ಉಡುಪಿ: ಜ.16ರಿಂದ ಪರ್ಯಾಯ ಪಂಚಶತಮಾನೋತ್ಸವ

Update: 2021-01-14 13:51 GMT

ಉಡುಪಿ, ಜ14: ಸೋದೆ ಮಠದ ಶ್ರೀವಾದಿರಾಜರಿಂದ 1522ರ ಜ.18ರಂದು ಪ್ರಾರಂಭಗೊಂಡ ದ್ವೈವಾರ್ಷಿಕ ಪರ್ಯಾಯದ ಪಂಚ ಶತಮಾನೋತ್ಸವ ಕಾರ್ಯಕ್ರಮ ಜ.16ರಿಂದ 23ರವರೆಗೆ ಶ್ರೀಕೃಷ್ಣ ಮಠದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಪರ್ಯಾಯ ಅದಮಾರು ಮಠದ ದಿವಾನರಾದ ಐ. ಲಕ್ಷ್ಮೀನಾರಾಯಣ ಮುಚ್ಚಿಂತಾಯ ತಿಳಿಸಿದ್ದಾರೆ.

 ಶ್ರೀಕೃಷ್ಣ ಮಠದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಶ್ರೀಕೃಷ್ಣ ಮಠದಲ್ಲಿ ದ್ವೈವಾರ್ಷಿಕ ಪರ್ಯಾಯ ಪೂಜಾ ಪದ್ಧತಿ ಪ್ರಾರಂಭಗೊಂಡು 499 ವರ್ಷ ಪೂರ್ಣಗೊಂಡಿದ್ದು, ಜ.18ರಂದು 500ನೇ ವರ್ಷ ಕಾಲಿಡಲಿದೆ. ಮುಂದೆ ಒಂದು ವರ್ಷ ಕಾಲ ಈ ಕಾರ್ಯಕ್ರಮ ನಡೆಯಲಿದೆ ಎಂದರು.

ದ್ವೈವಾರ್ಷಿಕ ಪರ್ಯಾಯ ಪೂಜಾ ಪದ್ಧತಿಯಂತೆ ಮಧ್ವಾಚಾರ್ಯರು ಕೃಷ್ಣನ ಪೂಜೆಗಾಗಿ ನೇಮಿಸಿದ ಅಷ್ಟಮಠಗಳು ಒಟ್ಟು 16 ವರ್ಷಗಳಲ್ಲಿ ಒಂದು ಚಕ್ರ ಪೂರ್ಣಗೊಳ್ಳುತ್ತದೆ. ಈ ರೀತಿಯಲ್ಲಿ ಒಟ್ಟು 31 ಚಕ್ರಗಳು ಉರುಳಿದ್ದು, 32ನೇ ಚಕ್ರದಲ್ಲಿ ಪಲಿಮಾರು ಮಠ ತನ್ನ ಪರ್ಯಾಯ ಮುಗಿಸಿದ್ದು, ಇದೀಗ ಈ ಸುತ್ತಿನಲ್ಲಿ ಅದಮಾರು ಮಠದ ಪರ್ಯಾಯ ನಡೆಯುತ್ತಿದೆ. ಒಟ್ಟಾರೆಯಾಗಿ ಇದು ಈವರೆಗೆ ನಡೆದ 250ನೇ ಪರ್ಯಾಯವಾಗಿದೆ ಎಂದು ಅದಮಾರು ಮಠದ ಮ್ಯಾನೇಜರ್ ಗೋವಿಂದರಾಜ್ ವಿವರಿಸಿದರು.

ಪರ್ಯಾಯದ ಪಂಚಶತಮಾನೋತ್ಸವದ ಅಂಗವಾಗಿ ಒಂದು ವಾರ ಕಾಲ ಧಾರ್ಮಿ ಕಾರ್ಯಕ್ರಮ, ವಿವಿಧ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪುಸ್ತಕ ಅನಾವರಣ, ರಾಷ್ಟ್ರಮಟ್ಟದ ಗ್ರಾಮೀಣ ಉತ್ಪನ್ನಗಳ ಮೇಳವೂ ರಾಜಾಂಗಣದಲ್ಲಿ ನಡೆಯಲಿದೆ. ಅಲ್ಲದೇ ಪ್ರತಿದಿನ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನವೂ ನಡೆಯಲಿದೆ ಎಂದು ಗೋವಿಂದರಾಜ್ ತಿಳಿಸಿದರು.

