ಕೊಕ್ಕಡ: ಮನೆಗೆ ಬೆಂಕಿ; ಅಪಾರ ನಷ್ಟ

Update: 2021-01-13 16:15 GMT

ಬೆಳ್ತಂಗಡಿ: ಕೊಕ್ಕಡ ಪಿಜಿನಡ್ಕ ಪಿ.ಕೆ ಚೀಂಕ್ರ ಎಂಬವರ ಮನೆ ಹಾಗೂ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ 3 ಕ್ವಿಂಟಾಲ್‌ಗೂ ಮಿಕ್ಕಿ ರಬ್ಬರ್ ಶೀಟ್ ಹಾಗೂ ಮನೆಯ ಅಗತ್ಯ ದಾಖಲೆ ಪತ್ರಗಳು, ನಗದು ಬೆಂಕಿಗಾಹುತಿಯಾದ ಘಟನೆ ಬುಧವಾರ ನಡೆದಿದೆ.

ಕೊಕ್ಕಡ ಗ್ರಾಮದ ಪಿಜಿನಡ್ಕ ಪಿ.ಕೆ ಚೀಂಕ್ರರವರು ಹೊಸಮನೆ ಕಟ್ಟುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಹೊಸ ಮನೆಯಲ್ಲಿಯೇ ಇರುತ್ತಿದ್ದ ಮನೆ ಮಂದಿ ಅಡುಗೆ ಮಾತ್ರ ಹಳೆ ಮನೆಯಲ್ಲಿ ಮಾಡುತ್ತಿದ್ದರು. ಹಳೆ ಮನೆಗೆ ತಾಗಿಕೊಂಡೇ ಕೊಟ್ಟಿಗೆ ಇದ್ದು, ಮನೆ ವಸ್ತುಗಳನ್ನು ಅದರಲ್ಲಿಯೇ ಜೋಡಿಸಿಡಲಾಗಿತ್ತು.

ಬೆಳಿಗ್ಗೆ  7 ಗಂಟೆಯ ಹೊತ್ತಿಗೆ ಬೆಂಕಿ ಹಿಡಿದು ಮನೆಯ ಹೆಂಚು ಹಾಗೂ ಶೀಟ್ ಒಡೆಯುವ ಸದ್ದು ಕೇಳಿ ಹೊರಗೆ ಬಂದು ನೋಡಿದಾಗ ರಬ್ಬರ್ ಶೀಟ್‌ಗೆ ತಗುಲಿದ ಬೆಂಕಿ ಮನೆಯನ್ನು ಸಂಪೂರ್ಣವಾಗಿ ಆವರಿಸಿತ್ತು. ಕೂಡಲೇ ಅಕ್ಕಪಕ್ಕದವರು ಸೇರಿ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಅದಾಗಲೇ 3 ಕ್ವಿಂಟಾಲ್‌ಗೂ ಮಿಕ್ಕಿದ ರಬ್ಬರ್ ಶೀಟ್, ಅಗತ್ಯ ದಾಖಲೆ ಪತ್ರಗಳು ಹಾಗೂ ಬ್ಯಾಗಿನಲ್ಲಿದ್ದ ಸುಮಾರು 30ಸಾವಿರ ನಗದು ಸೇರಿದಂತೆ ಸುಮಾರು 1.50 ಲಕ್ಷ ರೂ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಗ್ರಾಮಕರಣಿಕ ರೂಪೇಶ್, ಗ್ರಾ.ಪಂ ಸದಸ್ಯರುಗಳಾದ ಯೋಗೀಶ್ ಆಲಂಬಿಲ, ಜಗದೀಶ್, ಪುರುಷೋತ್ತಮ, ಜಾನಕಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News