ಆರೋಗ್ಯ ನಿರೀಕ್ಷಕ ತಪ್ಪೊಪ್ಪಿಕೊಂಡಿದ್ದಾರೆ : ಅಧ್ಯಕ್ಷ ಶರೀಫ್

Update: 2021-01-13 16:08 GMT

ಬಂಟ್ವಾಳ, ಜ.13: ಕಳೆದ ತಿಂಗಳು ಪುರಸಭೆಯ ಸಾಮಾನ್ಯ ಸಭೆಯಂದೇ ಡೆತ್ ನೋಟ್ ಬರೆದಿಟ್ಟು ವಿಷದ ಬಾಟಲಿ ಹಿಡಿದು ಕೊಂಡು ಆತ್ಮಹತ್ಯೆ ಮಾಡುವುದಾಗಿ ಬಂಟ್ವಾಳ ಪುರಸಭೆಯ ಆರೋಗ್ಯ ನೀರಿಕ್ಷಕ ರವಿಕೃಷ್ಣ ಪುಣಚ ಬುಧವಾರ ನಡೆದ ಈ ತಿಂಗಳ ಸಭೆಗೂ ಗೈರು ಹಾಜರಾಗಿರುವುದು ಸದಸ್ಯರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. 

ಬಂಟ್ವಾಳ ಪುರಸಭೆಯಲ್ಲಿ ಕಸದ ಸಮಸ್ಯೆಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದರೂ ಆರೋಗ್ಯ ನಿರೀಕ್ಷಕರು ಹಲವು ದಿನಗಳಿಂದ ಕಚೇರಿಗೆ ಬಾರದೆ ರಜೆಯಲ್ಲಿದ್ದಾರೆ. ಇದರಿಂದಾಗಿ ಆರೋಗ್ಯ ನಿರೀಕ್ಷರು ಮಾಡಬೇಕಾದ ಕೆಲಸವನ್ನು ಮುಖ್ಯಾಧಿಕಾರಿ ಹಾಗೂ ಇತರ ಅಧಿಕಾರಿಗಳು ಮಾಡಬೇಕಾದ ಸನ್ನಿವೇಶ ನಿರ್ಮಾಣಗೊಂಡಿದ್ದು ಆರೋಗ್ಯ ನಿರೀಕ್ಷಕರ ವಿರುದ್ಧ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಪುರಸಭೆಯ ಆರೋಗ್ಯ ನಿರೀಕ್ಷರು ಎಲ್ಲಿಗೆ ಹೋಗಿದ್ದಾರೆ ಎಂದು ವಿಷಯ ಪ್ರಸ್ತಾಪಿಸಿದ ವಿಪಕ್ಷ ಸದಸ್ಯ ಗೋವಿಂದ ಪ್ರಭು, ಅಧಿಕಾರಿಯ ಬೇಜವಬ್ದಾರಿಯ ವರ್ತನೆಯಿಂದ ಬಂಟ್ವಾಳ ಪುರಸಭೆಯ ಘನತೆಗೆ ಧಕ್ಕೆ ಉಂಟಾಗಿದೆ. ಪುರಸಭೆಯ ಗೌರವವನ್ನು ಹರಾಜು ಮಾಡಿದ್ದಾರೆ ಎಂದು ಆರೋಪಿಸಿದರು.

