​ಮಂಗಳೂರು: ಮೂವರು ಬಾಲಕರ ಅಪಹರಣಕ್ಕೆ ಯತ್ನ

Update: 2021-01-14 15:57 GMT
ಘಟನಾ ಸ್ಥಳದಲ್ಲಿ ಸೇರಿರುವ ಸ್ಥಳೀಯರು

ಮಂಗಳೂರು, ಜ.14: ನಗರದ ಪದವಿನಂಗಡಿ ಬಳಿಯ ಕೊಂಚಾಡಿ ವೆಂಕಟರಮಣ ಮಹಾಲಸಾ ದೇವಾಲಯದ ಎದುರು ದ್ವಿಚಕ್ರ ವಾಹನದಲ್ಲಿ ಬಂದ ಸವಾರರು ಬಾಲಕನನ್ನು ಅಪಹರಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದೆ.

ಮೂವರು ಬಾಲಕರು ಬುಧವಾರ ರಾತ್ರಿ 7 ಗಂಟೆ ವೇಳೆಗೆ ಕೊಂಚಾಡಿ ಮಹಾಲಸಾ ದೇವಾಲಯದಿಂದ ಸಮೀಪದಲ್ಲೇ ಇರುವ ಮನೆಗೆ ಹೋಗುತ್ತಿದ್ದರು. ಮೂರು ಮಂದಿ ದ್ವಿಚಕ್ರ ವಾಹನದಲ್ಲಿ ಬಂದು ಬಾಲಕರ ಬಳಿ ಬೈಕ್ ನಿಲ್ಲಿಸಿದ್ದಾರೆ. ಈ ಸಂದರ್ಭ ಗೋಣಿ ಮುಸುಕು ಹಾಕಿ ಬಾಲಕರನ್ನು ಹಿಡಿಯಲು ಯತ್ನಿಸಿದ್ದಾರೆ. ಹಿಂದಿನಿಂದ ಬಾಲಕರ ಮನೆಯವರು ಬರುತ್ತಿರುವುದನ್ನು ನೋಡಿ ಅಪಹರಣಕಾರರು ದ್ವಿಚಕ್ರ ವಾಹನ ಏರಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಗುರುವಾರ ಕೊಂಚಾಡಿ ಸುತ್ತಮುತ್ತಲಿನ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ್ದು, ಅದರಲ್ಲಿ ದ್ವಿಚಕ್ರ ವಾಹದಲ್ಲಿ ಬಂದು ಮಕ್ಕಳ ತಲೆಗೆ ಗೋಣಿ ಮುಸುಕು ಹಾಕುವ ದೃಶ್ಯ ದಾಖಲಾಗಿದೆ.

ದ್ವಿಚಕ್ರ ವಾಹನದಲ್ಲಿ ದುಷ್ಕರ್ಮಿಗಳು ಬಂದು ಮೂವರು ಬಾಲಕರನ್ನು ಅಪಹರಣಕ್ಕೆ ಯತ್ನಿಸಿದ್ದಾರೆ ಎನ್ನುವುದು ಆರಂಭದಲ್ಲಿ ವದಂತಿಯಾಗಿತ್ತು. ಮಕ್ಕಳು ಯಾವುದೋ ಕಾರಣಕ್ಕೆ ಸುಳ್ಳು ಹೇಳುತ್ತಿದ್ದಾರೆ ಎಂದು ನಂಬಲಾಗಿತ್ತು. ಸಿಸಿ ಕ್ಯಾಮರಾದಲ್ಲಿ ದಾಖಲಾದ ದೃಶ್ಯ ಘಟನೆಗೆ ಸಾಕ್ಷಿಯಾಗಿದೆ. ಪೊಲೀಸರು ಕೂಡ ಚುರುಕಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಡಿಸಿಪಿ ಹರಿರಾಂ ಶಂಕರ್, ಕಂಕನಾಡಿ ಇನ್‌ಸ್ಪೆಕ್ಟರ್ ಅಶೋಕ್ ಹಾಗು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಾಲಕರಿಂದ ಘಟನೆಗೆ ಸಂಬಂಧಿಸಿ ಮಾಹಿತಿ ಪಡೆದರು.

ಕಿಡಿಗೇಡಿಗಳ ಕೃತ್ಯ: ಕೊಂಚಾಡಿಯಲ್ಲಿ ಬಾಲಕ ಅಪಹರಣ ಪ್ರಕರಣ ಕಿಡಿಗೇಡಿಗಳು ನಡೆಸಿರುವ ಕೃತ್ಯವೆಂದು ಪ್ರಾಥರ್ಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ನಗರ ಕಾನೂನು ಸುವ್ಯವಸ್ಥಾ ವಿಭಾಗದ ಡಿಸಿಪಿ ಹರಿರಾಂ ಶಂಕರ್ ತಿಳಿಸಿದರು.