18ಕ್ಕೆ ಯಡಿಯೂರಪ್ಪ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜ.18ರಂದು ಸಮಾರಂಭದಲ್ಲಿ ಪಾಲ್ಗೊಳ್ಳ ಲಿದ್ದು, ಮಠದಲ್ಲಿ ಭಕ್ತಾದಿ ಗಳಿಗೆ ಶ್ರೀಕೃಷ್ಣನ ದರ್ಶನಕ್ಕೆ ಅನುಕೂಲವಾಗುವಂತೆ ನೂತನವಾಗಿ ನಿರ್ಮಿಸಿದ ‘ವಿಶ್ವಪಥ’ವನ್ನು ಉದ್ಘಾಟಿಸಲಿದ್ದಾರೆ. ಈ ಮಾರ್ಗದಲ್ಲಿ ಸಾಗಿದರೆ ಕಟ್ಟಿಗೆ ರಥ, ಮಧ್ವ ಸರೋವರ, ಗರ್ಭಗುಡಿಯ ಸುವರ್ಣ ಗೋಪುರವನ್ನು ವೀಕ್ಷಿಸಿ ಭೋಜನ ಶಾಲೆಯಲ್ಲಿ ಅನ್ನಪ್ರಸಾದವನ್ನು ಸ್ವೀಕರಿಸಿ ತೆರಳಲು ಸಾದ್ಯವಾಗುತ್ತದೆ ಎಂದರು.

ಎಂಟು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರತಿದಿನ ವಿದ್ವಾಂಸರಿಂದ ಉಪನ್ಯಾಸಗಳು, ವಿಶೇಷವಾಗಿ ಅಷ್ಟಮಠ ಗಳ 500 ವರ್ಷಗಳ ವಿಶಿಷ್ಟ ಸಾಧನೆ, ಸಾಗಿಬಂದ ಮಾರ್ಗದ ಕುರಿತು ಅವಲೋಕನ, ಉಪನ್ಯಾಸ ವನ್ನು ಏರ್ಪಡಿಸಲಾಗಿದೆ. 16ರಂದು ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರ ಭಾಗವತ ಪ್ರವಚನಗಳ ಸಂಗ್ರಹ ಕೃತಿ ಬಿಡುಗಡೆಗೊಳ್ಳಲಿದೆ ಎಂದು ಗೋವಿಂದರಾಜ್ ತಿಳಿಸಿದರು.

18ರಂದು ಅಪರಾಹ್ನ 3:30ಕ್ಕೆ ಜೋಡುಕಟ್ಟೆಯಿಂದ ಮಧ್ವಾಚಾರ್ಯರು ಹಾಗೂ ವಾದಿರಾಜರ ಕೃತಿಗಳ ವೈಭವನದ ಮೆರವಣಿಗೆ ನಡೆಯಲಿದೆ. 22ರಂದು ಸೌರಮಧ್ವನವಮಿಯ ದಿನದಂದು ತುಳುಗೋಷ್ಠಿ ಹಾಗೂ ತುಳು ಲಿಪಿ ಕಲಿಕೆಯ ಉದ್ಘಾಟನೆ ನಡೆಯ ಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಡಿದ ಖ್ಯಾತನಾಮ ಕಲಾವಿದರು ಯಕ್ಷಗಾನವೂ ಸೇರಿದಂತೆ ವೈವಿದ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಸಮಾರೋಪ ಸಮಾರಂಭ ಜ.23ರಂದು ಸಂಜೆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂತೋಷಕುಮಾರ್ ಉದ್ಯಾವರ, ಕಲಾವಿದ ಪುರುಷೋತ್ತಮ ಅಡ್ವೆ, ಮಾಧವ ಉಪಾಧ್ಯ, ಪ್ರದೀಪ್ ರಾವ್, ವೈ.ಎನ್. ರಾಮಚಂದ್ರ ರಾವ್, ಪರಶುರಾಮ ಭಟ್ ಹಾಗೂ ರೋಹಿತ್ ತಂತ್ರಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News