ಆಸ್ಟ್ರೇಲಿಯನ್ ಓಪನ್ ಅಂಕಿತಾ ರೈನಾಗೆ ಅರ್ಹತಾ ಅಂತಿಮ ಪಂದ್ಯದಲ್ಲಿ ಸೋಲು

Update: 2021-01-14 05:50 GMT

 ದುಬೈ, ಜ.13: ಆಸ್ಟ್ರೇಲಿಯ ಓಪನ್ ಟೆನಿಸ್‌ನ ಮಹಿಳೆಯರ ಸಿಂಗಲ್ಸ್‌ನ ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ ಭಾರತದ ಅಂಕಿತಾ ರೈನಾ ಸೋಲು ಅನುಭವಿಸಿದ್ದಾರೆ.

  ಇದರೊಂದಿಗೆ ರೈನಾ ಅವರ ಗ್ರಾನ್ ಸ್ಲಾಮ್ ಸಿಂಗಲ್ಸ್‌ನ ಪ್ರಧಾನ ಸುತ್ತಿಗೆ ಅರ್ಹತೆ ಪಡೆಯುವ ಪ್ರಯತ್ನ ಮತ್ತೆ ವಿಫಲವಾಯಿತು.

 ಆಸ್ಟ್ರೇಲಿಯ ಓಪನ್ ಅರ್ಹತಾ ಸ್ಪರ್ಧೆಯ ಅಂತಿಮ ಸುತ್ತಿನ ಪಂದ್ಯವನ್ನು ಸರ್ಬಿಯಾದ ಓಲ್ಗಾ ಡ್ಯಾನಿಲೋವಿಕ್ ವಿರುದ್ಧ ಬುಧವಾರ ಕಳೆದುಕೊಂಡಾಗ ಅಂಕಿತಾ ರೈನಾರ ಗ್ರಾನ್ ಸ್ಲಾಮ್ ಸಿಂಗಲ್ಸ್ ಮುಖ್ಯ ಡ್ರಾಕ್ಕೆ ಅರ್ಹತೆ ಪಡೆಯುವ ಪ್ರಯತ್ನ ಮತ್ತೆ ವಿಫಲಗೊಂಡಿತು.

 ದುಬೈನಲ್ಲಿ ನಡೆಯುತ್ತಿರುವ ಮಹಿಳಾ ಸಿಂಗಲ್ಸ್ ಅರ್ಹತಾ ಪಂದ್ಯಗಳಲ್ಲಿ ಅಂಕಿತಾ ಮೂರನೇ ಮತ್ತು ಅಂತಿಮ ಸುತ್ತಿನಲ್ಲಿ 2-6, 6-3, 1-6 ಸೆಟ್‌ಗಳಿಂದ ತನ್ನ ಸರ್ಬಿಯಾದ ಎದುರಾಳಿಯ ವಿರುದ್ಧ ಸುಮಾರು ಎರಡು ಗಂಟೆಗಳ ಹೋರಾಟದಲ್ಲಿ ಸೋಲು ಅನುಭವಿಸಿದರು. ತನ್ನ ಮೊದಲ ಸರ್ವ್‌ನಲ್ಲಿ ಅಂಕಗಳನ್ನು ಗೆಲ್ಲಲು ಸಾಧ್ಯವಾಗದಿರುವುದು ಅಂಕಿತಾಗೆ ನೋವುಂಟು ಮಾಡಿತು.

   ಅರ್ಹತೆ ಪಡೆಯುವ ರೈನಾರ ಆರನೇ ಪ್ರಯತ್ನ ವಿಫಲಗೊಂಡಿದೆ. ಸುಮಿತ್ ನಾಗಲ್ ಈ ಋತುವಿನ ಮೊದಲ ಗ್ರಾನ್ ಸ್ಲಾಮ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಉಳಿದಿರುವ ಭಾರತದ ಏಕೈಕ ಆಟಗಾರ.

ಪುರುಷರ ಸಿಂಗಲ್ಸ್‌ನಲ್ಲಿ ನಾಗಲ್‌ಗೆ ವೈಲ್ಡ್ ಕಾರ್ಡ್ ಪ್ರವೇಶ ನೀಡಲಾಗಿದೆ.

   ಪುರುಷರ ಸಿಂಗಲ್ಸ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ರಾಮ್‌ಕುಮಾರ್ ರಾಮನಾಥನ್ ಸೋತಿದ್ದರೆ, ಪ್ರಜ್ಞೇಶ್ ಗುಣೇಶ್ವರನ್ ಎರಡನೇ ಸುತ್ತಿನಲ್ಲಿ ಫ್ರೆಂಚ್ ಆಟಗಾರ ಕಾನ್‌ಸ್ಟಂಟ್ ಲೆಸ್ಟಿಯೆನ್ ವಿರುದ್ಧ 2-6, 3-6ರಿಂದ ಕಳೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News