ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಮಗಾರಿ ಆರಂಭಿಸಿದರೆ ಹೋರಾಟ : ರಮಾನಾಥ ರೈ

Update: 2021-01-13 15:52 GMT

ಮಂಗಳೂರು, ಜ.13: ನಂದಿಕೂರಿನಿಂದ ಕೇರಳಕ್ಕೆ ವಿದ್ಯುತ್ ಸರಬರಾಜು ಮಾಡುವ ಪ್ರಸರಣ ಲೈನ್ ಹಾದು ಹೋಗುವ ಪ್ರದೇಶಗಳ ಕುರಿತು ಯುಪಿಸಿಎಲ್ ಕಂಪೆನಿಯು ಸರಕಾರ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಮತ್ತು ಓವರ್‌ಹೆಡ್ ಲೈನ್ ಬದಲು ಅಂಡರ್ ಗ್ರೌಂಡ್ ಪವರ್ ಕೇಬಲ್ ಅಳವಡಿಸಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಒತ್ತಾಯಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಂದಿಕೂರಿನಿಂದ ಮೂಡುಬಿದಿರೆ-ಬಂಟ್ವಾಳ-ವಿಟ್ಲ-ಕರೋಪಾಡಿ ಮೂಲಕ ಕೇರಳದ ಕಾಸರಗೋಡು ಭಾಗಕ್ಕೆ ಓವರ್ ಹೆಡ್ ವಿದ್ಯುತ್ ಲೈನ್ ಹಾಯಿಸುವ ಬಗ್ಗೆ ಗೂಗಲ್ ಸರ್ವೇ ನಡೆದಿದೆ ಎಂಬ ಮಾಹಿತಿ ಇದೆ. ಆದರೆ ಬಂಟ್ವಾಳ ತಾಲೂಕಿನ ಯಾವ್ಯಾವ ಗ್ರಾಮಗಳಲ್ಲಿ ವಿದ್ಯುತ್ ಲೈನ್ ಹಾದು ಹೊಗುತ್ತದೆ ಎಂಬ ಕುರಿತು ಗ್ರಾಮದ ಜನರಿಗೆ ಯಾವುದೇ ಮಾಹಿತಿ ನೀಡಲಾಗಿಲ್ಲ. ವಿದ್ಯುತ್ ಲೈನ್ ಹಾದು ಹೋಗುವ ಪ್ರದೇಶದಲ್ಲಿ 60 ಮೀ. (200 ಅಡಿ) ಅಗಲಕ್ಕೆ ಯಾವುದೇ ಕೃಷಿ ಮತ್ತಿತರ ಚಟುವಟಿಕೆಗಳನ್ನು ಕೈಗೊಳ್ಳುವಂತಿಲ್ಲ. ಇದರಿಂದ ಜನರಿಗೆ ಸಮಸ್ಯೆಯಾಗಲಿದೆ. ಆದ್ದರಿಂದ ಓವರ್ ಹೆಡ್ ಲೈನ್ ಬದಲು ಅಂಡರ್ ಗ್ರೌಂಡ್ ಪವರ್ ಲೈನನ್ನು ಅಳವಡಿಸಬೇಕು. ಅಲ್ಲದೆ ಈ ಲೈನನ್ನು ಪಡುಬಿದ್ರೆಯಿಂದ ಕೇರಳ ಕಡೆಗೆ ಸಮುದ್ರ ತೀರದಲ್ಲಿ ಹಾಕುವ ಬಗ್ಗೆ ಪರಿಶೀಲಿಸಬೇಕು ಎಂದು ಸಲಹೆ ಮಾಡಿದರು.

ಎಲ್‌ಆ್ಯಂಡ್‌ಟಿ ಸಂಸ್ಥೆಯು ವಿದ್ಯುತ್ ಲೈನ್ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ. ಮೂಡುಬಿದಿರೆ ಸಮೀಪದ ತಾಕೊಡೆಯಲ್ಲಿ ಜಾಗ ಖರೀದಿಸಿ ಕಾಮಗಾರಿಗೆ ಸಂಬಂಧಿಸಿದ ಯಂತ್ರೋಪಕರಣ ಮತ್ತು ಇತರ ಪರಿಕರಗಳನ್ನು ತಂದಿರಿಸಿದೆ. ಆದರೆ ಯೋಜನೆಯ ಬಗ್ಗೆ ಜನರಿಗೆ ಯಾವುದೇ ಮಾಹಿತಿ ಇಲ್ಲ. ಗೂಗಲ್ ಸರ್ವೇ ಎಂದರೆ ಏನೆಂದು ಜನರು ಕೇಳಲಾರಂಭಿಸಿದ್ದಾರೆ. ಜನರು ಭಯಗೊಂಡಿದ್ದಾರೆ. ಜನರನ್ನು ಕತ್ತಲಲ್ಲಿಟ್ಟು ಯೋಜನೆಯನ್ನು ಕಾರ್ಯಗತಗೊಳಿಸಬಾರದು. ತಕ್ಷಣ ಜನರಿಗೆ ಮಾಹಿತಿ ನೀಡಬೇಕು ಮತ್ತು ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ರೈ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಸದಸ್ಯರಾದ ಎಂ.ಎಸ್. ಮುಹಮ್ಮದ್ ಮತ್ತು ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಮಂಗಳೂರು ಮನಪಾ ವಿಪಕ್ಷ ನಾಯಕ ರವೂಫ್ ಬಜಾಲ್, ಕಾರ್ಪೊರೇಟರ್‌ಗಳಾದ ಶಶಿಧರ್ ಹೆಗ್ಡೆ, ನವೀನ್ ಡಿಸೋಜ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News