ವೆಲ್ಫೇರ್ ಪಾರ್ಟಿ ಯಿಂದ ‘ರೈತರ ಭದ್ರತೆ, ದೇಶದ ಸುಭದ್ರತೆ’ ಜನ ಜಾಗೃತಿ ಅಭಿಯಾನ

Update: 2021-01-14 18:07 GMT

ಭಟ್ಕಳ :  ದೇಶದಲ್ಲಿ ನಡೆಯುತ್ತಿರುವ ರೈತಪರ ಹೋರಾಟಕ್ಕೆ ಶಕ್ತಿ ತುಂಬಲು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಸಮಿತಿಯು ರಾಜ್ಯಾದ್ಯಂತ ‘ರೈತರ ಭದ್ರತೆ, ದೇಶದ ಸುಭದ್ರತೆ’  ಘೋಷಣೆಯೊಂದಿಗೆ ಜನ ಜಾಗೃತಿ ಅಭಿಯಾನ ನಡೆಸುತ್ತಿದೆ ಎಂದು ರಾಜ್ಯಾಧ್ಯಕ್ಷ ನ್ಯಾಯವಾದಿ ತಾಹಿರ್ ಹುಸೈನ್ ಹೇಳಿದರು.

ಅವರು ಗುರುವಾರ ಭಟ್ಕಳದ ಕಾರಗದ್ದೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. 

ರಾಜ್ಯದ ಸಂಸದರು ಹಾಗೂ ಶಾಸಕರ ಕಾರ್ಯಲಯ, ಮನೆಗಳ ಮುಂದೆ ಧರಣಿ, ಪ್ರತಿಭಟನೆ ನಡೆಸುವುದು, ಕೃಷಿ ಕಾಯ್ದೆ ಕುರಿತಂತೆ ರೈತ ಹಾಗೂ ಜನಸಾಮಾನ್ಯನ ಮೇಲಾಗುವ ಪರಿಣಾಮಗಳನ್ನು ಚರ್ಚೆ, ಸಂವಾದಗಳ ಮೂಲಕ ವಿವರಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದ ಅವರು, ದೇಶದ ಕೃಷಿ ವಲಯವು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಇಂದು ರೈತರು ಬೆಳೆದ ಬೆಳೆಗಳಿಗೆ ಸೂಕ್ತ ನಿಗದಿತ ಬೆಲೆ ಮತ್ತು ಮಾರುಕಟ್ಟೆ ಇಲ್ಲ. ನೀರಾವರಿ ಸೌಲಭ್ಯ, ಬಿತ್ತನೆ ಬೀಜ, ರಸಗೊಬ್ಬರ, ವಿದ್ಯುತ್ ಪೂರೈಕೆ, ದಾಸ್ತಾನು ಕೊಠಡಿ, ಸಾಲಸೌಲಭ್ಯ , ತಂತ್ರಜ್ಞಾನಗಳು ಸರಿಯಾಗಿ ದೊರಕದೆ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಉತ್ತರಕನ್ನಡ ಜಿಲ್ಲಾಧ್ಯಕ್ಷ ಡಾ.ನಸೀಂ ಖಾನ್,  ರಾಜ್ಯ ಸಮಿತಿ ಸದಸ್ಯ ಯುನೂಸ್ ರುಕ್ನುದ್ದೀನ್, ಪ್ರಧಾನ ಕಾರ್ಯದರ್ಶಿ ಆಸಿಫ್ ಶೇಕ್, ಉಪಾಧ್ಯಕ್ಷ ಶೌಕತ್ ಕತೀಬ್, ಕಾರ್ಯದರ್ಶಿ ಇಬ್ರಾಹೀಮ್ ಶೇಖ್, ಅಬ್ದುಲ್ ಜಬ್ಬಾರ್ ಅಸದಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News