ಸಹಕಾರಿ ಬ್ಯಾಂಕ್ ಸ್ವಾವಲಂಭಿ ಬದುಕು ರೂಪಿಸಲು ಸಹಕಾರಿ : ಡಾ. ರಾಜೇಂದ್ರ ಕುಮಾರ್

Update: 2021-01-14 18:00 GMT

ಪುತ್ತೂರು : ಗ್ರಾಮೀಣ ಮಟ್ಟದಲಿ ಸಹಕಾರಿ ಸಂಘಗಳಿಗೆ ಆದ್ಯತೆ ನೀಡುವುದು ಮತ್ತು ಜನರ ಕಷ್ಟಗಳಲ್ಲಿ ಭಾಗಿಯಾಗುವುದು ಅವರಿಗೆ ಸ್ವಾವಲಂಭಿ ಬದುಕು ರೂಪಿಸುವುದು ಸಹಕಾರಿ ಬ್ಯಾಂಕ್‍ನ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ `ಜನರ ಬಳಿಗೆ ನಮ್ಮ ಬ್ಯಾಂಕ್ ಅಭಿಯಾನ' ಹಮ್ಮಿಕೊಳ್ಳಲಾಗಿದೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಡಾ. ಎನ್. ರಾಜೇಂದ್ರ ಕುಮಾರ್ ಹೇಳಿದರು.

ಅವರು ಗುರುವಾರ ಅಪರಾಹ್ನ ಪುತ್ತೂರು ಕೊಂಬೆಟ್ಟು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ವತಿಯಿಂದ ನಡೆಯಲಿರುವ `ಜನರ ಬಳಿಗೆ ನಮ್ಮ ಬ್ಯಾಂಕ್ ಅಭಿಯಾನ'ದ  ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವು ವಾಣಿಜ್ಯ ಬ್ಯಾಂಕ್‍ಗಳು ಹುಟ್ಟಿದ ಬ್ಯಾಂಕ್‍ಗಳ ತವರೂರಾಗಿದ್ದು, ಇಲ್ಲಿ ಸಹಕಾರಿ ಕ್ಷೇತ್ರ ಬಲಾಡ್ಯವಾಗಿದೆ. ಸಾಕಷ್ಟು ಸೌಲಭ್ಯಗಳಿಲ್ಲದೆ ಆರಂಭಗೊಂಡಿದ್ದ ಇಲ್ಲಿನ ಸಹಕಾರಿ ಸಂಘಗಳು ಇಂದು ಹಲವಾರು ತಾಂತ್ರಿಕತೆ ಯೊಂದಿಗೆ ಎತ್ತರವಾಗಿ ಬೆಳೆದಿದ್ದು, ವಾಣಿಜ್ಯ ಬ್ಯಾಂಕ್‍ಗಳಿಗೆ ಸಮಾನವಾಗಿ ಬೆಳೆದು ಬಂದಿದೆ. ಇದೀಗ ಸಹಕಾರಿ ಬ್ಯಾಂಕ್‍ಗಳ ಬಗ್ಗೆ ಇನ್ನಷ್ಟು ಅರಿವು ಮೂಡಿಸುವ ಉದ್ದೇಶದಿಂದ ಜನರ ಬಳಿಕ ಬ್ಯಾಂಕ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು. 

ನಾವು ಜನರ ಹೆಸರಿನಲ್ಲಿ ಕೆಲಸ ಮಾಡುತ್ತೇವೆ ಹೊರತು ದೇವರ ಹೆಸರಿನಲಲ್ಲ. ನಮ್ಮ ಸಂಘದಲ್ಲಿರುವ ಸದಸ್ಯರು ರಾಮ, ಏಸು, ಅಲ್ಲಾ ಎಲ್ಲರನ್ನೂ ಒಳಗೊಂಡವರಾಗಿದ್ದಾರೆ. ಜಾತಿ, ಧರ್ಮಗಳ ಬೇಧವಿಲ್ಲದೆ ಎಲ್ಲರೂ ಸ್ವಾವಲಂಭಿ ಬದುಕು ರೂಪಿಸಿಕೊಳ್ಳಲು ಬೇಕಾದ ಸೌಲಭ್ಯಗಳನ್ನು ನಮ್ಮ ಬ್ಯಾಂಕ್‍ಗಳ ಮೂಲಕ ನೀಡಲಾಗುತ್ತಿದ್ದು, ಇದರಿಂದ ಮಹಿಳೆಯರು ಸೇರಿದಂತೆ ಎಲ್ಲರೂ ಆರ್ಥಿಕವಾಗಿ ಸಬಲೀಕರಣವಾಗಲು ಸಹಕಾರಿಯಾಗಿದೆ ಎಂದರು.

