ಟ್ರಂಪ್ ವಾಗ್ದಂಡನೆ ಪ್ರಸ್ತಾವಕ್ಕೆ ಅವರದೇ ಪಕ್ಷದ ಸಂಸದರ ಬೆಂಬಲ

Update: 2021-01-13 14:37 GMT

ವಾಶಿಂಗ್ಟನ್, ಜ. 13: ಅಮೆರಿಕದ ಸಂಸತ್ ಮೇಲೆ ದಾಳಿ ನಡೆಸಲು ತನ್ನ ಬೆಂಬಲಿಗರನ್ನು ಛೂಬಿಟ್ಟಿರುವುದಕ್ಕಾಗಿ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ವಾಗ್ದಂಡನೆ ವಿಧಿಸುವ ಪ್ರತಿಪಕ್ಷ ಡೆಮಾಕ್ರಟಿಕ್ ಸಂಸದರ ಪ್ರಸ್ತಾವಕ್ಕೆ ಟ್ರಂಪ್‌ರ ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಸಂಸದರೂ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸಂಸತ್‌ನ ಒಂದು ಭಾಗವಾಗಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸದಸ್ಯರಾಗಿರುವ ರಿಪಬ್ಲಿಕನ್ ಪಕ್ಷದ ಲಿಝ್ ಚೆನಿ, ಜಾನ್ ಕಾಟ್ಕೊ ಮತ್ತು ಆ್ಯಡಮ್ ಕಿನ್‌ಝಿಂಗರ್ ಪ್ರಸ್ತಾವಕ್ಕೆ ಬೆಂಬಲ ನೀಡಿದವರ ಪಟ್ಟಿಯಲ್ಲಿ ಸೇರಿದ್ದಾರೆ. ಜನವರಿ 6ರಂದು ಸಂಸತ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಟ್ರಂಪ್ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.

ಹಿಂಸಾಚಾರದಲ್ಲಿ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಐವರು ಪ್ರಾಣ ಕಳೆದುಕೊಂಡಿದ್ದಾರೆ.

‘‘ಅಮೆರಿಕದ ಅಧ್ಯಕ್ಷರು ಈ ಪುಂಡರ ಗುಂಪನ್ನು ಕರೆದರು, ಅವರನ್ನು ಒಟ್ಟು ಸೇರಿಸಿದರು ಹಾಗೂ ಬೆಂಕಿ ಹೊತ್ತಿಸಿದರು. ತನ್ನ ಹುದ್ದೆಗೆ ಹಾಗೂ ಸಂವಿಧಾನದ ಹೆಸರಿನಲ್ಲಿ ತೆಗೆದುಕೊಂಡ ಪ್ರಮಾಣವಚನಕ್ಕೆ ಅಮೆರಿಕದ ಅಧ್ಯಕ್ಷರೊಬ್ಬರು ಇದಕ್ಕಿಂತ ದೊಡ್ಡ ದ್ರೋಹ ಬಗೆದ ಉದಾಹರಣೆ ಇನ್ನೊಂದಿಲ್ಲ’’ ಎಂದು ಚೆನಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಟ್ರಂಪ್‌ರ ಅಧಿಕಾರಾವಧಿ ಮುಗಿಯಲು 8 ದಿನಗಳು ಬಾಕಿಯಿರುವಂತೆಯೇ, ಟ್ರಂಪ್ ವಿರುದ್ಧ ವಾಗ್ದಂಡನೆ ವಿಧಿಸುವ ನಿರ್ಣಯಕ್ಕೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಬುಧವಾರ (ಭಾರತೀಯ ಕಾಲಮಾನ ಗುರುವಾರ ಮಂಜಾನೆ) ಮತದಾನ ಮಾಡಲಿದೆ.

ಡೆಮಾಕ್ರಟಿಕರ ಪ್ರಾಬಲ್ಯದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ನಿರ್ಣಯ ಅಂಗೀಕಾರಗೊಂಡರೂ, ಆಡಳಿತಾರೂಢ ರಿಪಬ್ಲಿಕನ್ನರ ಪ್ರಾಬಲ್ಯದ ಸೆನೆಟ್‌ನಲ್ಲಿ ನಿರ್ಣಯ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News