ಟ್ವಿಟರ್‌ನಿಂದ ಟ್ರಂಪ್ ನಿಷೇಧ ಸರಿಯಾದ ಕ್ರಮ ಆದರೆ…: ಟ್ವಿಟರ್ ಸಿಇಒ ಜಾಕ್ ಡೊರ್ಸಿ ಹೇಳಿಕೆ

Update: 2021-01-14 14:32 GMT
ಟ್ವಿಟರ್ ಸಿಇಒ ಜಾಕ್ ಡೊರ್ಸಿ

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಜ. 14: ಕಳೆದ ವಾರ ಅಮೆರಿಕದ ಸಂಸತ್‌ನಲ್ಲಿ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಬೆಂಬಲಿಗರು ನಡೆಸಿದ ಹಿಂಸಾಚಾರದ ಬಳಿಕ ಟ್ವಿಟರ್‌ನಿಂದ ಅಧ್ಯಕ್ಷರನ್ನು ನಿಷೇಧಿಸಿರುವುದು ಸರಿಯಾದ ನಿರ್ಧಾರವಾಗಿದೆ ಎಂದು ಟ್ವಿಟರ್ ಇಂಕ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜಾಕ್ ಡೊರ್ಸಿ ಬುಧವಾರ ಹೇಳಿದ್ದಾರೆ. ಆದರೆ, ಇದು ಅಪಾಯಕಾರಿ ಪೂರ್ವನಿದರ್ಶನವೊಂದನ್ನು ಹುಟ್ಟು ಹಾಕುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಹಿಂಸಾಚಾರ ನಡೆಯುವ ಅಪಾಯದ ಹಿನ್ನೆಲೆಯಲ್ಲಿ, ಟ್ರಂಪ್‌ರ ಸಾಮಾಜಿಕ ಮಾಧ್ಯಮ ಖಾತೆಯನ್ನು ಟ್ವಿಟರ್ ಕಳೆದ ವಾರ ರದ್ದುಪಡಿಸಿದೆ. ಟ್ರಂಪ್ ಟ್ವಿಟರ್‌ನಲ್ಲಿ 8.8 ಕೋಟಿ ಅನುಯಾಯಿ (ಫಾಲೋವರ್ಸ್)ಗಳನ್ನು ಹೊಂದಿದ್ದರು.

‘‘ಈ ಕ್ರಮಗಳು ಸಾರ್ವಜನಿಕ ಸಂವಹನವನ್ನು ಛಿದ್ರಗೊಳಿಸುತ್ತವೆ’’ ಎಂಬುದಾಗಿ ಡೊರ್ಸಿ ಟ್ವಿಟರ್‌ನಲ್ಲಿ ಹೇಳಿದ್ದಾರೆ. ‘‘(ಖಾತೆಗಳನ್ನು ರದ್ದುಪಡಿಸುವಂಥ) ಕ್ರಮಗಳು ಸ್ಪಷ್ಟೀಕರಣ ನೀಡುವ, ಸುಧಾರಣೆಗೊಳ್ಳುವ ಮತ್ತು ಕಲಿಯುವಿಕೆಯ ಅವಕಾಶಗಳನ್ನು ಸೀಮಿತಗೊಳಿಸುತ್ತವೆ ಹಾಗೂ ಜಾಗತಿಕ ಸಾರ್ವಜನಿಕ ಸಂವಹನದ ಮೇಲೆ ಓರ್ವ ವ್ಯಕ್ತಿ ಅಥವಾ ಒಂದು ಸಂಸ್ಥೆ ಹೊಂದಿರುವ ನಿಯಂತ್ರಣದತ್ತ ಬೆಟ್ಟು ಮಾಡುತ್ತವೆ. ಹಾಗಾಗಿ, ಇದು ಕೆಟ್ಟ ಪೂರ್ವನಿದರ್ಶನವೊಂದನ್ನು ಹುಟ್ಟುಹಾಕುತ್ತದೆ. ಇದು ಅಪಾಯಕಾರಿಯೆಂದು ನನಗನಿಸುತ್ತದೆ’’ ಎಂದು ಅವರು ಹೇಳಿದ್ದಾರೆ.

ಟ್ರಂಪ್ ವಿರುದ್ಧ ಟ್ವಿಟರ್ ವಿಧಿಸಿರುವ ನಿಷೇಧವನ್ನು ಜರ್ಮನಿಯ ಚಾನ್ಸಿಲರ್ ಆ್ಯಂಜೆಲಾ ಮರ್ಕೆಲ್ ಟೀಕಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರದ ಮೇಲಿನ ನಿಷೇಧವನ್ನು ನಿರ್ಧರಿಸಬೇಕಾಗಿರುವುದು ಸಂಸದರೇ ಹೊರತು, ಖಾಸಗಿ ಕಂಪೆನಿಗಳಲ್ಲ ಎಂದು ಅವರು ಹೇಳಿದ್ದಾರೆ.

ಇದಕ್ಕಾಗಿ ನಾನೇನೂ ಹೆಮ್ಮೆ ಪಡುವುದಿಲ್ಲ ಎಂದು ಹೇಳಿರುವ ಅವರು, ‘‘ಆನ್‌ಲೈನ್ ಭಾಷಣದ ಕಾರಣದಿಂದಾಗಿ ಉಂಟಾಗಿರುವ ಆಫ್‌ಲೈನ್ ಹಾನಿಯು ನೈಜವಾಗಿದೆ. ಇದು ಇತರ ಯಾವುದೇ ಅಂಶಗಳಿಗಿಂತಲೂ ಹೆಚ್ಚು ನಮ್ಮ ನೀತಿ ಮತ್ತು ಅನುಷ್ಠಾನವನ್ನು ನಿರ್ಧರಿಸುತ್ತದೆ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News