ಮದುವೆ ವಯಸ್ಸು 21ಕ್ಕೆ ಹೆಚ್ಚಿಸಲು,ಉದ್ಯೋಗಿ ಮಹಿಳೆಯರ ಮೇಲೆ ಪೊಲೀಸ್ ನಿಗಾಕ್ಕೆ ಶಿವರಾಜಸಿಂಗ್ ಚೌಹಾಣ್ ಕರೆ

Update: 2021-01-13 14:54 GMT

ಭೋಪಾಲ,ಜ.13: ಮಹಿಳೆಯರ ವಿರುದ್ಧ ಅಪರಾಧಗಳ ಕುರಿತು ಅರಿವು ಹೆಚ್ಚಿಸುವ ಕಾರ್ಯಕ್ರಮವೊಂದಕ್ಕೆ ಬುಧವಾರ ಚಾಲನೆ ನೀಡಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಗ್ ಚೌಹಾಣ್ ಅವರು,ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 21 ವರ್ಷಗಳಿಗೆ ಹೆಚ್ಚಿಸಲು ಮತ್ತು ಉದ್ಯೋಗ ನಿಮಿತ್ತ ಅನ್ಯಸ್ಥಳಗಳಲ್ಲಿ ವಾಸವಿರುವ ಮಹಿಳೆಯರು ತಮ್ಮ ಸುರಕ್ಷತೆಗಾಗಿ ಪೊಲೀಸರು ತಮ್ಮ ಮೇಲೆ ನಿಗಾಯಿಡಲು ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಕರೆ ನೀಡಿದ್ದಾರೆ.

ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 18ರಿಂದ 21 ವರ್ಷಗಳಿಗೆ ಹೆಚ್ಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷದ ತನ್ನ ಸ್ವಾತಂತ್ರೋತ್ಸವ ಭಾಷಣದಲ್ಲಿ ಹೇಳಿದ್ದು,ಇದೀಗ ಸಿಂಗ್ ಅವರೂ ಇದಕ್ಕೆ ಧ್ವನಿಗೂಡಿಸಿದ್ದಾರೆ. ಮೋದಿಯವರ ಸಲಹೆಯನ್ನು ಕಾರ್ಯರೂಪಕ್ಕೆ ತರಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 10 ಸದಸ್ಯರ ಕಾರ್ಯಪಡೆಯೊಂದನ್ನೂ ರಚಿಸಿದೆ.

 ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 18ರಿಂದ 21 ವರ್ಷಗಳಿಗೆ ಹೆಚ್ಚಿಸಬೇಕು ಎನ್ನುವುದು ತನ್ನ ಅಭಿಪ್ರಾಯವಾಗಿದ್ದು,ಇದನ್ನೊಂದು ಚರ್ಚಾವಿಷಯವನ್ನಾಗಿ ಮಾಡಲು ತಾನು ಬಯಸಿದ್ದೇನೆ. ದೇಶ ಮತ್ತು ರಾಜ್ಯಗಳು ಈ ಬಗ್ಗೆ ಅಭಿಪ್ರಾಯಗಳನ್ನು ರೂಪಿಸಬೇಕು. ತಮ್ಮ ಮನೆಗಳಿಂದ ದೂರ ವಾಸವಿರುವ ಉದ್ಯೋಗಿ ಮಹಿಳೆಯರು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವ ಮತ್ತು ಅವರ ಸುರಕ್ಷತೆಗಾಗಿ ಪೊಲೀಸರು ಅವರ ಮೇಲೆ ನಿಗಾಯಿರಿಸುವ ವ್ಯವಸ್ಥೆಯನ್ನು ಸ್ಥಾಪಿಸುವ ಬಗ್ಗೆಯೂ ತಾನು ಒಲವು ಹೊಂದಿದ್ದೇನೆ ಎಂದು ಹೇಳಿದ ಚೌಹಾಣ್,ಸಂಕಷ್ಟದ ಸಮಯದಲ್ಲಿ ಕರೆಗಳನ್ನು ಮಾಡಲು ಸಹಾಯವಾಣಿ ಸಂಖ್ಯೆಗಳನ್ನೂ ಮಹಿಳೆಯರಿಗೆ ಒದಗಿಸಲಾಗುವುದು ಎಂದು ತಿಳಿಸಿದರು.

ಮಧ್ಯಪ್ರದೇಶವು ಮಹಿಳೆಯರ ಸುರಕ್ಷತೆಯ ವಿಷಯವನ್ನು ಹೇಗೆ ನಿರ್ವಹಿಸಿದೆ ಎನ್ನುವುದರ ಮೇಲೆ ಬೆಳಕು ಚೆಲ್ಲಲು ಚೌಹಾಣ್ ಕಾರ್ಯಕ್ರಮವನ್ನು ಬಳಸಿಕೊಂಡರು. ಆದರೆ ಮದುವೆ ವಯಸ್ಸನ್ನು ಹೆಚ್ಚಿಸುವ ಮತ್ತು ಮಹಿಳೆಯರಿಗಾಗಿ ಆಯ್ದ ಸುರಕ್ಷತಾ ನಿಯಮಗಳ ಪ್ರಸ್ತಾವವು ಉತ್ತರಗಳಿಗಿಂತ ಹೆಚ್ಚು ಪ್ರಶ್ನೆಗಳನ್ನೇ ಎತ್ತಿವೆ.

ಉದ್ಯೋಗಕ್ಕಾಗಿ ಮನೆಯನ್ನು ತೊರೆಯುವ ಸ್ಥಿತಿಯಿಲ್ಲದಿದ್ದರೆ ಮಹಿಳೆಯರು ಮನೆಯಲ್ಲಿಯೇ ಇರಲು ಆದ್ಯತೆ ನೀಡುತ್ತಾರೆ ಎಂದು ಚೌಹಾಣ್ ತಪ್ಪಾಗಿ ಭಾವಿಸಿರುವಂತಿದೆ. ಮನೆಯಿಂದ ಹೊರಗಿನ (ಮತ್ತು ಒಳಗಿನ ಸಹ) ಸ್ಥಳಗಳನ್ನು ಮಹಿಳೆಯರಿಗೆ ಸುರಕ್ಷಿತವಾಗಿಸುವ ಬದಲು ಮಹಿಳೆಯರ ಚಲನವಲನಗಳನ್ನು ಇನ್ನಷ್ಟು ನಿರ್ಬಂಧಿಸುವುದು ಮತ್ತು ಅವರನ್ನು ನಿಗಾಕ್ಕೊಳಪಡಿಸುವುದು ಅವರ ಆದ್ಯತೆಯಾಗಿರುವಂತಿದೆ.

========================================================================

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News