ಮಲ್ಪೆ ಟೆಬ್ಮಾವನ್ನು ಕೊಚ್ಚಿನ್ ಶಿಪ್‌ಯಾರ್ಡ್‌ಗೆ ನೀಡುವುದಕ್ಕೆ ವಿರೋಧ; ಅನಿವಾರ್ಯವಾದರೆ ಹೋರಾಟ: ಮೀನುಗಾರರ ಸಂಘ

Update: 2021-01-14 14:14 GMT

ಉಡುಪಿ, ಜ.14: ಈ ಹಿಂದೆ ಮಾಡಿರುವ ಒಪ್ಪಂದದಂತೆ 2023ರಲ್ಲಿ ಗುತ್ತಿಗೆ ಅವಧಿ ಕೊನೆಗೊಳ್ಳಲಿರುವ ಮಲ್ಪೆ ಬಂದರಿನ ಟೆಬ್ಮಾ ಶಿಪ್‌ಯಾರ್ಡ್‌ನ್ನು ರಾಜ್ಯ ಸರಕಾರ ಇತರ ಯಾವುದೇ ಸಂಸ್ಥೆಗಳಿಗೆ ವಹಿಸಿಕೊಡಬಾರದು. ಬದಲಾಗಿ ಆ ಜಾಗವನ್ನು ಬಂದರು ವಿಸ್ತರಣೆ ಹಾಗೂ ಮೀನುಗಾರಿಕಾ ಕಾರ್ಯ ಚಟುವಟಿಕೆಗಳಿಗೆ ಮೀಸಲಿರಿಸಬೇಕು ಎಂದು ಮಲ್ಪೆ ಮೀನುಗಾರರ ಸಂಘ ಒತ್ತಾಯಿಸಿದೆ.

ಮಲ್ಪೆ ಬಂದರಿನಲ್ಲಿರುವ ಸಂಘದ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ, 2000ರಲ್ಲಿ ನಿರ್ಮಾಣ ಗೊಂಡ ಟೆಬ್ಮಾ ಶಿಪ್‌ಯಾರ್ಡ್‌ಗೆ ಮಲ್ಪೆ ಬಂದರಿನಲ್ಲಿ ಸುಮಾರು ಮೂರು ಎಕರೆ ಜಾಗವನ್ನು ಗುತ್ತಿಗೆ ಆಧಾರದಲ್ಲಿ 30ವರ್ಷಗಳಿಗೆ ನೀಡಲಾಗಿತ್ತು. 2008 ರಲ್ಲಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮೀನುಗಾರರ ಹಿತದೃಷ್ಠಿ ಮತ್ತು ಬಂದರಿನಲ್ಲಿ ವಿಸ್ತರಣೆಯ ಉದ್ದೇಶದಿಂದ ಟೆಬ್ಮಾಕ್ಕೆ ನೀಡಿದ್ದ 30ವರ್ಷಗಳ ಗುತ್ತಿಗೆ ಅವಧಿಯನ್ನು 15 ವರ್ಷಗಳಿಗೆ ಇಳಿಸಲಾಗಿತ್ತು. ಅದರಂತೆ 2009ರಲ್ಲಿ ಮಾಡಿದ ಒಪ್ಪಂದದಂತೆ ಈ ಅವಧಿಯು 2023ಕ್ಕೆ ಮುಗಿಯಲಿದೆ ಎಂದರು.

ಈ ಅವಧಿ ಮುಗಿಯುವ ಮೊದಲೇ ಸರಕಾರ ಈ ಟೆಬ್ಮಾ ಶಿಪ್ ಯಾರ್ಡ್ ನ್ನು ಕೇಂದ್ರ ಸರಕಾರದ ಅಧೀನದಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್‌ಗೆ ನೀಡಲು ಯೋಜಿಸಿದೆ ಎಂಬ ಸುದ್ದಿ ಕೇಳಿ ಬರುತ್ತಿವೆ. ಆದುದರಿಂದ ಯಾವುದೇ ಕಾರಣಕ್ಕೂ ಈ ಹಿಂದೆ ಆಗಿರುವ ಒಪ್ಪಂದದ ಪ್ರಕಾರ ಈ ಭೂಮಿಯನ್ನು ಬೇರೆ ಸಂಸ್ಥೆಗಳಿಗೆ ನೀಡಬಾರದು. ಇದಕ್ಕೆ ಸಮಸ್ತ ಮೀನುಗಾರರ ಹಿತವನ್ನು ಕಾಪಾಡುವ ಮಲ್ಪೆ ಮೀನುಗಾರರ ಸಂಘ ತೀವ್ರ ವಿರೋಧ ಮಾಡುತ್ತದೆ ಎಂದು ಅವರು ಹೇಳಿದರು.