ಆರೋಪಿಗಳು ಕುಡಿದು, ಗಾಂಜಾ ಸೇವನೆ ಮಾಡಿ ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ. ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿ ರಸ್ತೆ ಬದಿ ಬಿದ್ದಿದ್ದ ಗೋಣಿ ಚೀಲ ಹೆಕ್ಕಿದ ಆರೋಪಿಗಳು ಅದನ್ನು ಬೀಸಿಕೊಂಡೇ ಸಾಗಿದ್ದಾರೆ. ಒಂದೆರಡು ಕಡೆ ಬೇರೆ ಮಕ್ಕಳಿಗೂ ಇದೇ ರೀತಿ ಮುಸುಕು ಹಾಕಲು ಪ್ರಯತ್ನ ಪಟ್ಟ ಮಾಹಿತಿ ಸಿಕ್ಕಿದೆ. ಇದು ಮಾತ್ರವಲ್ಲದೆ ಬಾಲಕರ ಅಪಹರಣ ಯತ್ನ ವೇಳೆ ಆರೋಪಿಗಳು ತಮಾಷೆಯಲ್ಲಿ ನಗುತ್ತಿದ್ದರು. ಇದರಿಂದ ಯಾವುದೋ ಉದ್ದೇಶದಿಂದ ನಡೆಸಿದ ಕಿಡಿಗೇಡಿಗಳ ಕೃತ್ಯ ಎಂದು ತಿಳಿಸಿದ್ದಾರೆ.

ಪ್ರಶಂಸೆಗೆ ಪಾತ್ರನಾದ ಬಾಲಕ: ಮೂವರು ಬಾಲಕರು ನಡೆದುಕೊಂಡು ಹೋಗುತ್ತಿದ್ದಾಗ ಅಪಹರಣ ಯತ್ನ ನಡೆದಿದ್ದು, ಓರ್ವ ಬಾಲಕನ ತಲೆಗೆ ಮುಸುಕು ಹಾಕುವಾಗ ಜತೆಗಿದ್ದ ಬಾಲಕ ಧೈರ್ಯದಿಂದ ಅವರ ಮೇಲೆ ಕಲ್ಲು, ಮಣ್ಣಿನಿಂದ ದಾಳಿ ನಡೆಸಿದ್ದಾನೆ. ಇದರಿಂದ ಕಂಗೆಟ್ಟ ಆರೋಪಿಗಳು ತಕ್ಷಣ ಪರಾರಿಯಾಗಿದ್ದಾರೆ. ಬಾಲಕನ ಧೈರ್ಯಕ್ಕೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.

ಅಳಕೆಯಲ್ಲಿ ಮಹಿಳೆ ವಶಕ್ಕೆ

ಮಂಗಳೂರಿನ ಅಳಕೆಯಲ್ಲಿ ಮಹಿಳೆಯೊಬ್ಬರು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ಮಕ್ಕಳ ಅಪಹರಣದ ವದಂತಿ ಹಬ್ಬಿ ಸ್ಥಳೀಯರು ಗದರಿಸಿ, ಪೊಲೀಸರಿಗೊಪ್ಪಿಸಿದ್ದಾರೆ.

ಈ ಮಹಿಳೆಯು ಉತ್ತರ ಭಾರತದವರಾಗಿದ್ದು, ಅಳಕೆ ಪರಿಸರದಲ್ಲಿ ಗುಜರಾತಿ ಮೂಲದವರ ಮನೆಗಳಿಗೆ ತೆರಳಿ ಹಣ ಕೇಳುತ್ತಿದ್ದರು ಎಂದು ತಿಳಿದುಬಂದಿದೆ. ಬುಧವಾರ ಆಟವಾಡುತ್ತಿದ್ದ ಮಕ್ಕಳ ಫೋಟೊ ತೆಗೆದು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿತ್ತು. ಈ ಬಗ್ಗೆ ಯಾರೂ ಲಿಖಿತವಾಗಿ ದೂರು ನೀಡದ ಕಾರಣ ಬಂದರು ಠಾಣೆ ಪೊಲೀಸರು ಮಹಿಳೆಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.

ಬಾಲಕರ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಸಿಸಿಟಿವಿ ಫೂಟೇಜ್‌ಗಳು ಲಭಿಸಿವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ, ಶೀಘ್ರವಾಗಿ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ.
-ಹರಿರಾಂ ಶಂಕರ್,
ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News