ಗ್ರಾಪಂಗೆ ತಲಾ 1 ಕೋಟಿ ರೂ. ಅನುದಾನ ಒದಗಿಸಲು ಯೋಜನೆ: ಸಚಿವ ಕೆ.ಎಸ್. ಈಶ್ವರಪ್ಪ
ಉಡುಪಿ, ಜ.12: ಹಣಕಾಸು ಇಲ್ಲದಿದ್ದರೆ ಗ್ರಾಪಂಗಳಿಂದ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ ಇಲ್ಲ. ಆದುದರಿಂದ ಒಂದು ಗ್ರಾಪಂಗೆ ಬೇರೆ ಬೇರೆ ಯೋಜನೆ ಮೂಲಕ ಕನಿಷ್ಠ ಒಂದು ಕೋಟಿ ರೂ. ಅನುದಾನ ದೊರೆಯುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಉಡುಪಿ ಕರಾವಳಿ ಬೈಪಾಸ್ ಬಳಿಯ ಮಣಿಪಾಲ ಇನ್ ಹೊಟೇಲ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನೂತನ ವಾಗಿ ಆಯ್ಕೆಯಾದ ಎಲ್ಲ ಗ್ರಾಪಂ ಸದಸ್ಯರಿಗೆ 285 ತರಬೇತಿ ಕೇಂದ್ರಗಳಲ್ಲಿ ಜ.19ರಿಂದ 26ರವರೆಗೆ ಐದು ದಿನಗಳ ಕಾಲ ಬೆಳಗ್ಗೆಯಿಂದ ಸಂಜೆಯವರೆಗೆ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ 900 ಮಂದಿ ಸಂಪನ್ಮೂಲ ವ್ಯಕ್ತಿಗಳನ್ನು ತರಬೇತುಗೊಳಿಸಲಾಗಿದೆ. ಇದಕ್ಕಾಗಿ ಕೇಂದ್ರದಿಂದ ಶೇ.60, ರಾಜ್ಯ ದಿಂದ ಶೇ.40ರಷ್ಟು ಅನುದಾನದೊಂದಿಗೆ 23.5ಕೋಟಿ ರೂ. ವ್ಯಯ ಮಾಡಲಾಗುವುದು. ಎರಡನೆ ಹಂತದಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ತರಬೇತಿ ನೀಡುವ ಕೆಲಸ ಮಾಡಲಾಗುವುದು ಎಂದರು.
ನರೇಗಾ ಯೋಜನೆಯಲ್ಲಿ ಕರ್ನಾಟಕ ಇತರ ರಾಜ್ಯಗಳಿಗಿಂತ ಉತ್ತಮ ಸಾಧನೆ ಮಾಡಿದೆ. ಈ ಯೋಜನೆಯಲ್ಲಿ 100 ದಿನಗಳ ಬದಲು 150 ದಿನ ಕೆಲಸ ನೀಡುವ ಬಗ್ಗೆ ಸಂಬಂಧಪಟ್ಟ ಸಚಿವರು ಆಶ್ವಾಸನೆ ನೀಡಿದ್ದಾರೆ. ನರೇಗಾ ಯೋಜನೆಯಲ್ಲಿ ಹೆಚ್ಚುವರಿ 800 ಕೋಟಿ ರೂ. ರಾಜ್ಯಕ್ಕೆ ಬಿಡುಗಡೆಯಾಗಿದೆ. ಅದನ್ನು ನರೇಗಾ ಮೂಲಕ ಗ್ರಾಪಂಗಳಿಗೆ ಒದಗಿಸುವ ಕಾರ್ಯ ಮಾಡಲಾಗು ವುದು ಎಂದು ಅವರು ತಿಳಿಸಿದರು.
ಇನ್ನು ಮುಂದೆ ಗ್ರಾಪಂಗಳಲ್ಲಿ ಸೋಲಾರ್ ವಿದ್ಯುತ್‌ನಿಂದಲೇ ಕೆಲಸ ಕಾರ್ಯಗಳನ್ನು ನಡೆಸುವ ನಿಟ್ಟಿನಲ್ಲಿ ಎಲ್ಲ ಗ್ರಾಪಂ ಕಚೇರಿಗಳಲ್ಲಿ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ರಾಷ್ಟ್ರಮಟ್ಟದಲ್ಲಿ ಕರೆದ ಟೆಂಡರ್ ನಲ್ಲಿ 9-10 ಕಂಪೆನಿಗಳು ಪಾಲ್ಗೊಂಡಿದ್ದು, ಈಗಾಗಲೇ ಟೆಂಡರ್ ಕಾರ್ಯ ಮುಗಿಸಲಾಗಿದೆ. ಇದಕ್ಕಾಗಿ 300ಕೋಟಿ ರೂ. ಹಣ ನಿಗದಿಪಡಿಸಲಾಗಿದೆ. ಒಂದು ಗ್ರಾಪಂಗಳಿಗೆ 3-4 ಲಕ್ಷ ವೆಚ್ಚವಾಗಲಿದೆ. ಗ್ರಾಪಂಗಳಲ್ಲಿ ಉತ್ಪಾದನೆಯಾದ ಹೆಚ್ಚುವರಿ ವಿದ್ಯುತ್‌ನ್ನು ಗ್ರೀಡ್ ಮಾರಾಟ ಮಾಡಿ ಹಣ ಗಳಿಸಲು ಕೂಡ ಅವಕಾಶ ಇದೆ ಎಂದು ಅವರು ಹೇಳಿದರು.
'ಅಧಿಕಾರಕ್ಕೆ ಬರುವ ಹಗಲು ಕನಸು'
ಡಿಕೆಶಿ ವಿರೋಧ ಪಕ್ಷದ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಸಿದ್ದರಾಮಯ್ಯ ಮೊದಲು ತನ್ನ ಸ್ಥಾನ ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಸಿದ್ದರಾಮಯ್ಯರನ್ನು ಕಿತ್ತೆಸೆಯುವುದು ಹೇಗೆ ಎಂಬುದಾಗಿ ಡಿಕೆಶಿ ಪ್ಲಾನ್ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ತುಂಬಾ ಸ್ಪಷ್ಟವಾಗಿದೆ. ರಾಜ್ಯದಲ್ಲಿ ವಿರೋಧ ಪಕ್ಷಗಳೇ ಇಲ್ಲ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮತ್ತೆ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ಚುನಾವಣೆಯಲ್ಲಿ ಗೆದ್ದವರು ಸಚಿವ ಸ್ಥಾನಕ್ಕೆ ಅಪೇಕ್ಷೆ ಪಡುವುದು ತಪ್ಪಲ್ಲ. ಅನ್ಯ ಪಕ್ಷಗಳಿಂದ ಬಂದವರಿಗೆ ಸಚಿವ ಸ್ಥಾನದ ಭರವಸೆ ಕೊಟ್ಟಿದ್ದೇವೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮಗೆ ಇದೆ. ಶೇ.50ರಷ್ಟು ಕ್ಯಾಬಿನೆಟ್ ಸ್ಥಾನವನ್ನು ಅನ್ಯ ಪಕ್ಷಗಳಿಂದ ಬಂದವರಿಗೆ ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಮೇಲೆ ಒತ್ತಡ ಇದೆ. ಕೇಂದ್ರ ನಾಯಕರು ಮತ್ತು ಮುಖ್ಯ ಮಂತ್ರಿ ಈ ಬಗ್ಗೆ ತೀರ್ಮಾ ತೆಗೆದುಕೊಳ್ಳಲಿದ್ದಾರೆ ಎಂದರು.