ಮಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿ ಸ್ಥಗಿತದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಮಂಗಳೂರು, ಜ.12: ಸ್ಮಾರ್ಟ್ ಸಿಟಿ ಯೋಜನೆ ನಗರಕ್ಕೆ ಬರಬೇಕಾದರೆ ಅದಕ್ಕೆ ಹಿಂದಿನ ಮನಪಾ ಕಾಂಗ್ರೆಸ್ ಆಡಳಿತದ ಸ್ಮಾರ್ಟ್ ಕೆಲಸ ಕಾರಣವಾಗಿದೆ. ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಕಾಂಗ್ರೆಸ್ ಪ್ರಾಮಾಣಿಕ ಹೆಜ್ಜೆ ಇರಿಸಿತ್ತು. ಆದರೆ ಅಧಿಕಾರ ಬದಲಾವಣೆಯಿಂದ ಸ್ಮಾರ್ಟ್ ಸಿಟಿ ಯೋಜನೆಯು ಕಾಮಗಾರಿ ದಿಕ್ಕು ತಪ್ಪಿದೆ. ಇದೀಗ ಭ್ರಷ್ಟಾಚಾರದ ವಾಸನೆ ಬಡಿಯುತ್ತಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಆರೋಪಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ವೈಲ್ಯ ದುರ್ಬಳಕೆ, ಸ್ಮಾರ್ಟ್ ಸಿಟಿ ಕಾಮಗಾರಿ ಸ್ಥಗಿತಗೊಂಡ ವಿರುದ್ಧ ಮಂಗಳವಾರ ಪಾಲಿಕೆ ಕಚೇರಿಯ ಮುಂದೆ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೋಟ್ಯಂತರ ರೂ. ವೆಚ್ಚದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ರಾಜ್ಯ ಸರಕಾರ, ಜನಪ್ರತಿನಿಧಿಗಳು ಅಧಿಕಾರಿ ಗಳ ಮೇಲೆ ಹಸ್ತಕ್ಷೇಪ ನಡೆಸುತ್ತಿದ್ದಾರೆ. ಅಧಿಕಾರಿಗಳನ್ನು ಮುಕ್ತವಾಗಿ ಕೆಲಸ ಮಾಡಲು ಜನಪ್ರತಿನಿಧಿಗೋಉ ಬಿಡುತ್ತಿಲ್ಲ. ಕಾಮಗಾರಿಗೆ ನೇಮಕವಾದ ಕನ್ಸಲ್ಟೆನ್ಸಿಗಳು ಅಧಿಕಾರಿಶಾಹಿಗಳ ದಾರಿ ತಪ್ಪುತ್ತಿದ್ದಾರೆ. ಕನ್ಸಲ್ಟೆನ್ಸಿಗಳೇ ಈ ನಗರಕ್ಕೆ ಮಾರಕ ವಾಗಿದ್ದು, ಸ್ಮಾರ್ಟ್ ಸಿಟಿ ಹೀಗೆ ಮುಂದುವರಿದು ಅವ್ಯವಹಾರದ ಬಗ್ಗೆ ತನಿಖೆಯಾದರೆ ಜೈಲಿಗೆ ಹೋಗುವವರು ಅಧಿಕಾರಿಗಳೇ ವಿನಃ ಜನಪ್ರತಿನಿಧಿಗಳಲ್ಲ. ಆದುದರಿಂದ ಜನಪ್ರತಿನಿಧಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗಿದೆ ಎಂದು ರಮಾನಾಥ ರೈ ಹೇಳಿದರು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹಳೆ ಬಂದರು ಅಭಿವೃದ್ಧಿ ಮೂಲಕ ಮೀನುಗಾರಿಕೆ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡುವುದರೊಂದಿಗೆ ಮನಪಾ ಆಡಳಿತ ಆದಾಯ ಹೆಚ್ಚಳ ಮಾಡುವ ಯೋಜನೆಯಾಗಿತ್ತು. ಆದರೆ ಆ ಕಾಮಗಾರಿ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಪ್ರಸ್ತುತ ಸ್ಮಾರ್ಟ್ ಸಿಟಿ ಕಾಮಗಾರಿ ಸ್ಥಗಿತಗೊಂಡಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹಂಪನಕಟ್ಟೆಯಲ್ಲಿ ನಿರ್ಮಾಣವಾಗಿರುವ ಅಂಡರ್‌ಪಾಸ್ ಆರಂಭವಾಗಿ ಒಂದುವರೆ ವರ್ಷ ಕಳೆದರೂ ಕಾಮಗಾರಿ ಪೂರ್ತಿಗೊಂಡಿಲ್ಲ. ಕೋಟ್ಯಂತರ ರೂ. ವೆಚ್ಚದಲ್ಲಿ ಅವೈಜ್ಞಾನಿಕವಾಗಿರುವ ಅಂಡರ್‌ಪಾಸ್‌ಗೆ ಜನಪ್ರತಿನಿಧಿಗಳೇ ನೇರ ಕಾರಣ. ಸ್ಮಾರ್ಟ್ ಸಿಟಿ ಪ್ರತಿ ಯೋಜನೆ ಯಲ್ಲೂ ಅವ್ಯವಹಾರ ಎದ್ದು ಕಾಣುತ್ತಿದೆ ಎಂದು ರೈ ಆರೋಪಿಸಿದರು.
