ನಿರ್ಮಾಣ ಆಗುತ್ತದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಆಶ್ರಯದಲ್ಲಿ ಉಡುಪಿಯ ಅಂಬಾಗಿಲು ಅಮೃತ್ ಗಾರ್ಡನ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಉಡುಪಿ ಜಿಲ್ಲಾ ಮಟ್ಟದ ಜನಸೇವಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮಕ್ಕಳ ಶಾಪ ಮತ್ತು ಗೋ ಶಾಪ ಕಾಂಗ್ರೆಸ್ ಪಕ್ಷಕ್ಕೆ ಇದೆ. ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗುವವರ ನಾಲಿಗೆಯನ್ನು ಕಾನೂನು ಮೂಲಕ ಕಿತ್ತು ಹಾಕುವ ಸ್ಥಿತಿ ಇಂದಲ್ಲ, ನಾಳೆ ಬಂದೇ ಬರುತ್ತದೆ. ಗೋಹತ್ಯ ನಿಷೇಧ ಜಾರಿಗೆ ತಂದಿರುವುದು ಕೇವಲ ಕಾನೂನು ಮಾಡುವುದಕ್ಕೆ ಅಲ್ಲ. ಗೋಹತ್ಯೆ, ಗೋ ಸಾಗಾಟದ ಬಗ್ಗೆ ಪ್ರತಿಯೊಬ್ಬರು ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಬಿಜೆಪಿ ಯಲ್ಲಿ ಅಧಿಕಾರಕ್ಕೆ ಬರಬೇಕಾದರೆ ವಂಶ ಪಾರಂಪರ್ಯ ಅಲ್ಲ ಕಾಂಗ್ರೆಸ್ ಮುಕ್ತ ಎಂಬುದು ಆ ಪಕ್ಷದ ವಂಶ ಪಾರಂಪರ್ಯ ಸಹಿತ ಇತರ ಅನಿಷ್ಠ ಪದ್ಧತಿಯ ವಿರುದ್ಧವೇ ಹೊರತು ದ್ವೇಷ, ಅಸಹಿಷ್ಣುತೆ ಅಲ್ಲ. ಅಭಿವೃದ್ದಿ ಅಂದರೆ ರಸ್ತೆ, ಕಟ್ಟಡ ನಿರ್ಮಾಣ ಮಾತ್ರವಲ್ಲ. ಬದಲಾಗಿ ಸಾಮಾಜಿಕ ಬದಲಾವಣೆಯೊಂದಿಗೆ ಸಮಾಜಮುಖಿ ಅಭಿವೃದ್ಧಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಮಾತನಾಡಿದರು.
ಶಾಸಕರುಗಳಾದ ಸುಕುಮಾರ್ ಶೆಟ್ಟಿ, ಲಾಲಾಜಿ ಆರ್.ಮೆಂಡನ್, ರಘು ಪತಿ ಭಟ್, ಉಮಾನಾಥ್ ಕೋಟ್ಯಾನ್, ಸುನೀಲ್ ಕುಮಾರ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಯಶ್ಪಾಲ್ ಸುವರ್ಣ ಮೊದಲಾದ ವರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.
ಬಜೆಟ್‌ನಲ್ಲಿ ಸಿಹಿ ಸುದ್ದಿ
ಗ್ರಾಪಂ ಸದಸ್ಯರ ಗೌರವಧನವನ್ನು 1000ರೂ.ನಿಂದ 2ಸಾವಿರ ರೂ.ಗೆ ಹೆಚ್ಚಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಗ್ರಾಪಂ ಸದಸ್ಯ ರಿಗೆ ಸಿಹಿ ವಿಚಾರವನ್ನು ಮಂಡಿಸಲಾಗುವುದು ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ಸದಸ್ಯರು ರಾಷ್ಟ್ರೀಯ ವಿಚಾರಧಾರೆಯೊಂದಿಗೆ ಸಮಾಜದ ದಿಕ್ಕು ಬದ ಲಾಯಿಸುವ ಕೆಲಸ ಮಾಡಬೇಕು. ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಗ್ರಾಪಂಗಳಿಗೆ ಒದಗಿಸಲಾಗುವುದು. ಹೀಗೆ ಗ್ರಾಮದ ಅಭಿವೃದ್ಧಿ ಮತ್ತು ರಾಷ್ಟ್ರೀಯ ವಿಚಾರಗಳನ್ನು ಒಟ್ಟಿಗೆ ತೆಗೆದು ಕೊಂಡು ಹೋಗುವುದರಿಂದ ಯಶಸ್ಸು ಸಾಧ್ಯವಾಗುತ್ತದೆ ಎಂದರು.