ಉಡುಪಿಯಲ್ಲಿ ಅತ್ಯಾಕರ್ಷಕ ಮೂರು ತೇರು ಉತ್ಸವ

Update: 2021-01-14 15:39 GMT

ಉಡುಪಿ, ಜ.14: ಶ್ರೀಕೃಷ್ಣ ಮಠದಲ್ಲಿ ನಡೆದಿರುವ ಸಪ್ತೋತ್ಸವದ ಆರನೇ ದಿನವಾದ ಗುರುವಾರ ರಾತ್ರಿ ಮಕರ ಸಂಕ್ರಾಂತಿಯ ಅಂಗವಾಗಿ ಪರ್ಯಾಯ ಶ್ರೀಅದಮಾರು ಮಠಾಧೀಶರ ನೇತೃತ್ವದಲ್ಲಿ ಆಕರ್ಷಕ ಮೂರು ತೇರು ಉತ್ಸವ ನಡೆಯಿತು.

ಮೂರು ತೇರು ಉತ್ಸವದಲ್ಲಿ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು ಹಾಗೂ ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿಯವರಲ್ಲದೇ, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ಹಾಗೂ ಶ್ರೀವಿದ್ಯಾರಾಜೇಶ್ವರ ತೀರ್ಥರು, ಪೇಜಾವರಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು.

ಸಂಜೆ ಸುಮಾರು 7:30ರ ಸುಮಾರಿಗೆ ಶ್ರೀಕೃಷ್ಣ, ಮುಖ್ಯಪ್ರಾಣರ ಮೂರ್ತಿ ಗಳನ್ನು ಸುವರ್ಣ ಪಲ್ಲಕ್ಕಿಯಲ್ಲಿ ಗರ್ಭಗುಡಿಯಿಂದ ಹೊರತಂದು ರಂಗುರಂಗಿನ ವಿದ್ಯುದ್ದೀಪಗಳಿಂದ ಅಲಂಕೃತ ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆಸಲಾಯಿತು. ಬಳಿಕ ಮಕರ ಸಂಕ್ರಾಂತಿಯ ದಿನದಂದು ಮೊದಲ ಬಾರಿ ಉತ್ಸವದಲ್ಲಿ ಪಾಲ್ಗೊಳ್ಳುವ ಬ್ರಹ್ಮರಥದಲ್ಲಿ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು, ಚಿಕ್ಕ ರಥದಲ್ಲಿ ಮುಖ್ಯಪ್ರಾಣನ ಉತ್ಸವ ಮೂರ್ತಿಯನ್ನು ಹಾಗೂ ಗರುಡ ರಥದಲ್ಲಿ ಶ್ರೀಅನಂತೇಶ್ವರ ಹಾಗೂ ಚಂದ್ರವೌಳೀಶ್ವರ ಮೂರ್ತಿಯನ್ನಿರಿಸಿ ರಥಬೀದಿಗೆ ಒಂದು ಸುತ್ತು ಬರಲಾಯಿತು.

 ಭಕ್ತರಿಂದ ಎಳೆಯಲ್ಪಟ್ಟ ಮೂರು ರಥಗಳು ರಥಬೀದಿಯ ದಕ್ಷಿಣ ಭಾಗದಲ್ಲಿ ಪುತ್ತಿಗೆ ಮಠದ ಎದುರು ಒಂದೇ ರೇಖೆಯಲ್ಲಿ ನಿಂತಾಗ ಸಾವಿರಾರು ಮಂದಿ ಭಕ್ತರು ಜಯಘೋಷ ಮಾಡಿದರು. ರಥಗಳ ಮುಂದೆ ವರ್ಣವೈವಿಧ್ಯ ಅತ್ಯಾಕರ್ಷಕ ಸುಡುಮದ್ದು ಗಳನ್ನು ಸಿಡಿಸಿ ಆಕಾಶದಲ್ಲಿ ಬಣ್ಣಗಳ ಚಿತ್ತಾರವನ್ನು ಮೂಡಿಸಲಾಯಿತು.

ಶುಕ್ರವಾರ ಚುರ್ಣೋತ್ಸವ:  ಆಚಾರ್ಯ ಮಧ್ವರು 13ನೇ ಶತಮಾನದಲ್ಲಿ ಮಕರ ಸಂಕ್ರಾಂತಿಯಂದು ಕೃಷ್ಣ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದ ನೆನೆಪಿಗಾಗಿ ವಾರ್ಷಿಕ ಸಪ್ತೋತ್ಸವ ಜಾತ್ರೆಯನ್ನು ಆಚರಿಸಲಾಗುತ್ತದೆ. ಬೆಳಗ್ಗೆ 8:30ಕ್ಕೆ ಹಗಲು ರಥೋತ್ಸವ ಹಾಗೂ ಚೂರ್ಣೋತ್ಸವದೊಂದಿಗೆ ಒಂದು ವಾರದ ಸಪ್ತೋತ್ಸವ ಮುಕ್ತಾಯಗೊಳ್ಳಲಿದೆ. ನಾಳೆ ಸುವರ್ಣೋತ್ಸವ, ಅವಭೃತ ಸ್ನಾನದೊಂದಿಗೆ ಮಹಾ ಅನ್ನಸಂತರ್ಪಣೆಯೂ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News