ಭ್ರಷ್ಟಾಚಾರ ವಿರುದ್ಧ ಹೋರಾಟ: ಸ್ವಾಮಿ ವಿವೇಕಾನಂದರ ಜನ್ಮದಿನವಾದ ಇಂದು ಬಿಜೆಪಿ ಆಡಳಿತದ ವೈಲ್ಯದ ವಿರುದ್ಧ ದ.ಕ. ಜಿಲ್ಲಾ ಕಾಂಗ್ರೆಸ್ ಹೋರಾಟ ಆರಂಭಿಸಿದೆ. ವಿವೇಕಾನಂದರ ‘ಏಳಿ ಎದ್ದೇಳಿ... ನಿಲ್ಲದಿರಿ ಗುರಿಮುಟ್ಟುವ ತನಕ...’ ಘೋಷವಾಕ್ಯದಂತೆ ಬಿಜೆಪಿ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಜನರ ಮುಂದಿಡಲು ಜಿಲ್ಲಾ ಕಾಂಗ್ರೆಸ್ ಹೋರಾಟ ಮಾಡಲಿದ್ದು, ಇನ್ನು ವಿರಮಿಸಲ್ಲ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ನುಡಿದರು.
ಕಾರ್ಯಕ್ರಮದಲ್ಲಿ ಶಾಸಕ ಯು.ಟಿ.ಖಾದರ್, ಮಾಜಿ ಶಾಸಕ ಜೆ.ಆರ್.ಲೋಬೊ, ಮನಪಾ ಪ್ರತಿಪಕ್ಷ ನಾಯಕ ಅಬ್ದುರ್ರವೂಫ್ ಬಜಾಲ್, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ,, ಮುಡಾ ಮಾಜಿ ಅಧ್ಯಕ್ಷರಾದ ಇಬ್ರಾಹೀಂ ಕೋಡಿಜಾಲ್, ಸುರೇಶ್ ಬಲ್ಲಾಳ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಉತ್ತರ ಬ್ಲಾಕ್ ಅಧ್ಯಕ್ಷ ವಿಶ್ವಾಸ್‌ದಾಸ್, ದಕ್ಷಿಣ ಬ್ಲಾಕ್ ಅಧ್ಯಕ್ಷ ಸಲೀಂ ಜೆ., ಕಾರ್ಪೊರೇಟರ್‌ಗಳಾದ ಶಶಿಧರ್ ಹೆಗ್ಡೆ, ಪ್ರವೀಣ್‌ಚಂದ್ರ ಆಳ್ವ, ನವೀನ್ ಡಿಸೋಜ, ಲತೀಫ್ ಕಂದಕ್, ಝೀನತ್ ಸಂಶುದ್ದೀನ್ ಬಂದರ್, ಕೇಶವ್ ಮರೋಳಿ, ಸಂಶುದ್ದೀನ್ ಕುದ್ರೋಳಿ, ಅಶ್ರಫ್ ಬಜಾಲ್, ದೀಪಕ್ ಪೂಜಾರಿ, ಅನಿಲ್ ಕುಮಾರ್, ಮಾಜಿ ಮೇಯರ್‌ಗಳಾದ ಕೆ. ಹರಿನಾಥ್, ಜೆಸಿಂತಾ ವಿಜಯಾ ಆಲ್ಫ್ರೆಡ್, ಕೆ. ಭಾಸ್ಕರ, ಅಬ್ದುಲ್ ಅಝೀಝ್, ಮಾಜಿ ಉಪಮೇಯರ್‌ಗಳಾದ ಮುಹಮ್ಮದ್ ಕುಂಜತ್ತಬೈಲ್, ಪುರುಷೋತ್ತಮ ಚಿತ್ರಾಪುರ, ರಜನೀಶ್ ಕಾಪಿಕಾಡ್, ಡಿಸಿಸಿ ಉಪಾಧ್ಯಕ್ಷ ಸದಾಶಿವ ಉಳ್ಳಾಲ್, ಜಿಪಂ ಸದಸ್ಯರಾದ ಶಾಹುಲ್ ಹಮೀದ್ ಕೆ.ಕೆ. ಮತ್ತಿತರರು ಉಪಸ್ಥಿತರಿದ್ದರು.