ಉಡುಪಿ: ಪಿಯುಸಿ ಶೇ.86.27, ಎಸೆಸೆಲ್ಸಿ ಶೇ.85 ಹಾಜರಾತಿ

Update: 2021-01-12 14:23 GMT

ಉಡುಪಿ, ಜ.12: ಜಿಲ್ಲೆಯಲ್ಲಿ ಮಂಗಳವಾರ ದ್ವಿತೀಯ ಪಿಯುಸಿಯಲ್ಲಿ ಶೇ. 86.27ರಷ್ಟು ಹಾಗೂ ಎಸೆಸೆಲ್ಸಿಯಲ್ಲಿ ಶೇ.85ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದಾರೆ. ವಿದ್ಯಾಗಮದಲ್ಲಿ 7ನೇ ತರಗತಿಯ ಶೇ.67.3 ಹಾಗೂ 8ನೇ ತರಗತಿಯ ಶೇ.62.3ರಷ್ಟು ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದಾರೆ ಎಂದು ಜಿಲ್ಲಾ ವಿದ್ಯಾಂಗ ಇಲಾಖೆಗಳು ಮಾಹಿತಿ ನೀಡಿವೆ.

ದ್ವಿತೀಯ ಪಿಯುಸಿಯ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಒಟ್ಟು 14725 ವಿದ್ಯಾರ್ಥಿಗಳಿದ್ದು, ಇವರಲ್ಲಿ 12,704 ಮಂದಿ (ಶೇ.86.27) ಇಂದು ತರಗತಿಗೆ ಹಾಜರಾಗಿದ್ದಾರೆ. 7222 ಬಾಲಕರ ಪೈಕಿ 6050 ಮಂದಿ (ಶೇ.83.65) ಹಾಗೂ 7558 ಬಾಲಕಿಯರ ಪೈಕಿ 6554 (ಶೇ.88.03) ಮಂದಿ ಇಂದು ತರಗತಿಯಲ್ಲಿ ಪಾಠ ಕೇಳಿದ್ದಾರೆ.

ಎಸೆಸೆಲ್ಸಿ ಶೇ.85: ಎಸೆಸೆಲ್ಸಿಯಲ್ಲಿ ಜಿಲ್ಲೆಯ ಐದು ವಲಯಗಳಲ್ಲಿ ಒಟ್ಟಾರೆಯಾಗಿ ಶೇ.85ರಷ್ಟು ವಿದ್ಯಾರ್ಥಿಗಳು ಮಂಗಳವಾರ ತರಗತಿಗಳಿಗೆ ಖುದ್ದಾಗಿ ಹಾಜರಾಗಿದ್ದಾರೆ. ಇವರಲ್ಲಿ ಸರಕಾರಿ ಶಾಲೆಗಳ ಶೇ.83, ಅನುದಾನಿತ ಶಾಲೆಗಳ ಶೇ.84 ಹಾಗೂ ಅನುದಾನ ರಹಿತ ಶಾಲೆಗಳ ಶೇ.88ರಷ್ಟು ಮಂದಿ ಮಕ್ಕಳು ಸೇರಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.

ವಿದ್ಯಾಗಮ ತರಗತಿ: 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂದು ನಡೆದ ವಿದ್ಯಾಗಮ ತರಗತಿಗಳಿಗೆ ಕ್ರಮವಾಗಿ ಶೇ.67.3 ಹಾಗೂ ಶೇ.62.3ರಷ್ಟು ವಿದ್ಯಾರ್ಥಿಳು ಪಾಠ ಆಲಿಸಲು ಹಾಜರಾಗಿದ್ದರು.

ಏಳನೇ ತರಗತಿಯ ಸರಕಾರಿ ಶಾಲೆಗಳಲ್ಲಿ ಶೇ.80ರಷ್ಟು, ಅನುದಾನಿತ ಶಾಲೆಗಳಲ್ಲಿ ಶೇ.75 ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಶೇ.47ರಷ್ಟು ಬಾಲಕ-ಬಾಲಕಿಯರು ಹಾಜರಾಗಿದ್ದರೆ, ಎಂಟನೇ ತರಗತಿಗೆ ಸರಕಾರಿ ಶಾಲೆ ಗಳಲ್ಲಿ ಶೇ.71, ಅನುದಾನಿತ ಶಾಲೆಗಳಲ್ಲಿ ಶೇ.70 ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಶೇ.46ರಷ್ಟು ವಿದ್ಯಾರ್ಥಿಗಳು ಪಾಠ ಕಲಿಯಲು ಆಗಮಿಸಿದ್ದರು ಎಂದು ಮಾಹಿತಿ ತಿಳಿಸಿದೆ.

ಜಿಲ್ಲೆಯ ಐವರು ಶಿಕ್ಷಕರಿಗೆ ಕೊರೋನ

ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಇದುವರೆಗೆ ಒಟ್ಟು ಐವರು ಶಿಕ್ಷಕರು ಹಾಗೂ ಓರ್ವ ಸಿಬ್ಬಂದಿ ಕೊರೋನಕ್ಕೆ ಪಾಸಿಟಿವ್ ಬಂದಿದ್ದು, ಇವರ್ಯಾರು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳ 2791 ಹಾಗೂ ಪ್ರೌಢ ಶಾಲೆಗಳ 2618 ಶಿಕ್ಷಕರು ಸೇರಿದಂತೆ ಒಟ್ಟು 5409 ಮಂದಿ ಶಿಕ್ಷಕರು ಈವರೆಗೆ ಕೋವಿಡ್‌ಗಾಗಿ ಆರ್‌ಟಿಪಿಸಿಆರ್ ಪರೀಕ್ಷೆಗೊಳಗಾಗಿದ್ದು, ಇವರಲ್ಲಿ ಪ್ರಾಥಮಿಕ ಶಾಲೆಯ ಮೂವರು ಹಾಗೂ ಪ್ರೌಢ ಶಾಲೆಗಳ ಇಬ್ಬರು ಶಿಕ್ಷಕರು ಪಾಸಿಟಿವ್ ಬಂದಿದ್ದಾರೆ.

ಅದೇ ರೀತಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡ ಪ್ರಾಥಮಿಕ ಶಾಲೆಗಳ 324 ಹಾಗೂ ಪ್ರೌಢ ಶಾಲೆಗಳ 579 ಸಿಬ್ಬಂದಿಗಳ (ಒಟ್ಟು 903) ಪೈಕಿ ಪ್ರೌಢ ಶಾಲೆಯ ಓರ್ವ ಸಿಬ್ಬಂದಿ ಪಾಸಿಟಿವ್ ಬಂದಿದ್ದಾರೆ. ಇವರೆಲ್ಲರೂ ತರಗತಿಗಳ ಆರಂಭಕ್ಕೆ ಮೊದಲೇ ನಡೆಸಿದ ಪರೀಕ್ಷೆ ವೇಳೆ ಪಾಸಿಟಿವ್ ಬಂದವರು ಎಂದೂ ಅವು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News