ಅಲ್ಲದೆ ಆರೋಗ್ಯ ನಿರೀಕ್ಷಕ ಪುರಸಭೆಯ ಅಧ್ಯಕ್ಷರಿಗೆ ಬರೆದ ಡೆತ್ ನೋಟ್ ಮಾಧ್ಯಮಗಳಿಗೆ ಸೋರಿಕೆಯಾಗಿದ್ದು ಹೇಗೆ ಎಂದು ಗೋವಿಂದ ಪ್ರಭು ಪ್ರಶ್ನಿಸಿದರು. ಅದು ಆರೋಗ್ಯ ನಿರೀಕ್ಷಕರನ್ನು ಆಸ್ಪತ್ರೆಯಲ್ಲಿ ಮೊದಲು ಭೇಟಿಯಾದವರು ಮತ್ತು ಆತ್ಮಹತ್ಯೆಗೆ ಯತ್ನ ಮಾಡುವಂತೆ ಅವರಲ್ಲಿ ನಾಟಕ ಮಾಡಿಸಿದವರು ಸೋರಿಕೆ ಮಾಡಿದ್ದಾರೆ ಎಂದು ಸದಸ್ಯ ಅಬೂಬಕ್ಕರ್ ಸಿದ್ದೀಕ್ ಆರೋಪಿ ಸಿದರು. ಈ ಸಂದರ್ಭ ಆಡಳಿತ ಪಕ್ಷ ಹಾಗೂ ವಿಪಕ್ಷದ ನಡುವೆ ಮಾತಿನ ಚಕಮಕಿಯೂ ನಡೆದು ಆರೋಪ ಪ್ರತ್ಯಾರೋಪಗಳು ಕೇಳಿ ಬಂತು.

ಸುಳ್ಳು ಆರೋಪ ಹೊರಿಸಿ ಡೆತ್‌ ನೋಟ್ ಬರೆದಿರುವ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಮತ್ತು ನಗರ ಕೋಶದ ಯೋಜನಾ ನಿರ್ದೇಶಕರಿಗೆ ಪುರಸಭೆಯ ಮುಖ್ಯಾಧಿಕಾರಿ ದೂರು ನೀಡಿದ ಹಿನ್ನೆಲೆಯಲ್ಲಿ ಮೂರು ಮಂದಿ ಅಧಿಕಾರಿಗಳ ತಂಡ ಆಂತರಿಕ ವಿಚಾರಣೆ ನಡೆಸಿದ ವೇಳೆ ಆರೋಗ್ಯ ನಿರೀಕ್ಷಕ ರವಿಕೃಷ್ಣ ಪುಣಚ, ನನ್ನಿಂದ ತಪ್ಪಾಗಿರುವುದಾಗಿ ಖುದ್ದು ಒಪ್ಪಿಕೊಂಡಿ ದ್ದಾರೆ ಎಂದು ಅಧ್ಯಕ್ಷ ಮುಹಮ್ಮದ್ ಶರೀಫ್ ಸಭೆಗೆ ತಿಳಿಸಿದರು.

ಅಲ್ಲದೆ ಆರೋಗ್ಯ ನಿರೀಕ್ಷಕ ಯಾವುದೇ ಪೊಲೀಸ್ ದೂರು ನೀಡಿಲ್ಲ. ಪುರಸಭೆಯಲ್ಲಿ ಅವರಿಗೆ ಕಿರುಕುಳ ಆಗಿದ್ದರೆ ನನಗೆ ಅಥವಾ ಮೇಲಾಧಿಕಾರಿಗಳಿಗೆ ದೂರು ನೀಡಬಹುದಿತ್ತು. ಪುರಸಭೆ, ಮುಖ್ಯಾಧಿಕಾರಿ, ಸಹಾಯಕ ಇಂಜಿನಿಯರ್ ಮತ್ತು ಪುರಸಭಾ ಆಡಳಿ ತಕ್ಕೆ ಕೆಟ್ಟ ಹೆಸರು ಬರುವಂತಾಗಲು ಕೆಲವರು ಅವರಲ್ಲಿ ವಿಷದ ಬಾಟಲಿ ಕೊಟ್ಟು ನಾಟಕ ಮಾಡಿಸಿದ್ದಾರೆ. ಡೆತ್ ನೋಟ್ ಅನ್ನು ಬೇಕೆಂದಲೇ‌ ಮಾಧ್ಯಮದವರಿಗೆ ಸೋರಿಕೆ ಮಾಡಿ ರಾಜ್ಯ ಮಟ್ಟದಲ್ಲಿ ಸುದ್ದಿ ಆಗುವಂತೆ ಮಾಡಿದ್ದಾರೆ ಎಂದು ಅಧ್ಯಕ್ಷ ಮುಹಮ್ಮದ್ ಶರೀಫ್ ಸಭೆಯ ಗಮನಕ್ಕೆ ತಂದರು.