ಸಹಕಾರಿ ಕ್ಷೇತ್ರವು ಲಾಭ ಮಾಡುವುದಕ್ಕಿರುವುದಲ್ಲ. ಬದಲಿಗೆ ಸೇವಾ ಕ್ಷೇತ್ರವಾಗಿ ಕೆಲಸ ಮಾಡುತ್ತಿದೆ ಎಂದ ಅವರು ಸಹಕಾರಿ ಬ್ಯಾಂಕ್‍ಗಳ ಸೇವೆಯನ್ನು ವಾಣಿಜ್ಯ ಬ್ಯಾಂಕ್‍ಗಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ. 106 ವರ್ಷಗಳ ಹಿಂದೆ ಮೊಳಹಳ್ಳಿ ಶಿವರಾಯ ರಿಂದ ಸ್ಥಾಪನೆಗೊಂಡು ಸಹಕಾರಿ ಬ್ಯಾಂಕ್ ಇಂದು ಜನರ ಬ್ಯಾಂಕ್ ಆಗಿ ಬೆಳೆದಿದೆ. ಗ್ರಾಹಕರೇ ಈ ಬ್ಯಾಂಕ್‍ನ ಆಸ್ತಿಯಾಗಿದ್ದಾರೆ ಹೊರತು ಕಟ್ಟಡಗಳಲ್ಲ ಎಂದ ಅವರು ಜನರ ಬಳಿಗೆ ಬ್ಯಾಂಕ್ ಅಭಿಯಾನವು ಮಾರ್ಚ್ ಅಂತ್ಯದ ತನಕ ನಡೆಯಲಿದೆ ಎಂದರು. 

ಕೊರೋನ ಸಂದರ್ಭದಲ್ಲಿ ಬ್ಯಾಂಕ್‍ನ ವತಿಯಿಂದ ಜನರಿಗೆ ಹಲವಾರು ಸಹಕಾರಗಳನ್ನು ನೀಡಲಾಗಿದೆ. ಇದೀಗ ರೈತರ ಅನುಕೂಲಕ್ಕಾಗಿ ದಾವಣಗೆರೆಯಲ್ಲಿ ಯೂರಿಯಾ ತಯಾರಿ ಕಾರ್ಖಾನೆ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕ್ ಕ್ಷೇತ್ರದಲ್ಲಿ ಪುತ್ತೂರು ಪ್ರಯೋಗಶೀಲವಾಗಿದ್ದು, ಬಹುತೇಕ ಬ್ಯಾಂಕ್‍ಗಳು ಪುತ್ತೂರಿನಿಂದಲೇ ಆರಂಭಗೊಂಡಿದೆ. ನಾನು ಎಲ್ಲರಿಗಾಗಿ, ಎಲ್ಲರೂ ನನಗಾಗಿ ಮತ್ತು ಎಲ್ಲರೂ ಎಲ್ಲರಿಗಾಗಿ ಎನ್ನುವ ಸಹಕಾರಿ ತತ್ವವನ್ನು ಜಿಲ್ಲಾ ಸಹಕಾರಿ ಬ್ಯಾಂಕ್ ಸಾಕಾರಗೊಳಿಸಿದೆ ಎಂದರು.

ಜನರ ಬಳಿಗೆ ಬ್ಯಾಂಕ್ ಅಭಿಯಾನ ಎಂಬುದು ಗ್ರಾಹಕ ದೇವೋಭವ ಕಾರ್ಯಕ್ರಮವಾಗಿದ್ದು, ಗ್ರಾಹಕರನ್ನು ದೇವರೆಂದು ಬಗೆಯುವ ಬ್ಯಾಂಕ್‍ಗಳು ನಿರಂತರ ಅಭಿವೃದ್ಧಿಯನ್ನು ಸಾಧಿಸಲಿದೆ ಎಂದು ಹೇಳಿದರು.

ನೂತನ ಸ್ವಸಹಾಯ ಗುಂಪುಗಳನ್ನು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಉದ್ಘಾಟಿಸಿದರು. ಸಾಲಪತ್ರವನ್ನು ಮತ್ತು ವಿಮಾ ಆಧಾರಿತ ಸಂಚಯ ಖಾತೆಯನ್ನು ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ರಾಜಶೇಖರ್ ಜೈನ್ ವಿತರಿಸಿದರು.

ಸಂಚಯ ಖಾತೆಯನ್ನು ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಜಯರಾಮ ರೈ ಬಳಜ್ಜ ಉದ್ಘಾಟಿಸಿದರು. ಠೇವಣಿ ಪತ್ರವನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ವಿತರಿಸಿದರು. ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮತ್ತು ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ರಾಜಶೇಖರ್ ಜೈನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಶ್ರೀರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ನವೋದಯ ಟ್ರಸ್ಟ್‍ನ ಕಾರ್ಯದರ್ಶಿ ಪೂರ್ಣಿಮಾ ಶೆಟ್ಟಿ ಉಪಸ್ಥಿತರಿದ್ದರು. 

ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕೇಂದ್ರ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ ವಂದಿಸಿದರು. ಸಂತೋಷ್ ಕುಮಾರ್ ಮರಕ್ಕಡ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News