ಮುಂಬೈ ಐಐಟಿ ಟೆಕ್‌ಫೆಸ್ಟ್: ಎಂಐಟಿ ಅಗ್ರಸ್ಥಾನ

Update: 2021-01-14 15:07 GMT

ಮಣಿಪಾಲ, ಜ.14: ಕೊರೋನದ ಉಪಟಳದ ನಡುವೆಯೂ ಮುಂಬಯಿ ಐಐಟಿಯ ವಾರ್ಷಿಕ ತಾಂತ್ರಿಕ ಹಬ್ಬ ‘ಟೆಕ್ ಫೆಸ್ಟ್’ನಲ್ಲಿ ಭಾಗವಹಿಸಿದ ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ವಿದ್ಯಾರ್ಥಿಗಳ ತಂಡ ಅಗ್ರಸ್ಥಾನವನ್ನು ಗೆದ್ದುಕೊಂಡಿದೆ ಎಂದು ಎಂಐಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ವರ್ಷದ ನ.3ರಿಂದ ಪ್ರಾರಂಭಗೊಂಡ ಈ ಸ್ಪರ್ಧೆ ಈ ವರ್ಷದ ಜ.5ರಂದು ಮುಕ್ತಾಯಗೊಂಡಿತು ಎಂದು ಹೇಳಿಕೆ ತಿಳಿಸಿದೆ. ದೇಶಾದ್ಯಂತದ 250ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ನಾಲ್ಕನೇ ವರ್ಷದ ಇಎಂಡ್‌ಸಿಯ ಪರೀಶ್ ಕೆ.ವಿ. ನೇತೃತ್ವದ ತಂಡ ಎಂಐಟಿಯನ್ನು ಪ್ರತಿನಿಧಿಸಿದ್ದು, ಇದರಲ್ಲಿ ನಾಲ್ಕನೇ ವರ್ಷದ ಮೆಕಟ್ರಾನಿಕ್ಸ್‌ನ ಸಾಯಿ ಅರವಿಂದ ಚಿಂತಾ ನಿಪ್ಪು, ನಾಲ್ಕನೇ ವರ್ಷದ ಇಎಂಡ್‌ಸಿಯ ಅನುಕೂಲ್ ಜಿಂದಾಲ್ ಹಾಗೂ ಮೆಕ್ಯಾನಿಕಲ್‌ನ ಶ್ರೀರಾಗ್ ಮಹಾದೇವನ್ ಚಿರೂತ್ ಇದ್ದರು.

ಕೋವಿಡ್‌ನ ಈ ಕಾಲದಲ್ಲಿ ಸ್ಪರ್ಧೆಗೆ ಕೋವಿಡ್‌ನ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಹಾಗೂ ವ್ಯಾಕ್ಸಿನ್‌ನ್ನು ತ್ವರಿತವಾಗಿ ಹಂಚುವ ಕುರಿತಂತೆ ತಂತ್ರಜ್ಞಾನ ವನ್ನು ಬಳಸುವ ವಿಷಯವನ್ನು ನೀಡಲಾಗಿತ್ತು. ಇದಕ್ಕಾಗಿ ಪ್ರಾಯೋಗಿಕವಾದ, ಸುಲಭದಲ್ಲಿ ಬಳಸಬಹು ದಾದ, ಕಡಿಮೆ ವೆಚ್ಚದ ಮಾದರಿಯನ್ನು ವಿದ್ಯಾರ್ಥಿಗಳು ತಯಾರಿಸಬೇಕಿತ್ತು.

ಎಂಐಟಿ ವಿದ್ಯಾರ್ಥಿಗಳು ತಯಾರಿಸಿದ ಮಾದರಿಯಲ್ಲಿ ಇಲೆಕ್ಟ್ರಾನಿಕ್ಸ್ ಹಾಗೂ ಸೆನ್ಸರ್‌ಗಳನ್ನು ಬಳಸಿ ರೋಗಿಯೊಬ್ಬರ ಎಲ್ಲಾ ಡಾಟಾಗಳನ್ನು ಸುಲಭದಲ್ಲಿ ವೈಫೈ ಅಥವಾ ಎಸ್‌ಎಂಎಸ್ ಮೂಲ ಕಳುಹಿಸಿ, ಅದರಲ್ಲಿ ಯಾವುದೇ ಅಸಹಜತೆ ಕಂಡುಬಂದರೆ ತಕ್ಷಣ ಸೂಕ್ತ ಕ್ರಮಕೈಗೊಳ್ಳಲು ಈ ಮೂಲಕ ವೈರಸ್‌ನ ಹರಡುವಿಕೆಯನ್ನು ತಡೆಯಲು ಸಾಧ್ಯವಿತ್ತು. ಸ್ಪರ್ಧೆ ಮೂರು ಸುತ್ತುಗಳಲ್ಲಿ ನಡೆದಿತ್ತು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News