ಅಕ್ರಮ ಹಣ ವರ್ಗಾವಣೆ ಆರೋಪ:ಈ.ಡಿ.ಯಿಂದ ಮಾಜಿ ಟಿಎಂಸಿ ಸಂಸದ ಕೆ.ಡಿ.ಸಿಂಗ್ ಬಂಧನ

Update: 2021-01-13 14:09 GMT

 ಹೊಸದಿಲ್ಲಿ,ಜ.13: ಅಕ್ರಮ ಹಣ ವರ್ಗಾವಣೆ ಆರೋಪಗಳಲ್ಲಿ ಟಿಎಂಸಿಯ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಉದ್ಯಮಿ ಕೆ.ಡಿ.ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ (ಈ.ಡಿ.)ವು ಬಂಧಿಸಿದೆ.

ಅಲ್‌ಕೆಮಿಸ್ಟ್ ಲಿ.ನ ಸ್ಥಾಪಕ ಸಿಂಗ್ ಅವರು ಸಿಂಗ್ ತನಿಖೆಗೆ ಸಹಕರಿಸುತ್ತಿರಲಿಲ್ಲ ಎಂದು ಈ.ಡಿ. ಆರೋಪಿಸಿದೆ. ಮಂಗಳವಾರ ರಾತ್ರಿ ಅಕ್ರಮ ಹಣ ವರ್ಗಾವಣೆ (ತಡೆ) ಕಾಯ್ದೆಯಡಿ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ಬುಧವಾರ ಅಧಿಕೃತ ಮೂಲಗಳು ತಿಳಿಸಿದವು.

ಸಿಂಗ್ ಕೆಲವು ಸಮಯದಿಂದ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರಲಿಲ್ಲ ಎಂದು ಹೇಳಲಾಗಿದೆ.

ಈ.ಡಿ.2020 ಸೆಪ್ಟಂಬರ್‌ನಲ್ಲಿ ಸಿಂಗ್ ಅವರ ಮತ್ತು ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು.

ಔಷಧಿ ತಯಾರಿಕೆ ಮತ್ತು ಇತರ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಅಲ್‌ಕೆಮಿಸ್ಟ್‌ನ ಅಧ್ಯಕ್ಷರಾಗಿದ್ದ ಸಿಂಗ್ 2012ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ್ದು,ಸದ್ಯ ಉದ್ಯಮ ಸಮೂಹದ ವಿಶ್ರಾಂತ ಅಧ್ಯಕ್ಷ ಹುದ್ದೆಯಲ್ಲಿದ್ದಾರೆ.

ಕೋಲ್ಕತಾ ಪೊಲೀಸರು ಮತ್ತು ಸೆಬಿ ಪ್ರತ್ಯೇಕವಾಗಿ ದಾಖಲಿಸಿರುವ ಎರಡು ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಈ.ಡಿ.ಸಿಂಗ್ ಅವರನ್ನು ತನಿಖೆಗೊಳಪಡಿಸಿದೆ.

ಹೆಚ್ಚಿನ ಪ್ರತಿಫಲ ನೀಡುವ ಆಮಿಷವೊಡ್ಡಿ ಹಾಗೂ ನಿವೇಶನಗಳು ಮತ್ತು ಫ್ಲಾಟ್‌ಗಳ ಬುಕಿಂಗ್‌ಗಾಗಿ ಕೋಟ್ಯಂತರ ರೂ.ಗಳನ್ನು ಸಂಗ್ರಹಿಸಿ ಸಾವಿರಾರು ಗ್ರಾಹಕರನ್ನು ವಂಚಿಸಿದ್ದಕ್ಕಾಗಿ ಸಿಂಗ್,ಅವರ ಪುತ್ರ ಕರಣದೀಪ್ ಸಿಂಗ್,ಅಲ್‌ಕೆಮಿಸ್ಟ್ ಟೌನ್ ಶಿಪ್ ಇಂಡಿಯಾ ಲಿ. ಮತ್ತು ಸಮೂಹದ ವಿವಿಧ ಕಂಪನಿಗಳ ವಿರುದ್ಧ ಕೋಲ್ಕತಾ ಪೊಲೀಸರು 2018ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News