ಪುರಸಭೆಯ ಸಮಸ್ಯೆಗಳೇ ಸಾಕಷ್ಟು ಇರುವಾಗ ಅವರ ಬಗ್ಗೆ ನಾವು ಯಾಕೆ ಮಾತನಾಡಿ ಸಮಯ ವ್ಯರ್ಥ ಮಾಡುವುದು ಎಂದು ಕೆಲವು ಸದಸ್ಯರ ಸಲಹೆಯ ಮೇರೆಗೆ ಚರ್ಚೆಗೆ ತೆರೆ ಬಿತ್ತು. 

ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ನಾಲ್ಕು ದಿನಗಳಿಗೆ ಒಮ್ಮೆ ಕಸ ಸಂಗ್ರಹದ ವಾಹನ ಮನೆ ಮನೆ ಬರುತ್ತಿರುವುದರಿಂದ ಜನರು ರಸ್ತೆ ಬದಿಯಲ್ಲಿ ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿದ್ದಾರೆ. ಹೀಗಾಗಿ ಮೆಲ್ಕಾರ್, ಬಿ.ಸಿ.ರೋಡ್, ಪಾಣೆಮಂಗಳೂರು, ಕೈಕಂಬ, ತಲಪಾಡಿ ಮೊದಲಾದೆಡೆ ರಸ್ತೆ ಬದಿಯೇ ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ದ್ವನಿಗೂಡಿಸಿದ ಸದಸ್ಯ ಮುನೀಶ್ ಅಲಿ, ಕಸ ಸಂಗ್ರಹದ ಮಾಸಿಕ ಹಣವನ್ನು ಮನೆ ತೆರಿಯೊಂದಿಗೆ ವಸೂಲಿ ಮಾಡಲಾ ಗುತ್ತಿದೆ. ಆದರೆ ಎಲ್ಲಿಯೂ ಸಮರ್ಪಕವಾಗಿ ಕಸ ಸಂಗ್ರಹವಾಗುತ್ತಿಲ್ಲ. ನಾಲ್ಕು ದಿನಗಳಿಗೊಮ್ಮೆ ಕಸದ ವಾಹನ ಮನೆ ಮನೆ ಕಸ ಸಂಗ್ರಹಕ್ಕೆ ಬರುತ್ತದೆ. ಇದು ಜನರಿಗೆ ಮಾಡುವ ಅನ್ಯಾಯ. ತೆರಿಗೆಯೊಂದಿಗೆ ಕಸ ಸಂಗ್ರಹದ ಹಣ ಪಡೆಯುವುದನ್ನು ರದ್ದು ಮಾಡಿ ನಿರ್ಣಯ ಮಾಡಬೇಕು ಎಂದು ಅಧ್ಯಕ್ಷರನ್ನು ಆಗ್ರಹಿಸಿದರು.