ಮುಂದೆ ಅನಿವಾರ್ಯವಾದರೆ ಇದರ ವಿರುದ್ಧ ಹೋರಾಟಕ್ಕೂ ಸಿದ್ಧರಾಗಿದ್ದೇವೆ. ಈ ಸಂಬಂಧ ಈಗಾಗಲೇ ಸಂಘದ ಸಭೆಯಲ್ಲಿ ನಿರ್ಣಯ ತೆಗೆದು ಕೊಳ್ಳಲಾಗಿದೆ. ಸಂಬಂಧಪಟ್ಟ ಸಚಿವರು ಹಾಗೂ ಸ್ಥಳೀಯ ಸಚಿವರು ಈ ವಿಚಾರವನ್ನು ಸರಕಾರದ ಗಮನಕ್ಕೆ ತರಬೇಕು. ಬಂದರಿನ ಒತ್ತಡ ನಿಬಾಯಿ ಸಲು ಈಗಿನ ಪರಿಸ್ಥಿತಿಯಲ್ಲಿ ತುಂಬಾ ಕಷ್ಟ ಸಾಧ್ಯವಾಗಿರುವುದರಿಂದ ಈ ಜಾಗವನ್ನು ಭವಿಷ್ಯದ ಮೀನುಗಾರಿಕೆಗೆ ಪೂರಕವಾಗಿ ಮತ್ತು ಬೋಟುಗಳ ಒತ್ತಡ ಕಡಿಮೆ ಮಾಡಲು ಬಂದರು ಅಭಿವೃದ್ಧಿಗೆ ಮೀಸಲಿರಿಸಬೇಕು ಎಂದು ಅವರು ತಿಳಿಸಿದರು.

ಕರಾವಳಿಯ ಮೂರು ಜಿಲ್ಲೆಗಳ ಬೋಟುಗಳು ಈ ಬಂದರಿನಲ್ಲಿ ಮೀನು ವಿಲೇವಾರಿ ಮಾಡುತ್ತಿದ್ದು, ಏಷ್ಯಾ ಖಂಡದಲ್ಲಿಯೇ ಬಹಳಷ್ಟು ಪ್ರಾಮುಖ್ಯತೆ ಪಡೆದ ಬಂದರು ಇದಾಗಿದೆ. ರಾಜ್ಯದ ಆದಾಯದ ದೃಷ್ಠಿಯಿಂದಲೂ ಈ ಬಂದರು ಅತ್ಯಂತ ಪ್ರಮುಖವಾಗಿದೆ. 2023ರಲ್ಲಿ ಟೆಬ್ಮಾ ಶಿಪ್‌ಯಾರ್ಡ್‌ನ್ನು ಅಲ್ಲಿಂದ ತೆರವುಗೊಳಿಸಿ, ಬೋಟುಗಳ ಒತ್ತಡ ಕಡಿಮೆ ಮಾಡಲು ಬಂದರು ವಿಸ್ತರಣೆ ಮಾಡಬೇಕು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರುಗಳಾದ ವಿಠಲ ಕರ್ಕೇರ, ರಮೇಶ್ ಕೋಟ್ಯಾನ್, ನಾಗರಾಜ್ ಕುಂದರ್, ಪ್ರಧಾನ ಕಾರ್ಯದರ್ಶಿ ಸುಭಾಶ್ ಮೆಂಡನ್ ಕೋಶಾಧಿಕಾರಿ ಶಿವಾನಂದ್ ಉಪಸ್ಥಿತರಿದ್ದರು.

ಸ್ಲೀಪ್‌ವೇ ಹಸ್ತಾಂತರಕ್ಕೆ ಒತ್ತಾಯ

ಮೀನುಗಾರರ ಬಹಳ ಮುಖ್ಯವಾದ ಬೇಡಿಕೆಯಾಗಿರುವ ಸ್ಲೀಪ್ ವೇ ಬದಲು ಸರಕಾರ ಟೆಬ್ಮಾ ಶಿಪ್ ಯಾರ್ಡ್‌ಗೆ ಅವಕಾಶ ಮಾಡಿಕೊಟ್ಟಿತ್ತು. ಅದರ ವಿರುದ್ಧ ಆ ಸಂದರ್ಭದಲ್ಲಿ ಹೋರಾಟ ನಡೆಸಲಾಗಿತ್ತು. ಆ ಹಿನ್ನೆಲೆಯಲ್ಲಿ ಶಿಪ್ ಯಾರ್ಡ್‌ನವರು ಬಂದರಿನಲ್ಲಿ ಸ್ಲೀಪ್ ವೇ ನಿರ್ಮಿಸಲು ಹಣ ಒದಗಿಸಿದ್ದರು. ಅದಕ್ಕೆ ಸರಕಾರದ ಅನುದಾನ ಸೇರಿಸಿ ಸ್ಲೀಪ್ ವೇ ನಿರ್ಮಿಸಲಾಗಿತ್ತು ಎಂದು ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ತಿಳಿಸಿದರು.

ಈ ಸ್ಲೀಪ್ ವೇ ಕಾಮಗಾರಿ ಪೂರ್ಣಗೊಂಡು 7ವರ್ಷಗಳು ಕಳೆದವು. ಇದೀಗ ಇಲ್ಲಿನ ಸೊತ್ತುಗಳು ಬಳಕೆಯಾಗದೆ ತುಕ್ಕು ಹಿಡಿಯುತ್ತಿವೆ. ಇದನ್ನು ಮೀನುಗಾರರ ಸಂಘಕ್ಕೆ ಹಸ್ತಾಂತರಿಸಬೇಕೆಂಬ ಬೇಡಿಕೆಯನ್ನು ಸಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಆದುದರಿಂದ ಆದಷ್ಟು ಬೇಗ ಸರಕಾರ ಈ ಸ್ಲೀಪ್‌ವೇ ಯನ್ನು ಸಂಘಕ್ಕೆ ವಹಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News