ಸಜಿಪನಡು ಗ್ರಾಮದಲ್ಲಿ ಪುರಸಭೆಗೆ ಸೇರಿದ ಡಂಪಿಂಗ್ ಯಾರ್ಡ್ ಕಾಮಗಾರಿ ಈ ವರೆಗೆ ಪೂರ್ಣಗೊಂಡಿಲ್ಲ. ಕಾಮಗಾರಿಯನ್ನು ಮುಂದುವರಿಸಲು ಮರು ಟೆಂಡರ್ ಕರೆಯುವ ಮೊದಲು ಈ ಹಿಂದೆ ಕಾಮಗಾರಿಯ ಗುತ್ತಿಗೆ ಪಡೆದವರಲ್ಲಿ ಆದಷ್ಟು ಬೇಗ ಕಾಮಗಾರಿ ಯನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಬೇಕು. ತಪ್ಪಿದಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಡಿಗೆ ಸೇರಿಸಬೇಕು ಎಂದು ಸದಸ್ಯ ಲುಕ್ಮಾನ್ ಒತ್ತಾಯಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ವಿವಿಧ ಯೋಜನೆಯಡಿಯಡಿ ಸಬ್ಸಿಡಿ ನೀಡುವುದಾಗಿ ಅಧಿಕಾರಿಗಳು ತಿಳಿಸುತ್ತಾರೆ. ಆದರೆ ಬಂಟ್ವಾಳದ ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳು ಫಲಾನುಭವಿಗಳಿಗೆ ಸ್ಪಂದಿಸುವುದಿಲ್ಲ. ಮನೆಯಿಂದ ಬ್ಯಾಂಕಿಗೆ, ಬ್ಯಾಂಕಿಂದ ಮನೆಗೆ ಅಲೆದಾಡ ಬೇಕು, ಸ್ಥಳೀಯ ಸಂಸ್ಥೆಗಳು ಸಹಾಯ ಮಾಡಿದರೂ  ಬ್ಯಾಂಕ್ ಮ್ಯಾನೇಜರ್‌ಗಳು ಅವರನ್ನು ಸತಾಯಿಸುತ್ತಾರೆ ಎಂದು ಆಡಳಿತ ಪಕ್ಷದ ಸದಸ್ಯ ಜನಾರ್ದನ ಚೆಂಡ್ತಿಮಾರ್ ಆರೋಪಿದರು. ಸ್ಥಳೀಯ ಸಂಸ್ಥೆಗಳು ಆಯ್ಕೆ ಮಾಡುವ ಫಲಾನುಭವಿಗಳಿಗೆ ಬ್ಯಾಂಕ್ ಅಧಿಕಾರಿಗಳು ಆದ್ಯತೆ ನೀಡಬೇಕು. ಈ ಬಗ್ಗೆ ಪುರಸಭೆಯ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸದಸ್ಯ ಲುಕ್ಮಾನ್ ಧ್ವನಿಗೂಡಿಸಿದರು. ಇತ್ತೀಚೆಗೆ ಬೀದಿ ಬದಿ ವ್ಯಾಪಾರಿಗಳಿಗೆ ಹತ್ತು ಸಾವಿರ ರೂಪಾಯಿ ಸಾಲ ನೀಡುವ ಸಂದರ್ಭದಲ್ಲೂ ಅವರ ಸಿಬಿಲ್ ಪರಿಶೀಲಿಸಲಾಗಿದೆ ಎಂದು ಮುನೀಶ್ ಅಲಿ ತಿಳಿಸಿದರು.

ಅಧ್ಯಕ್ಷ ಮುಹಮ್ಮದ್ ಶರೀಫ್ ಸಭಾಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ, ಮುಖ್ಯಾಧಿಕಾರಿ ಲೀನಾಬ್ರಿಟ್ಟೋ ಉಪಸ್ಥಿತರಿದ್ದರು. ಸದಸ್ಯರಾದ ಮುಹಮ್ಮದ್ ನಂದರಬೆಟ್ಟು, ರಾಮಕೃಷ್ಣ ಆಳ್ವ, ವಾಸು ಪೂಜಾರಿ, ಗಂಗಾಧರ, ಹಸೈನಾರ್, ಲುಕ್ಮಾನ್, ಜನಾರ್ದನ ಚೆಂಡ್ತಿಮಾರ್, ಝೀನತ್ ಗೂಡಿನಬಳಿ, ಇದ್ರೀಸ್, ಗಾಯಾತ್ರಿ ಪ್ರಕಾಶ್, ವಿದ್ಯಾವತಿ, ಹರಿಪ್ರಸಾದ್, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಯಂಗಡಿ ಚರ್ಚೆಯಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News